ಬಸವಕಲ್ಯಾಣ: ಜೀವ ಇದ್ದಲ್ಲಿ ದೇವರು ಇದ್ದಾನೆ ಎಂಬ ಸದ್ಭಾವನೆ ತೋರಿಸಿ ಕೊಟ್ಟವರು ವಿಶ್ವಗುರು ಬಸವಣ್ಣನವರು. ಹಾಗಾಗಿ ನಿರ್ಜೀವ ವಸ್ತುಗಳಲ್ಲಿ ದೇವರ ಕಾಣುವುದನ್ನು ಬಿಟ್ಟು, ಹಿರಿಯ ವ್ಯಕ್ತಿಗಳನ್ನು ಪೂಜಿಸುವ ಮತ್ತು ಗೌರವಿಸುವ ಮೂಲಕ ದೇವರನ್ನು ಕಾಣಬೇಕು ಎಂದು ಇಳಕಲ್ಲ ಚಿತ್ತರಗಿ ವಿಜಯಮಹಾಂತೇಶ್ವರ ಮಠದ ಶ್ರೀ ಗುರುಮಹಾಂತ ಅಪ್ಪಗಳು ಹೇಳಿದರು.
ನಗರದ ಅನುಭವ ಮಂಟಪ ಆವರಣದಲ್ಲಿ 39ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದ ಎರಡನೇ ದಿನವಾದ ಸೋಮವಾರ ನಡೆದ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದಲ್ಲಿ ಅವರು ಅನುಭಾವ ಮಾತಗಳನ್ನು ಆಡಿದರು. ನಾವು ಮೂಢನಂಬಿಕೆ ನಂಬಿದರೆ ಎಂದಿಗೂ ಉದ್ಧಾರವಾಗುವುದಿಲ್ಲ. ಆದ್ದರಿಂದ 12ನೇ ಶತಮಾನದ ವಿಶ್ವಗುರು ಬಸವಣ್ಣನವರ ವಚನಗಳ ಆಧಾರದ ಮೇಲೆ ನಾವು ಮುಂದೆ ಸಾಗಬೇಕಾಗಿದೆ ಎಂದು ನುಡಿದರು.
ವಿಶ್ವ ಬಸವ ಧರ್ಮ ಟ್ರಸ್ಟ್ ಅನುಭವ ಮಂಟಪ ಅಧ್ಯಕ್ಷ ಡಾ|ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬೀದರ ಜಿಲ್ಲಾದ್ಯಂತ ಪ್ರವಚನ, ಲಿಂಗಪೂಜೆ, ದೀಕ್ಷೆ ಮತ್ತು ಸಾಮೂಹಿಕ ಲಿಂಗ ಪೂಜೆಯನ್ನು ಶ್ರೀ ನಿರಂಜನ ಸ್ವಾಮಿಗಳು ನಿಸ್ವಾರ್ಥದಿಂದ ಮಾಡುತ್ತಿದ್ದಾರೆ ಎಂದರು.
ಶರಣ-ಶರಣೆಯರು ನಸುಕಿನ ಸಮಯದಲ್ಲಿ ಲಿಂಗ ಪೂಜೆ ಮಾಡುವ ರೂಢಿ ಹಾಕಿಕೊಳ್ಳಬೇಕು. ಹಾಗೂ ಮನೆ ಕಟ್ಟುವಾಗ ಲಿಂಗ ಪೂಜೆ ಮಾಡಲು ಗಾಳಿ, ಬೆಳಕು ಬರುವಂತೆ ವಿಶೇಷವಾದ ಕೋಣೆ ನಿರ್ಮಿಸಬೇಕು ಎಂದು ಹೇಳಿದರು. ಬಸವಾದಿ ಪ್ರಥಮರು ಇಷ್ಟಲಿಂಗ ಪೂಜೆ ಮಾಡುತ್ತ ಮಾನವ ಮಹಾದೇವನಾಗುವ ಮಾರ್ಗವನ್ನು ಲೋಕಕ್ಕೆ ತೋರಿಸಿದವರು ಎಂದರು.
ಶ್ರೀ ಶಿವಾನಂದ ಮಹಾಸ್ವಾಮಿಗಳು, ಸಿದ್ಧರಾಮೇಶ್ವರ ಪಟ್ಟದ್ದೇವರು, ಸಚ್ಚಿದಾನಂದ ಮಹಾಸ್ವಾಮಿಗಳು, ಮಹಾಲಿಂಗ ಸ್ವಾಮಿಗಳು, ಸಂಗಮೇಶ್ವರ ಸ್ವಾಮಿಗಳು, ಗೋಣಿರುದ್ರ ಸ್ವಾಮಿಗಳು, ಬಸವಲಿಂಗ ಸ್ವಾಮಿಗಳು, ಶಿವಪ್ರಸಾದ ಸ್ವಾಮಿಗಳು, ಅಕ್ಕ ನಾಗಮ್ಮತಾಯಿ ಸೇರಿದಂತೆ ಮತ್ತಿತತರು ಇದ್ದರು.