Advertisement
ಹೌದು, ಧಾರವಾಡದ ಸಾಂಪ್ರದಾಯಿಕ ಅಡುಗೆಗಳಿಗೆ ಪ್ರಸಿದ್ಧರಾದ ಹಿರಿಯ ಬಾಣಸಿಗ ವೀರಭದ್ರಪ್ಪ ಕಲ್ಲಪ್ಪ ಲಟ್ಟಿ ಎಂಬುವರು ಕಳೆದ ನಾಲ್ಕು ವರ್ಷಗಳಿಂದ ಸತತ ಪರಿಶ್ರಮ ಪಟ್ಟು ಕಡೆಗೂ ಗೋಧಿ ಹುಗ್ಗಿಯನ್ನು ಪ್ಯಾಕೇಟ್‌ನಲ್ಲಿ ಹಾಕಿ “ರೆಡಿ ಟು ಈಟ್’ ಮಾದರಿಯಲ್ಲಿ ಸಜ್ಜುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಬರೋಬ್ಬರಿ 50 ಲಕ್ಷ ರೂ. ಖರ್ಚು ಮಾಡಿ ಸತತ ಸಂಶೋಧನೆ ಮತ್ತು ತಂತ್ರಜ್ಞರ ಸಲಹೆ, ಸಹಕಾರ ಪಡೆದು ಆರು ಗಂಟೆಗಳ ಕಾಲ ಮಾಡುವ ಗೋಧಿ ಹುಗ್ಗಿಯನ್ನು ಕೇವಲ ಅರ್ಧ ಗಂಟೆಯಲ್ಲಿ ಸಜ್ಜುಗೊಳಿಸಿ ಊಟ ಮಾಡುವ ಹೊಸ ವಿಧಾನ ಕಂಡು ಹಿಡಿಯುವಲ್ಲಿ ಸಫಲರಾಗಿದ್ದಾರೆ.
Related Articles
Advertisement
ಏನಿದು ಗೋಧಿ ಹುಗ್ಗಿ? :
ಅಖಂಡವಾಗಿರುವ ಗೋಧಿ ಕಾಳುಗಳನ್ನು ನೆನೆಸಿ ಒಳಕಲ್ಲಿನಲ್ಲಿ ಕುಟ್ಟಿ, 4-6 ಗಂಟೆಗಳ ಕಾಲ ಕುದಿಸಿ ಅದಕ್ಕೆ ಬೆಲ್ಲ, ತುಪ್ಪ, ದ್ರಾಕ್ಷಿ, ಗೋಡಂಬಿ, ಕೇರು ಬೀಜ, ಖರ್ಜೂರ ಬೆರೆಸಿ ಮಿತ ದ್ರವ ಸ್ಥಿತಿಯಲ್ಲಿರುವಂತೆ ಮಾಡಿ ಸವಿಯುವುದೇ ಗೋಧಿಹುಗ್ಗಿ. ಉತ್ತರ ಕರ್ನಾಟಕ ಭಾಗದಲ್ಲಿ ಇದು ಪಾರಂಪರಿಕ ಆಹಾರ. ಮದುವೆ, ಸೀಮಂತ, ದೊಡ್ಡ ಕಾರ್ಯಕ್ರಮಗಳು, ಸಮಾವೇಶಗಳು ಸೇರಿದಂತೆ ಶುಭ ಸಂದರ್ಭಗಳಲ್ಲಿ ಸಾಮೂಹಿಕ ಭೋಜನಕ್ಕೆ ಗೋಧಿ ಹುಗ್ಗಿಯೇ ಇಲ್ಲಿ ಪ್ರಧಾನ ಸಿಹಿ ಆಹಾರ ಪದಾರ್ಥ. ಗೋಧಿಯನ್ನು ಒಡೆದು ರವೆ ಮಾಡಿ ಬೆಲ್ಲದ ಜತೆ ಸೇರಿಸಿದ ಸಿಹಿ ಪದಾರ್ಥಕ್ಕೆ ಹುಗ್ಗಿ ಎನ್ನಲಾಗುತ್ತದೆ. ಆದರೆ ಇದಕ್ಕಿಂತಲೂ ಅಖಂಡವಾಗಿ ಕುದಿಸಿದ ಗೋಧಿ ಹುಗ್ಗಿ ರುಚಿಯಲ್ಲಿ ಒಂದು ಕೈ ಮೇಲು.
ಪೌಷ್ಟಿಕತೆ ಕಣಜ :
ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ಬಯಲು ಸೀಮೆ, ಬೆಳವಲದ ನಾಡಿನಲ್ಲಿ ಗೋಧಿ ಹುಗ್ಗಿ ಎಂದರೆ ಅದು ಬರೀ ಆಹಾರವಷ್ಟೇ ಅಲ್ಲ, ಪೌಷ್ಟಿಕತೆಯ ಕಣಜ ಎನ್ನುವ ಪರಿಕಲ್ಪನೆ ಇದೆ. ಗೋಧಿ ಹುಗ್ಗಿಗೆ ತುಪ್ಪ, ಹಾಲು, ಗೋಡಂಬಿ, ದ್ರಾಕ್ಷಿ, ಬಾದಾಮಿ, ಒಣ ಕೊಬ್ಬರಿ, ಖರ್ಜೂರ ಸೇರಿದಂತೆ ಎಲ್ಲಾ ಪೋಷಕಾಂಶಗಳಿರುವ ಪದಾರ್ಥಗಳನ್ನೇ ಬಳಕೆ ಮಾಡಲಾಗುತ್ತದೆ. ಹೀಗಾಗಿ ಇದು ಬರೀ ಆಹಾರವಷ್ಟೇ ಅಲ್ಲ, ಪೌಷ್ಟಿಕ ಆಹಾರದ ಪಟ್ಟಿಯಲ್ಲಿದೆ. ಬೆಂಗಳೂರಿನ ವಿದ್ಯಾರ್ಥಿ ಭವನ ಮಸಾಲೆ ದೋಸೆ ವಿದೇಶಿ ವಿಮಾನವೇರಿದಾಗ ಹೊರ ದೇಶದಲ್ಲಿನ ಕನ್ನಡಿಗರು ಸಂಭ್ರಮಿಸಿದ್ದರು. ಇದೀಗ ಕನ್ನಡಿಗರ ಸಿಹಿ ಖಾದ್ಯವೊಂದು ವಿದೇಶಗಳಲ್ಲಿರುವವರ ಬಾಯಿ ಚಪ್ಪರಿಸಲು ಸಜ್ಜಾಗಿರುವುದು ವಿಶೇಷ
ಗೋಧಿ ಹುಗ್ಗಿ ತಂತ್ರಜ್ಞಾನದ ಕುರಿತು ಹೊರ ದೇಶಗಳಲ್ಲಿರುವ ಕನ್ನಡಿಗರು ಅದರಲ್ಲೂ ಉತ್ತರ ಕರ್ನಾಟಕದ ಕನ್ನಡಿಗರು ಹೆಚ್ಚು ಹರ್ಷ ವ್ಯಕ್ತಪಡಿಸಿದ್ದು, ಯುಎಸ್‌ಎ, ಹಾಂಗ್‌ಕಾಂಗ್, ಆಸ್ಟ್ರೇಲಿಯಾ, ಇಂಗ್ಲೆಂಡ್, ರಷ್ಯಾದಿಂದ ಬೇಡಿಕೆ ಬಂದಿದೆ. ದುಬೈ-2020 ಪ್ರದರ್ಶನದಲ್ಲಿ ಭಾಗವಹಿಸಲು ಆಹ್ವಾನ ಬಂದಿದೆ. ಕನ್ನಡದ ಸಿಹಿ ಆಹಾರವೊಂದನ್ನು ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತು ಸವಿಯುವಂತೆ ಮಾಡಬೇಕೆಂಬ ಕನಸು ನನಸಾಗಿದೆ. -ವೀರಭದ್ರಪ್ಪ ಲಟ್ಟಿ, ಗುರು ಬಸವಾ ಕೇಟರಿಂಗ್ ಮಾಲೀಕ
-ಬಸವರಾಜ ಹೊಂಗಲ್