ಅವತ್ತು ಸೋಮವಾರ. ಎದ್ದಿದ್ದು ಸ್ವಲ್ಪ ಲೇಟು. ಆದರೂ ರೆಡಿ ಆಗಿದ್ದು ಮಾತ್ರ ಎಂದಿಗಿಂತಲೂ ಬೇಗ. ಅದೇಕೋ ಗೊತ್ತಿಲ್ಲ, ಯಾವತ್ತೂ ದೇವಸ್ಥಾನಕ್ಕೆ ಹೋಗದ ನಾನು, ಅವತ್ತು ಲೇಟಾಗಿ ಎದ್ದರೂ ಲೇಟೆಸ್ಟ್ ಆಗಿ ದೇವಸ್ಥಾನಕ್ಕೆ ಹೋಗಿ ಗಂಟೆ ಬಾರಿಸಿ ಧ್ಯಾನಕ್ಕೆ ಕುಳಿತಿದ್ದೆ. ಋಷಿಮುನಿಯ ತಪಸ್ಸನ್ನು ಅಪ್ಸರೆಯರು ಭಂಗ ಮಾಡಿದ ಹಾಗೆ, ನನ್ನ ಧ್ಯಾನಕ್ಕೆ ಝಲ್ ಝಲ್ ಅನ್ನುವ ಗೆಜ್ಜೆಯ ನಾದ ಭಂಗ ಮಾಡಿಬಿಟ್ಟಿತು. ಆ ಗೆಜ್ಜೆಯ ನಾದಕ್ಕೆ, ಅರೆಕ್ಷಣದ ಮಟ್ಟಿಗೆ ನನ್ನ ಹೃದಯದ ಬಡಿತವೇ ನಿಂತುಹೋದಂತೆ ಭಾಸವಾಯಿತು. ಝಲ್ ಝಲ್ ನಾದ ನಿಧಾನಕ್ಕೆ ಹತ್ತಿರವಾಗುತ್ತಿದ್ದಂತೆ, ನಿಂತು ಹೋದಂತಿದ್ದ ಎದೆಯ ಬಡಿತ ಇದ್ದಕ್ಕಿದ್ದಂತೆ ಜೋರಾಯಿತು. ಹಾಗೇ ಮೆಲ್ಲಗೆ ಕಣ್ ತೆರೆದು ನೋಡಿದರೆ, ದುಂಡನೆಯ ಮುಖದ, ಮುತ್ತಿನ ಮೂಗುತಿಯ, ನೆಲಕ್ಕೆ ತಾಗುವಷ್ಟು ಉದ್ದನೆಯ ಜಡೆ ಹಾಕಿಕೊಂಡ, ಹಣೆಗೆ ಕುಂಕುಮ ಇಟ್ಟಿದ್ದ, ಅಪ್ಸರೆಯಷ್ಟೇ ಲಕ್ಷಣವಾಗಿದ್ದ ಚೆಲುವೆ!
ಇಷ್ಟಾದ ಮೇಲೆ, ಇನ್ನೆಲ್ಲಿ ಧ್ಯಾನ ಮಾಡುವುದು? ಅವಳನ್ನೇ ಹಿಂಬಾಲಿಸಿ ಗುಡಿಯ ಸುತ್ತ ಮೂರು ರೌಂಡ್ ಹೊಡೆದಿದ್ದಾಯ್ತು. ಆದ್ರೆ, ಅವಳು ಮಾತ್ರ ತಿರುಗಿ ಸಹ ನೋಡಲಿಲ್ಲ. ಅವತ್ತಿನಿಂದ ಪ್ರತಿ ಸೋಮವಾರ ತಪ್ಪದೇ ಗುಡಿಗೆ ಹೋಗಲು ಶುರು ಮಾಡಿದೆ. ಯಾಕೆ ಅಂದ್ರೆ, ಸೋಮವಾರಗಳಲ್ಲಿ ಮಾತ್ರ ಅವಳು ಅಲ್ಲಿಗೆ ಬರುತ್ತಿದ್ದಳು. ಅವಳ ಕಾಲ್ಗೆಜ್ಜೆಯ ನಾದಕ್ಕೆ ಎದೆಯ ಬಡಿತದ ತಾಳ ತಪ್ಪಿತ್ತು. ಅವಳ ಚೆಲುವಿಗೆ ಕಂಗಳು ಶರಣಾಗಿ ಹೋಗಿದ್ದವು. “ದೀನ ನಾ ಬಂದಿರುವೆ, ನಿನ್ನ ಹಿಂದೆ ನಡೆದಿರುವೆ’ ಎಂದು ಹಾಡಿಕೊಂಡು ಅವಳನ್ನು ಪೂರ್ತಿ ನಾಲ್ಕು ತಿಂಗಳು ಫಾಲೊ ಮಾಡಿದ್ದಾಯ್ತು. ಕಾಲ್ಗೆಜ್ಜೆಯ ನಿನಾದಕ್ಕೆ, ಕೈಬಳೆಯ ನಾದಕ್ಕೆ ಮನಸೋತಿದ್ದೂ ಆಯ್ತು. ಅವಳ ಗಮನ ಸೆಳೆಯಲು ಬಗೆಬಗೆಯ ಸರ್ಕಸ್ ಮಾಡಿದ್ದೂ ಆಯ್ತು.
ಕೊನೆಗೂ ಒಂದು ದಿನ ತಿರುಗಿ ನೋಡಿ ಸ್ಟೈಲ್ ಕೊಟ್ಟೇ ಬಿಟ್ಟಳು ಆ ಸುಂದರಿ. ಅಷ್ಟು ದಿನ ದೇವಸ್ಥಾನ ಸುತ್ತಿದ್ದು ಅವತ್ತಿಗೆ ಸಾರ್ಥಕ ಅಂತ ಅನ್ಸಿತ್ತು. ಅವತ್ತಿನಿಂದ ಇವತ್ತಿನವರೆಗೂ ದೇವಸ್ಥಾನಕ್ಕೆ ಹೋಗೋದನ್ನು ನಿಲ್ಲಿಸಿಲ್ಲ. ಹೋಗೋದು ದೇವರಿಗಾಗಿ ಅಲ್ಲ, ಅವಳ ಗೆಜ್ಜೆಯ ನಾದ ಕೇಳ್ಳೋಕೆ ಅಂತಾನೇ! ಆದ್ರೆ, ಇತ್ತೀಚೆಗೆ ಅಂದ್ರೆ, ಎರಡು ವಾರದಿಂದ ಈಚೆಗೆ ಅವಳ ಗೆಜ್ಜೆಯ ನಾದ ಅಲ್ಲೆಲ್ಲೂ ಕೇಳುತ್ತಲೇ ಇಲ್ಲ. ನಾನ್ ಮಾತ್ರ ಗುಡಿ ಸುತ್ತೋದನ್ನು ಬಿಟ್ಟಿಲ್ಲ. ಭಕ್ತಿಗೆ ಮೆಚ್ಚಿ ದೇವರೇ ಒಲಿಯುವುದುಂಟಂತೆ, ಇನ್ನು ಆ ಗೆಜ್ಜೆಯ ಹುಡುಗಿಗೆ ನನ್ನ ಪ್ರೀತಿ ಕೇಳಿಸದೇ! ಅಂದು ಕೇಳಿದ ಆ ಝಲ್ ಝಲ್ ನಾದ, ಮತ್ತೆ ಕೇಳಿಸುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದೇನೆ. ಯಾವುದೇ ಗೆಜ್ಜೆ ಕಿಣಿ ಕಿಣಿ ಅಂದರೂ, ಹೃದಯದ ಢವ ಢವ ಹೆಚ್ಚುವುದು ಮಾತ್ರ ಸುಳ್ಳಲ್ಲ.
ಭೀಮಾನಾಯ್ಕ ಎಸ್. ಶೀರಳ್ಳಿ