ಹದಿನೈದು ವರ್ಷಗಳ ಹಿಂದಿನ ಮಾತು. ಪುಟ್ಟ ಮುದ್ದುಮಗನೊಂದಿಗೆ ತವರು ಮನೆಗೆ ಬರುವ ಸಡಗರದಲ್ಲಿ, ನಾಲ್ಕಾರು ಬ್ಯಾಗುಗಳ ಲಗೇಜನ್ನು ಹಿಡಿದು ಬಸ್ಸು ಹತ್ತಿ ತರೀಕೆರೆಗೆ ಬಂದು ತಲುಪಿದೆ. ಅಲ್ಲಿಂದ ನನ್ನೂರಿಗೆ ಬರಲು ಮತ್ತೂಂದು ಬಸ್ ಹತ್ತಬೇಕಿತ್ತು. ಕಂಕುಳಲ್ಲಿ ಗುಂಗುರು ಕೂದಲಿನ ಪುಟ್ಟ ಕಂದ, ಭುಜದಲ್ಲಿ ನೇತುಹಾಕಿಕೊಂಡ ಒಂದು ಬ್ಯಾಗು, ಕೈಯಲ್ಲೆರಡು ಬಟ್ಟೆ ಬ್ಯಾಗು, ಸಾಲದ್ದಕ್ಕೆ ಅಂಗೈಯಲ್ಲೊಂದು ಹಣವಿದ್ದ ಪರ್ಸ್! ರಷ್ ಆಗಿದ್ದ ಬಸ್ಸಿನೊಳಗೆ ಹೇಗೋ ನುಗ್ಗಿ ಸೀಟೊಂದನ್ನು ಹಿಡಿದು ಕುಳಿತು ನಿಟ್ಟುಸಿರುಬಿಟ್ಟೆ.
ಕಿರಿಕಿರಿ ಉಂಟು ಮಾಡುತ್ತಿದ್ದ ಮಗನನ್ನು ಹೇಗೋ ಸಂತೈಸುತ್ತಿರುವಾಗಲೇ ಕಂಡಕ್ಟರ್ ಟಿಕೆಟ್ ಕೇಳುತ್ತಾ ಹತ್ತಿರ ಬಂದಾಗ, ಹಣ ಕೊಡಲು ಅಂಗೈ ನೋಡಿದಾಗಲೇ ಗೊತ್ತಾಗಿದ್ದು, ಪರ್ಸ್ ಕಳುವಾಗಿದೆ ಅಂತ. ಆತಂಕ, ಗಾಬರಿ. ಈಗೇನು ಮಾಡುವುದು? ಟಿಕೇಟಿಗೆ ಎಲ್ಲಿಂದ ಹಣ ನೀಡಲಿ? ಕಣ್ಣಲ್ಲಿ ನೀರು ತುಂಬಿ ಬಂತು. ಯಾವ ಸಂದರ್ಭದಲ್ಲೂ ಇಂಥ ದೀನ ಸ್ಥಿತಿ ಬಂದಿರಲಿಲ್ಲ. ಕಂಡಕ್ಟರ್ ಆಗಲೇ ಪಕ್ಕದಲ್ಲಿ ನಿಂತಿದ್ದ. ನಿಧಾನವಾಗಿ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯತ್ತ ತಿರುಗಿದೆ. ಆತನತ್ತ ನೋಡಲೂ ಅಂಜಿಕೆ, ಅಳುಕು.
ಆ ಹೊತ್ತಿನಲ್ಲಿ ಬೇರೆ ದಾರಿಯೇ ಕಾಣಲಿಲ್ಲ; “ರೀ, ನನ್ನ ಬಳಿ ಹಣವಿಲ್ಲ, ಪರ್ಸ್ ಕಳೆದುಹೋಗಿದೆ, ಟಿಕೆಟ್ ಮಾಡಿಸಲು 10 ರೂ. ಇದ್ದರೆ ಕೊಡ್ತೀರಾ? ಊರಿಗೆ ಹೋದಮೇಲೆ ನಿಮ್ಮ ಅಕೌಂಟಿಗೆ ಹಣ ಹಾಕುತ್ತೇನೆ’ ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಆತನ ಬಳಿ ಅಂಗಲಾಚಿದೆ.
ಥಟ್ಟನೆ ಆತ “ಅಯ್ಯೋ ಅದಕ್ಯಾಕೆ ಅಳ್ತೀರಾ? ಪರವಾಗಿಲ್ಲ ತೆಗೆದುಕೊಳ್ಳಿ’ ಎಂದು ಕೂಡಲೇ 10 ರೂ.ನ ನೋಟೊಂದನ್ನು ನೀಡಿದಾಗ ಕೃತಜ್ಞತೆಯಿಂದ ಆತನಿಗೆ ಏನು ಹೇಳಬೇಕೆಂಬುದೇ ನನಗೆ ತಿಳಿಯಲಿಲ್ಲ. ಕಂಡಕ್ಟರ್‌ಗೆ ಹಣ ನೀಡಿ, ಈತನ ಕಡೆ ತಿರುಗಿ, “ನಿಮ್ಮಿಂದ ಬಹಳ ಉಪಕಾರವಾಯಿತು. ನನ್ನನ್ನು ನಂಬಿ ಹಣ ನೀಡಿದರಲ್ಲ, ನಿಮ್ಮ ಈ ಋಣ ಎಂದಿಗೂ ಮರೆಯಲಾರೆ, ನಿಮ್ಮ ಫೋನ್ ನಂಬರ್ ಕೊಡಿ, ಅಕೌಂಟ್ ನಂಬರ್ ಕೊಡಿ. ಊರಿಗೆ ಹೋದ ಮೇಲೆ ಹಣ ಹಾಕುತ್ತೇನೆ’ ಎಂದಾಗ ಆತ, “ಅಯ್ಯೋ ಅದೇನು ಬೇಡ. ನಿಮ್ಮನ್ನು ನಾನು ನನ್ನ ತಂಗಿನೋ ಅಥವಾ ಅಕ್ಕನೋ ಎಂದು ಭಾವಿಸಿರುವೆ’ ಎಂದು ತನ್ನ ಹೆಸರು ಹಾಗೂ ವಿಳಾಸವನ್ನೂ ನೀಡದೆ ಮುಂದಿನ ನಿಲ್ದಾಣದಲ್ಲಿ ಇಳಿದೇ ಹೋದ. ನಿಜಕ್ಕೂ ಆತ ಅವತ್ತು ದೇವರ ರೂಪದಲ್ಲಿ ಬಂದಿದ್ದ.
– ಎಸ್. ಗುಣ ಶಂಕರಘಟ್ಟ