Advertisement

ದೇವರ ಕೃಪೆಯಿಂದ ಮುಖ್ಯಮಂತ್ರಿ ಪಟ್ಟ : ಎಚ್‌ಡಿಕೆ

01:02 PM May 23, 2018 | Team Udayavani |

ಬೆಳ್ತಂಗಡಿ: ಜನತೆಯ ಆಶೀರ್ವಾದ ನನ್ನ ಪಕ್ಷ ಹಾಗೂ ನನಗೆ ಸಂಪೂರ್ಣವಾಗಿ ಇರದಿದ್ದರೂ ಅಜ್ಜ- ಅಜ್ಜಿ, ತಂದೆ-ತಾಯಿಯ ಕಾಲದಿಂದಲೂ ನಂಬಿಕೊಂಡು ಬರುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಕೃಪೆಯಿಂದ ನಾಡಿನ ನಾಯಕನ ಜವಾಬ್ದಾರಿ ನಿರ್ವಹಿಸುವ ಅವಕಾಶ ಲಭಿಸಿದೆ ಎಂದು ನಿಯೋಜಿತ ಮುಖ್ಯ ಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

Advertisement

ಅವರು ಮಂಗಳವಾರ ಪತ್ನಿ ಸಮೇತ ಶ್ರೀ ಕ್ಷೇತ್ರ ಧರ್ಮಸ್ಥಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಾಂಗ್ರೆಸ್‌ ನಾಯಕರು ಪ್ರಣಾಳಿಕೆ ಘೋಷಣೆ ಮಾಡಿದ್ದಾರೆ. ಜೆಡಿಎಸ್‌ನಿಂದಲೂ ಹಲವು ಕಾರ್ಯಕ್ರಮಗಳ ಘೋಷಣೆ ಆಗಿದೆ. ಜನತೆಯ ಮೇಲೆ ಹೆಚ್ಚಿನ ತೆರಿಗೆ, ಸಾಲದ ಹೊರೆ ಹೊರಿ ಸದೆ ಐದು ವರ್ಷಗಳ ಕಾಲ ಕಾಂಗ್ರೆಸ್‌ ನಾಯಕರ, ಮುಖಂಡರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತೇನೆ. ನಾಡಿನ ಜನತೆ ನೆಮ್ಮದಿ ಮತ್ತು ಸ್ವಾಭಿಮಾನದಿಂದ ಬದುಕಲು ಕೆಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂದರು.

ಧರ್ಮಸ್ಥಳದಲ್ಲಿ ಸಂಕಲ್ಪ
ಮುಂದಿನ ಐದು ವರ್ಷಗಳ ಕಾಲ ಉತ್ತಮ ಆಡಳಿತ ನೀಡುವುದಾಗಿ ಶ್ರೀ ಕ್ಷೇತ್ರ ದಲ್ಲಿ ಸಂಕಲ್ಪ ಮಾಡಿದ್ದೇನೆ. ನಾಡಿನ ಸುಭಿಕ್ಷೆಗಾಗಿ ಮುಂದಿನ ದಿನಗಳನ್ನು ಸಂಪೂರ್ಣ ಮೀಸಲಿಡಲಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

ಮಾಧ್ಯಮಗಳಿಂದ ಗೊಂದಲ
ಇಲ್ಲಿಯವರೆಗೆ ಮಂತ್ರಿಮಂಡಲ ರಚನೆ, ಮಂತ್ರಿಮಂಡಲ ರೂಪುರೇಷೆ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಕೆಲವು ಮಾಧ್ಯಮಗಳೇ ಖಾತೆ ಹಂಚಿಕೆ ಬಗ್ಗೆ ವದಂತಿ ಸೃಷ್ಟಿಸುತ್ತಿವೆ ಎಂದರು.

Advertisement

ಬಿಜೆಪಿ ಇದು ಮೂರು ತಿಂಗಳ ಸರಕಾರ ಎನ್ನುತ್ತಿದೆ. ಎಲ್ಲವೂ ದೈವೇಚ್ಛೆ. ಎಲ್ಲ ವನ್ನೂ ಮಂಜುನಾಥ ಸ್ವಾಮಿ ನಿರ್ಣಯ ಮಾಡುತ್ತಾನೆ ಎಂದರು.

ಎಚ್‌ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ, ಜೆಡಿಎಸ್‌ ಜಿಲ್ಲಾಧ್ಯಕ್ಷ ಮಹಮ್ಮದ್‌ ಕುಂಞಿ, ಉಪಾಧ್ಯಕ್ಷ ಜಗನ್ನಾಥ್‌, ರಾಜ್ಯ ಮುಖಂಡ ಎಂ.ಬಿ. ಸದಾಶಿವ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಸುಮತಿ ಎಸ್‌. ಹೆಗ್ಡೆೆ, ಯುವ ಜೆಡಿಎಸ್‌ ಜಿಲ್ಲಾಧ್ಯಕ್ಷ ಅಕ್ಷಿತ್‌ ಸುವರ್ಣ, ತಾಲೂಕು ಅಧ್ಯಕ್ಷ ಪ್ರವೀಣ್‌ಚಂದ್ರ ಜೈನ್‌, ಸೂರಜ್‌, ರಾಜಶ್ರೀ ಎಸ್‌. ಹೆಗ್ಡೆ ಉಪಸ್ಥಿತರಿದ್ದರು.

ಎತ್ತಿನಹೊಳೆ: ಅಡ್ಡಗೋಡೆ ಮೇಲೆ ದೀಪ
ಎತ್ತಿನಹೊಳೆ ಯೋಜನೆ ಬಗ್ಗೆ ಗಮನ ಸೆಳೆದಾಗ, ಅದನ್ನು ತಡೆಯುವ ಬಗ್ಗೆ ಎಂದೂ ಹೇಳಿಕೆ ನೀಡಿಲ್ಲ. ಯೋಜನೆಯಲ್ಲಿ ಅನ್ಯಾಯ, ಅಕ್ರಮವಾಗಿದ್ದರೆ ಅದನ್ನು ತಡೆಗಟ್ಟುವುದಾಗಿ ಭರವಸೆ ನೀಡಲಾಗಿದೆ. ಯಾವುದೇ ಪ್ರದೇಶದ ಪ್ರಕೃತಿ ನಾಶವಾಗುವಂತಹ ಯೋಜನೆ ರೂಪಿಸುವುದಿಲ್ಲ ಎಂದು ಎಚ್‌ಡಿಕೆ ಪ್ರತಿಕ್ರಿಯಿಸಿದರು.

“ಅಪವಿತ್ರ’ ಪ್ರಶ್ನೆ ಬರುವುದಿಲ್ಲ
ಕಾಂಗ್ರೆಸ್‌ ಜತೆ ಕೈಜೋಡಿಸಿರುವುದು ಅಪವಿತ್ರ ಎಂದು ಕೆಲವರು ಆಡಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರ ರಚಿಸುವ ಕಾರ್ಯ ಶಾಸಕರ ಸಂಖ್ಯೆ ಆಧಾರದಲ್ಲಿ ನಡೆಯುತ್ತದೆ. ಇಲ್ಲಿ ಪವಿತ್ರ -ಅಪವಿತ್ರ ಪ್ರಶ್ನೆ ಬರುವುದಿಲ್ಲ. ಜನತೆಯ ಪ್ರತಿಕ್ರಿಯೆ ಗಮನಿಸಿದ್ದೇನೆ. ಜನತೆಗೆ ಕೆಲವು ಪಕ್ಷಗಳ ಬಗ್ಗೆ ವ್ಯಾಮೋಹ ಇರುತ್ತದೆ, ಅದು ತಪ್ಪಲ್ಲ. ಆದರೆ ಅದನ್ನು ಬದಲಿಸಿಕೊಂಡು ದೇಶ ಕಟ್ಟುವ ಕೆಲಸ ಮಾಡಲಿ ಎಂದು ಎಚ್‌ಡಿಕೆ ಮನವಿ ಮಾಡಿದರು.

ಸ್ವಾಗತಿಸಲು ಜನಜಂಗುಳಿ
ಶ್ರೀ ಕ್ಷೇತ್ರ ಧರ್ಮಸ್ಥಳದ ವಸಂತ ಮಹಲ್‌ ಹೆಲಿಪ್ಯಾಡ್‌ಗೆ ಕುಮಾರಸ್ವಾಮಿ ದಂಪತಿ  ಮಂಗಳವಾರ ಬೆಳಗ್ಗೆ ಹೆಲಿಕಾಪ್ಟರ್‌ ಮೂಲಕ ಆಗಮಿಸಿದಾಗ ಶ್ರೀ ಕ್ಷೇತ್ರದ ಪರವಾಗಿ ಡಿ. ಹಷೇìಂದ್ರ ಕುಮಾರ್‌, ಜೆಡಿಎಸ್‌ ಮುಖಂಡರು, ಕಾಂಗ್ರೆಸ್‌ ಮುಖಂಡರು, ಅಧಿಕಾರಿಗಳು, ಅಭಿಮಾನಿಗಳು ಸ್ವಾಗತಿಸಿದರು. ಹೆಲಿಕಾಪ್ಟರ್‌ ಇಳಿದ ತತ್‌ಕ್ಷಣ ಸ್ವಾಗತಕ್ಕೆ ಎಲ್ಲರೂ ಆತುರ ತೋರಿದ್ದರಿಂದ ಸ್ವಲ್ಪಕಾಲ ಗೊಂದಲ ಉಂಟಾಯಿತು. ನಿಯಂತ್ರಣಕ್ಕೆ ಪೊಲೀಸ್‌ ಸಿಬಂದಿ ಪರದಾಡುವಂತಾಯಿತು.

ಹೆಗ್ಗಡೆಯವರಿಗೆ ಸನ್ಮಾನ
ಬೆಳಗ್ಗೆ 9.30ರ ಸುಮಾರಿಗೆ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಎಚ್‌ಡಿಕೆ ಆಗಮಿಸಿದರು. ಬಳಿಕ ದೇವರ ದರ್ಶನ ಪಡೆದು, ಧರ್ಮಸ್ಥಳ ಬೀಡಿನಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವ ರನ್ನು ಭೇಟಿಯಾಗಿ, ಸಮ್ಮಾನಿಸಿ ಆಶೀರ್ವಾದ ಪಡೆ ದರು. ಹೆಗ್ಗಡೆ ಯವರು ಎಚ್‌ಡಿಕೆ ಅವರನ್ನು ಗೌರವಿಸಿದರು. ಬಳಿಕ ಸನ್ನಿಧಿ ವಸತಿ ಗೃಹಕ್ಕೆ ತೆರಳಿ ಮುಖಂಡರೊಂದಿಗೆ ಮಾತುಕತೆ ನಡೆಸಿ ದರು. 11 ಗಂಟೆ ಸುಮಾರಿಗೆ ಶೃಂಗೇರಿಗೆ ಪ್ರಯಾಣ ಬೆಳೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next