Advertisement

ಬ್ಯಾಡಗಿ- ಮದುವೆ ಮೂಲ ಅರ್ಥ ಕಳೆದುಕೊಳ್ತಿದೆ: ಸ್ವಾಮೀಜಿ

05:29 PM May 11, 2024 | Team Udayavani |

■ ಉದಯವಾಣಿ ಸಮಾಚಾರ
ಬ್ಯಾಡಗಿ: ಮದುವೆ ಎಂಬುದು ಪುರುಷ ಮತ್ತು ಮಹಿಳೆಯ ನಡುವಿನ ಸಾವಿರ ವರ್ಷಗಳ ಸಂಬಂಧ. ಆದರೆ ಇತ್ತೀಚಿನ
ದಿನಗಳಲ್ಲಿ ವಿಚ್ಛೇದನದ ಕಾರಣ ಕೇಳಿದರೆ ಇಂತಹದ್ದೊಂದು ಸೈದ್ಧಾಂತಿಕ ಪರಿಕಲ್ಪನೆ ತನ್ನ ಮೂಲ ಅರ್ಥವನ್ನು ಕಳೆದುಕೊಳ್ಳುತ್ತಿದೆ ಎಂದು ಗೌರೀಮಠದ ಶ್ರೀಗಳು ಖೇದ ವ್ಯಕ್ತಪಡಿಸಿದರು.

Advertisement

ಬಸವ ಜಯಂತಿ ಅಂಗವಾಗಿ ಮೋಟೆಬೆನ್ನೂರಿನಲ್ಲಿ ಅಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಮದುವೆ ಎನ್ನುವ ಬಂಧವು ಪ್ರೀತಿ, ಸಹನೆ, ಬೆಂಬಲ, ಸರಸ, ಸಲ್ಲಾಪ ಮತ್ತು ಸಾಮರಸ್ಯದೊಂದಿಗೆ
ಬಲವಾಗಿರಬೇಕು. ಹೀಗಾಗಿಯೇ ಮದುವೆ ಎಂಬುದು ಸ್ವರ್ಗದಲ್ಲೇ ನಿರ್ಧಾರವಾಗುತ್ತದೆ ಎಂಬ ಮಾತುಗಳು ವಿಶ್ವದೆಲ್ಲೆಡೆ
ಪ್ರಚಲಿತದಲ್ಲಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಮಂಟಪದಿಂದ ಮನೆಯನ್ನು ತಲುಪುವಷ್ಟರಲ್ಲಿ ಸಂಬಂಧಗಳು ಮರಿದು ಬೀಳುತ್ತಿರುವುದು ದುರದೃಷ್ಟಕರ ಎಂದರು.

ಕಠಿಣ ಸತ್ಯ ಹಿಡಿದಿಟ್ಟುಕೊಳ್ಳಿ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಯಶಸ್ವಿ ದಾಂಪತ್ಯಕ್ಕೆ ಯಾವುದೇ ರಹಸ್ಯವಿಲ್ಲ. ಇಬ್ಬರ ನಡುವಿನ ಪ್ರೀತಿಯಿಂದ ದಾಂಪತ್ಯ ಸಂಬಂಧಗಳು ಗಟ್ಟಿಯಾಗಿರುತ್ತದೆ. ಅದಕ್ಕೂ ಮುನ್ನ ಕೆಲವು ತಪ್ಪುಗ್ರಹಿಕೆಗಳಿಗೆ ಇಬ್ಬರೂ ಸೇರಿ ಪರಿಹಾರ ಕಂಡುಕೊಳ್ಳಬೇಕು. ಅದಾಗ್ಯೂ ಕೆಲ ಕಠಿಣ ಸತ್ಯಗಳನ್ನು ಹಿಡಿದಿಟ್ಟುಕೊಂಡಲ್ಲಿ ನಿಮ್ಮ ದಾಂಪತ್ಯ ಜೀವನ ಸುಗಮವಾಗಿ ಸಾಗಲಿದೆ. ಮಗುವನ್ನು ಹೊಂದುವುದು ಒತ್ತಡದ ವಿಷಯವಲ್ಲ. ಮಕ್ಕಳನ್ನು ಹೊಂದುವುದರಿಂದ ದಂಪತಿಗಳ ಜೀವನ ಬದಲಾವಣೆಯಾಗು‌ವುದು ಖಚಿತ ಎಂದರು.

ಮದುವೆ ಕಷ್ಟಕರವಲ್ಲ: ನಿವೃತ್ತ ಇಂಜಿನಿಯರ್‌ ಸಿ.ಆರ್‌.ಬಳ್ಳಾರಿ ಮಾತನಾಡಿ, ಮದುವೆಯು ಕಷ್ಟಕರವೆಂದು ಯಾರೊಬ್ಬರು ಸಹ ಯೋಚಿಸ ‌ಬಾರದು. ಮದುವೆಗಾಗಿ ಬೇರೊಬ್ಬರ ಬಳಿ ಸಾಲವನ್ನು ಮಾಡಿ ಅದರ ಹೊರೆಯನ್ನು ಕುಟುಂಬಸ್ಥರ ಮೇಲೆ ಹೇರುವುದು ಸರಿ ಯಾದ ಕ್ರಮವಲ್ಲ. ವಿವಿಧೆಡೆ ನಡೆಯುವಂಥ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುವಂತೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಧರ್ಮಗಳ ಒಟ್ಟು 33
ಜೋಡಿಗಳು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವೈವಾಹಿಕ ಜೀನವಕ್ಕೆ ಕಾಲಿರಿಸಿದರು.

ನಾಗರಾಜ ಆನ್ವೇರಿ,ವಿ.ಸಿ. ಹಾವೇರಿಮಠ, ಪುಟ್ಟನಗೌಡ್ರ ಪಾಟೀಲ, ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ನ್ಯಾಯವಾದಿಗಳಾದ ಬಸವರಾಜ ಬಳ್ಳಾರಿ, ಮೃತ್ಯುಂಜಯ ಲಕ್ಕಣ್ಣನವರ, ಮುಖಂಡರಾದ ಶಿವಕುಮಾರ ಪಾಟೀಲ, ಮಂಜುನಾಥ ಬೆನಕನಕೊಂಡ, ವಿಜಯಭರತ ಬಳ್ಳಾರಿ, ನಿಂಗಪ್ಪ ಅಂಗಡಿ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next