ಬೆಂಗಳೂರು: ರಾಜ್ಯದಲ್ಲಿ ನಾಡದೇವಿ ಭುವನೇಶ್ವರಿಯ ಏಕರೂಪದ ಭಾವಚಿತ್ರ ಬಳಕೆಗೆ ರಾಜ್ಯ ಸರ್ಕಾರ ನೇಮಿಸಿದ್ದ ತಜ್ಞರ ತಂಡ ಶಿಫಾರಸು ಮಾಡಿದೆ.
ನೂತನ ಭಾವಚಿತ್ರವು ಹಲವು ವಿಶೇಷತೆಗಳನ್ನು ಹೊಂದಿದ್ದು, ಕರ್ನಾಟಕ ನಕ್ಷೆ ಹಿನ್ನೆಲೆ, ರಾಜ್ಯವನ್ನಾಳಿದ ಎಲ್ಲ ರಾಜವಂಶಸ್ಥರ ವೈಭವ ಸಾರುವ ಆಭರಣ ಹಾಗೂ ನಾಡಿನ ವೈಶಿಷ್ಟéವನ್ನು ಒಳಗೊಂಡಿದೆ.
ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಮಹೇಂದ್ರ ನೇತೃತ್ವದ ಸಮಿತಿಯು ಈ ಭಾವಚಿತ್ರದ ಶಿಫಾರಸು ಮಾಡಿದೆ. ಸರ್ಕಾರ ಇದಕ್ಕೆ ಬಹುತೇಕ ಒಪ್ಪಿಗೆ ನೀಡಿದ್ದು, ಇದೇ ಮಾದರಿಯ ಪ್ರತಿಮೆಯನ್ನು ಕಲಾಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಹೇಳಲಾಗಿದೆ.
ಸುದ್ದಿಗಾರರ ಜತೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ಕುಮಾರ್, ನಾಡಗೀತೆಗೆ ಒಂದು ಚೌಕಟ್ಟು ರೂಪಿಸಿದ ಹಾಗೆ ಏಕರೂಪದ ನಾಡದೇವಿ ಭುವನೇಶ್ವರಿ ಭಾವಚಿತ್ರ ಬಳಕೆ ಬಗ್ಗೆ ಸರ್ಕಾರ ತಜ್ಞರ ಸಮಿತಿ ರಚಿಸಿತ್ತು. ಸಮಿತಿ ಅತ್ಯುತ್ತಮ ಭಾವಚಿತ್ರವನ್ನು ಶಿಫಾರಸು ಮಾಡಿದೆ. ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಮಿತಿ ಶಿಫಾರಸು ಮಾಡಿರುವ ಭಾವಚಿತ್ರದ ಮುಖದಲ್ಲಿ ಸ್ವಾಭಾವಿಕ ಸೌಂದರ್ಯ ಮತ್ತು ದೈವಿಕ ಭಾವ ಕಂಗೊಳಿಸಿದೆ. ಧ್ವಿಭುಜ ವಾಸ್ತವಿಕತೆಗೆ ಹತ್ತಿರವಾಗಿದೆ. ಬಲಗೈಯಲ್ಲಿ ಅಭಯ ಮುದ್ರೆ ಸಾಂಕೇತಿಕವಾಗಿ ರಕ್ಷಣೆ ನೀಡುತ್ತಿದ್ದರೆ, ಎಡಗೈಯಲ್ಲಿರುವ ತಾಳೆಗರಿ ಕನ್ನಡ ಭಾಷಾ ಸಂಪತ್ತು, ಜ್ಞಾನ ಸಮೃದ್ಧಿ ಪ್ರವಹಿಸುವ ನಿಟ್ಟನ್ನು ಸೂಚಿಸುತ್ತಿದೆ. ನಾಡದೇವತೆಯು ಕುಳಿತಿರುವ ಭಂಗಿಯು ಭವ್ಯತೆ ಹಾಗೂ ಸಾಕ್ಷ್ಯತೆ ಪ್ರತಿಬಿಂಬಿಸುತ್ತಿದೆ. ಕರ್ನಾಟಕದ ಧ್ವಜ ಕನ್ನಡಾಭಿಮಾನದ ಸಂಕೇತವಾಗಿ ರಾರಾಜಿಸುತ್ತಿದೆ. ಹಸಿರು ಸೀರೆಯು ಸಿರಿ ಸಂಪದ ಸಮೃದ್ಧಿ ಸೂಚಿಸುತ್ತದೆ.
ಚಾಲುಕ್ಯರ ಕಾಲದ ಕರಂಡ ಮಕುಟೋಪಾದಿಯಲ್ಲಿ ಕಿರೀಟ, ಕಿವಿಯಲ್ಲಿ ಸುಂದರ ಕೌಶಲ್ಯ ಕರ್ಣಪರ್ಯಗಳು, ಭುಜದ ಮೇಲೆ ಕರ್ನಾಟಕದ ವೈಶಿಷ್ಟéದ ಸಿಂಹ ಲಾಂಛನ ಭುಜಕೀರ್ತಿಗಳು, ಕುತ್ತಿಗೆಯಲ್ಲಿ ಕಂಠಿ, ಕಟ್ಟಾಣಿ, ಹಾರಗಳು, ಕರ್ನಾಟಕ ಲಾಂಛನ-ಗಂಡ ಭೇರುಂಡ ಪದಕ, ಕಟಿಯ ಆಭರಣವಾದ ಬೆಳ್ಳಿಯ ಡಾಬು, ಕಟಿಯಲ್ಲಿ ಕೀರ್ತಿ ಮುಖ ಲಾಂಛನದ ವಡ್ಯಾಣ, ಉದ್ದನೆಯ ವೈಜಯಂತಿ ಹಾರ, ನಡುವೆ ಹೊಯ್ಸಳ ಲಾಂಛನದ ಪದಕ ನಾಡದೇವಿಯನ್ನು ಅಲಂಕರಿಸಿದೆ. ಕಾಲಿನಲ್ಲಿ ಕಡಗ, ಋಳಿ ಮತ್ತು ಕಾಲುಂಗುರಗಳು, ಹಣೆಯ ಲಲಾಟ, ತಿಲಕ, ಶಿರದಲ್ಲಿ ಮುಡಿದಿರುವ ಹೂವು ಸೌಭಾಗ್ಯದ ದ್ಯೋತಕಗಳಾಗಿವೆ.
ಕೆಳಗೆ ಸುಂದರ ಸದೃಢ ತಾವರೆ ಹೂವು ದೇವಿಯ ಮೃದುವಾದ ಕಾಲುಗಳಿಗೆ ಆಸರೆ ನೀಡಿದೆ. ಒಟ್ಟಾರೆ ನಾಡದೇವಿಯ ಈ ಚಿತ್ರವು ಸುಲಕ್ಷಣವಾಗಿ ಕರ್ನಾಟಕದ ಅಭಿಮಾನ, ಜ್ಞಾನ ಸಂಪತ್ತು, ಸಸ್ಯ ಸಮೃದ್ಧಿ, ಸಿರಿ ಸಂಪದ ಪ್ರತಿಬಿಂಬಿಸುವ ನೈಜ ಸ್ವರೂಪವಾಗಿದೆ ಎಂದು ತಿಳಿಸಲಾಗಿದೆ.