ಕುರಿಗಾಹಿಯೊಬ್ಬನಿಗೆ ಭೀಮಾ ನದಿಯಲ್ಲಿ ಗಾಜಿನ ರೂಪದ ಕಂಬದಲ್ಲಿದ್ದ ದೇವಿ ಕಾಣಿಸಿಕೊಳ್ಳುತ್ತಾಳೆ. ಆ ದೇವಿಯನ್ನು ಒಂದು ಸರ್ಪವು ಕಾಯುತ್ತಿತ್ತು…
ಭೀಮಾ ನದಿಯಲ್ಲಿ ತೇಲಿ ಬಂದ ದೇವಿ ಅಂತಲೇ ಕಥೆಯುಳ್ಳ ಭಾಗ್ಯವಂತಿ ದೇವಿಗೆ, “ಅದೃಷ್ಟ ದೇವತೆ’ ಎಂಬ ಖ್ಯಾತಿಯಿದೆ. ಕಲಬುರಗಿ ಜಲ್ಲೆಯ ಅಫಜಲಪೂರದ ಘತ್ತರಗಿಯಲ್ಲಿ ನೆಲೆನಿಂತರೂ, ಈಕೆಯ ಮಹಿಮೆ ನಾಡಿನುದ್ದಗಲ ಹಬ್ಬಿದೆ. ದಾರಿದ್ರವನ್ನು ದೂರ ಮಾಡುವ ದೇವಿ ಅಂತಲೇ ಈಕೆಯನ್ನು ಭಕ್ತರು ಆರಾಧಿಸುತ್ತಾರೆ. ಅಂದಹಾಗೆ, ಈ ಭಾಗ್ಯವಂತ ದೇವಿಗೂ, ವಿಜಯನಗರ ಸಾಮ್ರಾಜ್ಯದ ಪತನಕ್ಕೂ ನಂಟು ಬೆಸೆಯುವ ಒಂದು ಕಥೆ ಇದೆ.
ಶ್ರೀಕೃಷ್ಣದೇವರಾಯ ಮತ್ತು ಅವರ ಪೂರ್ವಿಕರು ಭುವನೇಶ್ವರಿ ದೇವಿಯನ್ನು ಶ್ರದ್ಧಾಭಕ್ತಿಯಿಂದ ಆರಾಧಿಸುತ್ತಿದ್ದರು. ರಾಜವಂಶಿಕರನ್ನು ರಕ್ಷಿಸುತ್ತಾ, ನಾಡದೇವತೆಯಾಗಿ ಜನರನ್ನು ಕಾಪಾಡುತ್ತಿದ್ದಳು. ಆದರೆ, ಸಾಮ್ರಾಜ್ಯದ ಕೊನೆಯ ಅರಸನಾದ ರಾಮರಾಯನು ತಾಯಿಯನ್ನು ನಿರ್ಲಕ್ಷಿಸಿ, ಪೂಜಿಸುವುದನ್ನೇ ನಿಲ್ಲಿಸಿಬಿಟ್ಟನು. ದೇವಿಯು ಕೋಪಗೊಂಡು, ತುಂಗಭದ್ರಾ ನದಿಯಲ್ಲಿ ಮುಳುಗಿ, ಕೃಷ್ಣಾನದಿ ಸೇರಿ, ಈಜಿಕೊಂಡು, ಭೀಮಾನದಿಗೆ ಬಂದು ಸೇರಿದಳಂತೆ. ದೇವಿಯಿಂದ ದೂರವಾದ ವಿಜಯನಗರ ಸಾಮ್ರಾಜ್ಯವು ಪತನವಾಗಿ, ಮುಸ್ಲಿಂ ಅರಸರ ವಶವಾಗುತ್ತದೆ.
ಕೆಲವು ದಿನಗಳ ನಂತರ, ಕುರಿಗಾಹಿಯೊಬ್ಬನಿಗೆ ಭೀಮಾ ನದಿಯಲ್ಲಿ ಗಾಜಿನ ರೂಪದ ಕಂಬದಲ್ಲಿದ್ದ ದೇವಿ ಕಾಣಿಸಿಕೊಳ್ಳುತ್ತಾಳೆ. “ನನಗೆ ಇಲ್ಲೊಂದು ನೆಲೆ ಕಲ್ಪಿಸಿದರೆ, ಜನರನ್ನು ಸಲುಹಿ ರಕ್ಷಿಸುತ್ತೇನೆ’ ಎನ್ನುತ್ತಾಳೆ. ದೇವಿಯ ಈ ಮಾತುಗಳನ್ನು ಕುರಿಗಾಹಿಯು ಗ್ರಾಮಸ್ಥರಿಗೆ ಮುಟ್ಟಿಸುತ್ತಾನೆ. ಆಗ ಊರಿನವರೆಲ್ಲರೂ ಗೌಡನ ಸಮ್ಮುಖದಲ್ಲಿ ನದಿಯಲ್ಲಿದ್ದ ಗಾಜಿನ ಕಂಬವನ್ನು ಆಚೆಗೆ ತೆಗೆದಾಗ ಕಂಬವು ಕಪ್ಪು ಬಣ್ಣದ್ದಾಗಿತ್ತು. ಅಲ್ಲದೆ, ಅಲ್ಲಿದ್ದ ದೇವಿಯನ್ನು ಒಂದು ಸರ್ಪವು ಕಾಯುತ್ತಿತ್ತು.
ಗ್ರಾಮಸ್ಥರೆಲ್ಲ ಸೇರಿಕೊಂಡು ಎತ್ತಿನಗಾಡಿಯಲ್ಲಿ ಕಂಬವನ್ನಿಟ್ಟು, ಭವ್ಯ ಮೆರವಣಿಗೆ ಮಾಡಿದರು. ನಿಗದಿತ ಸ್ಥಳದಲ್ಲಿ ದೇಗುಲವನ್ನೂ ನಿರ್ಮಿಸಲಾಯಿತು. ದೇವಿಯು ಊರಿಗೆ ಭಾಗ್ಯವನ್ನು ಕಲ್ಪಿಸುವವಳೆಂದು ನಂಬಿದ ಭಕ್ತರು, “ಭಾಗ್ಯವಂತಿ ದೇವಿ’ ಅಂತಲೇ ಕರೆಯತೊಡಗಿದರು. ಇಲ್ಲಿ ದೇವಿಯ ದರ್ಶನ ಮಾಡಲು, ನಿತ್ಯವೂ ಸಾವಿರಾರು ಭಕ್ತರು ಬರುತ್ತಾರೆ. ಪ್ರತಿ ಅಮಾವಾಸ್ಯೆಯಂದು ಇಲ್ಲಿ ಜಾತ್ರೆಯ ವಾತಾವರಣವಿರುತ್ತದೆ.
ದರುಶನಕೆ ದಾರಿ…: ಭಾಗ್ಯವಂತಿ ದೇವಿಗೆ ಘತ್ತರಗಿಯಲ್ಲಿ ಭವ್ಯ ದೇಗುಲವಿದೆ. ಕಲಬುರಗಿ ಜಿಲ್ಲೆಯಿಂದ ಅಫಜಲಪೂರ ಮಾರ್ಗವಾಗಿ ಬಂದರೆ, ಇಲ್ಲಿಗೆ 70 ಕಿ.ಮೀ. ಆಗುತ್ತದೆ.
* ಮಲ್ಲಿಕಾರ್ಜುನ ಮೇತ್ರಿ