ಒಂದು ಊರಲ್ಲಿ ಒಬ್ಬ ಹುಡುಗನಿದ್ದ. ಚಿಕ್ಕಂದಿನಲ್ಲೇ ಒಳ್ಳೆಯ ಗುಣ ಬೆಳೆಸಿಕೊಂಡಿದ್ದ. ತನಗೆ ಏನಾದರೂ ಸಿಕ್ಕಿದರೆ ಎಲ್ಲರೊಂದಿಗೆ ಹಂಚಿಕೊಳ್ಳುವ ಮನಸ್ಸು ಅವನದು. ಒಂದು ಸಲ ಈ ಹುಡುಗ ದಾರಿಯಲ್ಲಿ ಹೋಗುತ್ತಿದ್ದಾಗ ಮರದ ಮೇಲಿದ್ದ ಹಕ್ಕಿಯೊಂದು ಆರ್ತನಾದ ಮಾಡುವುದು ಕೇಳಿಸಿತು. ಏನೆಂದು ನೋಡಿದರೆ ಗೂಡಿನಲ್ಲಿದ್ದ ಅದರ ಮರಿ ಕೆಳಗೆ ಬಿದ್ದು ಮೇಲೆ ಹೋಗಲಾರದೆ ಒದ್ದಾಡುತ್ತಿತ್ತು. ಹುಡುಗ ಕನಿಕರದಿಂದ ಮರಿಯನ್ನು ಹೂವಿನಂತೆ ಎತ್ತಿ ಮರದ ಮೇಲಿದ್ದ ಗೂಡಿಗೆ ಸೇರಿಸಿ ಬಂದ.
ಆಕಾಶದಲ್ಲಿ ಸಾಗುತ್ತಿದ್ದ ದೇವತೆಯೊಬ್ಬಳು ಹುಡುಗನ ದಯಾಗುಣವನ್ನು ನೋಡಿ ಮೆಚ್ಚಿಕೊಂಡಳು. ಆಕಾಶದಿಂದಲೇ ಅವನನ್ನು ಕರೆದು, “ನಿನ್ನ ಕರುಣೆ ಕಂಡು ಆನಂದವಾಗಿದೆ. ಇದೋ ನಿನಗೊಂದು ದನವನ್ನು ಕೊಡುತ್ತೇನೆ. ಇದರ ಕೆಚ್ಚಲಿನಿಂದ ಹಾಲಲ್ಲ, ಬಂಗಾರದ ನಾಣ್ಯಗಳು ಬರುತ್ತವೆ’ ಎಂದಳು. “ನನ್ನ ನೆರೆಮನೆಯಲ್ಲಿ ಒಬ್ಬ ಕಡು ಬಡವನಿದ್ದಾನೆ. ಇದನ್ನು ಅವನಿಗೆ ಕೊಟ್ಟರೆ ಹಾಲು ಮಾರಾಟದಿಂದ ಜೀವನ ನಡೆಸಲು ಸುಲಭವಾಗುತ್ತದೆ. ದನವನ್ನು ಅವನಿಗೇ ಕೊಡಿ’ ಎಂದ ಹುಡುಗ.
ದೇವತೆ, “ನಿನ್ನ ಈ ಪರೋಪಕಾರೀ ಗುಣದಿಂದಾಗಿ ಸ್ವರ್ಗದ ಒಂದು ಮೆಟ್ಟಿಲನ್ನು ಏರಿದ್ದೀಯಾ. ತಗೋ ನಿನಗೆ ಹಾರುವ ಚಪ್ಪಲಿಯನ್ನು ಕೊಡುತ್ತಿದ್ದೇನೆ. ಇದನ್ನು ಮೆಟ್ಟಿದರೆ ಆಕಾಶದಲ್ಲಿ ಹಾರುತ್ತಾ ಬೇಕಾದಲ್ಲಿಗೆ ಹೋಗಬಹುದು’ ಎಂದಳು. ಹುಡುಗ ಅದನ್ನು ಒಬ್ಬ ಹೆಳವನಿಗೆ ಕೊಡಿಸಿದ. ಹೀಗೆ ದೇವತೆ ಕರುಣಿಸಿದ ಹಲವು ಅಮೂಲ್ಯ ವಸ್ತುಗಳನ್ನು ಬೇರೆಯವರಿಗೆ ಕೊಡಿಸುವಾಗ ಅವನು ಒಂದೊಂದಾಗಿ ಸ್ವರ್ಗದ ಮೆಟ್ಟಿಲನ್ನು ಹತ್ತುತ್ತ ದೇವತೆಯ ಬಳಿಗೆ ತಲಪಬೇಕಿತ್ತು. ಆದರೆ ಅವನಿನ್ನೂ ನಿಂತಲ್ಲೇ ನಿಂತಿದ್ದ. ದೇವತೆ ಅಸಹನೆಯಿಂದ, “ನಿನ್ನ ಊರಿನ ಪ್ರತಿಯೊಬ್ಬನಿಗೂ ನಿನ್ನ ಸಲುವಾಗಿ ಒಳ್ಳೆಯ ವಸ್ತುಗಳನ್ನೆಲ್ಲ ಕೊಟ್ಟೆ. ಆದರೂ ನೀನು ತೃಪ್ತನಾಗಿಲ್ಲ ಅಲ್ಲವೆ? ಮೆಟ್ಟಿಲುಗಳನ್ನೇರುತ್ತ ಮೇಲೆ ಸ್ವರ್ಗಕ್ಕೆ ಬರಲು ನಿನಗಿಷ್ಟವಿಲ್ಲವೆ?’ ಕೇಳಿದಳು.
ಹುಡುಗ ದುಃಖದಿಂದ, “ನನ್ನಿಂದ ಉಪಕಾರ ಪಡೆದ ಎಲ್ಲರೂ ನನ್ನ ಬಳಿಯೇ ನಿಂತಿದ್ದಾರೆ. ನಾನು ಒಂದು ಮೆಟ್ಟಲು ಏರಿದ ಕೂಡಲೇ ನನ್ನನ್ನು ಎಳೆದು ಕೆಳಗೆ ಹಾಕುತ್ತಿದ್ದಾರೆ. ಹೀಗಾಗಿ ಮೇಲೆ ಬರಲು ನನ್ನಿಂದಾಗುತ್ತ ಇಲ್ಲ’ ಎಂದು ಹೇಳಿದ. ದೇವತೆಗೆ ವ್ಯಥೆಯಾಯಿತು. “ಕೃತಘ್ನರಾದ ಮನುಷ್ಯರೇ; ನಿಮಗೆಂದಿಗೂ ಇನ್ನೊಬ್ಬರ ಒಳಿತನ್ನು ಸಹಿಸುವ ಶಕ್ತಿಯಿಲ್ಲ. ಬೇರೆಯವರ ಒಳ್ಳೆಯ ಗುಣ ನೋಡಿ ಕಲಿಯುವುದಿಲ್ಲ. ಮುಂದೆ ಬರುವವರನ್ನು ಕಾಲು ಹಿಡಿದು ಕೆಳಗೆಳೆಯುವ ಪ್ರವೃತ್ತಿಯಿಂದಾಗಿ ತೃಪ್ತಿ ಎಂಬುದು ನಿಮಗೆ ಜೀವನದಲ್ಲಿ ಸಿಗದೇ ಹೋಗಲಿ’ ಎಂದು ಶಪಿಸಿದಳು.
– ಪ. ರಾಮಕೃಷ್ಣ ಶಾಸ್ತ್ರಿ