ಮಲೆನಾಡಿನ ಒಂದು ಸುಂದರ ಹಳ್ಳಿ ಸೋಮನಾಥಪುರ. ಅಲ್ಲಿನ ಸೋಮನಾಥ ದೇವಾಲಯವು ಸುತ್ತಲೂ ಪ್ರಸಿದ್ಧಿ ಪಡೆದಿತ್ತು. ಸೋಮನಾಥಪುರ ನದಿಯ ದಂಡೆಯ ಮೇಲೆ ಇದ್ದುದರಿಂದ ಆ ಊರವರಿಗೆ ನೀರಿನ ಕೊರತೆ ಇರಲಿಲ್ಲ. ಸೋಮನಾಥ ಎಂಬ ರೈತ ಆ ಹಳ್ಳಿಯಲ್ಲಿ ವಾಸವಾಗಿದ್ದನು. ಅವನು ತನ್ನ ಹೊಲಗದ್ದೆಗಳನ್ನು ನದಿಯ ದಂಡೆಯ ಮೇಲೆ ಹೊಂದಿದ್ದರಿಂದ ಅವನ ವ್ಯವಸಾಯಕ್ಕೆ ನೀರಿನ ಕೊರತೆ ಇರಲಿಲ್ಲ. ವರ್ಷಪೂರ್ತಿ ವಿವಿಧ ಬೆಳೆಗಳನ್ನು ಬೆಳೆದು ಸಂತೋಷದಿಂದ ಜೀವನ ಸಾಗಿಸುತ್ತಿದ್ದನು.
ಸೋಮನಾಥನು ತುಂಬಾ ಲೋಭಿಯಾಗಿದ್ದನು. ತಾನು ಬೆಳೆದ ಕಾಳು ಕಡ್ಡಿಗಳನ್ನು ದಾನವಾಗಿ ಯಾರಿಗೂ ನೀಡುತ್ತಿರಲಿಲ್ಲ. ತಾನು ಬೆಳೆದುದನ್ನೆಲ್ಲ ಮನೆಯೊಳಗೆ ಬಚ್ಚಿಡುತ್ತಿದ್ದನು. ಒಮ್ಮೆ ಸೋಮನಾಥಪುರಕ್ಕೆ ಬರಗಾಲ ಆವರಿಸಿದಾಗ ಕೆಲ ಜನರು ಸೋಮನಾಥನ ಸಹಾಯ ಕೋರಿ ಬಂದರು. ಅವರಿಗೆ ಸೋಮನಾಥನು ಸಂಗ್ರಹಿಸಿದ್ದ ಆಹಾರದಲ್ಲಿ ಒಂದಷ್ಟು ಪಾಲು ಬೇಕಿತ್ತು. ಆದರೆ, ಸೋಮನಾಥನು ತಾನು ಶೇಖರಿಸಿದ್ದ ಎಲ್ಲಾ ಕಾಳುಗಳನ್ನು ಇಲಿ ಹೆಗ್ಗಣಗಳು ತಿಂದಿವೆ ಎಂದು ಸುಳ್ಳು ಹೇಳಿ ಅವರನ್ನು ಕಳುಹಿಸಿಬಿಟ್ಟನು. ಆದರೆ ಸೋಮನಾಥನ ಬಳಿ ಸಾಕಷ್ಟು ಪ್ರಮಾಣದಲ್ಲಿ ಕಾಳಿನ ರಾಶಿ ಮನೆಯಲ್ಲಿ ಇತ್ತು. ಇತ್ತ ಜನರೆಲ್ಲ ತಿನ್ನಲು ಆಹಾರವಿಲ್ಲದೆ ಬಳಲಿದರು.
ಕೆಲವು ದಿನಗಳ ನಂತರ ಸೋಮನಾಥಪುರದಲ್ಲಿ ಭಾರೀ ಮಳೆಯಾಗತೊಡಗಿತು. ನದಿ ತುಂಬಿ ಹರಿಯತೊಡಗಿತು. ಮಳೆಯ ಪ್ರಮಾಣ ಹೆಚ್ಚುತ್ತಲೇ ಇದ್ದುದರಿಂದ ನದಿಯ ನೀರಿನ ಮಟ್ಟ ಹೆಚ್ಚಾಗತೊಡಗಿತು. ಹಳ್ಳಿಯ ಮನೆಗಳಿಗೆ ನೀರು ನುಗ್ಗಿತು. ಜನರು ಮನೆಗಳನ್ನು ತೊರೆಯುವ ಪರಿಸ್ಥಿತಿ ಬಂದಿತು. ಸೋಮನಾಥನೂ ಸಹ ಅನಿವಾರ್ಯವಾಗಿ ಮನೆಯನ್ನೂ ತೊರೆಯಬೇಕಾಯಿತು.
ನದಿಯ ನೀರು ಎಲ್ಲರ ಮನೆಗಳಿಗೂ ನುಗ್ಗಿದಂತೆ ಸೋಮನಾಥನ ಮನೆಯಲ್ಲೂ ನುಗ್ಗಿತ್ತು. ಸೋಮನಾಥ ಬಚ್ಚಿಟ್ಟಿದ್ದ ಕಾಳುಗಳು ನೀರಿನ ಪ್ರವಾಹದ ಸೆಳೆತಕ್ಕೆ ಸಿಲುಕಿ ನೀರಿನೊಂದಿಗೆ ಹೊರ ಬಂದವು. ಎಲ್ಲಾ ಕಾಳುಗಳು ಹಳ್ಳಿಯ ಸುತ್ತಮುತ್ತಲಿನ ಹೊಲಗಳಲ್ಲಿ ಹರಡಿಕೊಂಡವು. ಪ್ರವಾಹ ನಿಂತು ಕೆಲವು ದಿನಗಳ ನಂತರ ಹೊಲಗಳಲ್ಲಿ ಕಾಳು ಬಿತ್ತನೆ ಮಾಡದೇ ಬೆಳೆಯು ಬರುತ್ತಿರುವುದನ್ನು ಕಂಡು ಜನರು ಆಶ್ಚರ್ಯಚಕಿತರಾದರು. ಬರಗಾಲದಿಂದ ಬಸವಳಿದಿದ್ದ ನಮಗೆ ದೇವರೇ ಕಷ್ಟ ಪರಿಹರಿಸಿದ್ದಾನೆ ಎಂದು ಸಂತಸಗೊಂಡರು.
– ವೆಂಕಟೇಶ ಚಾಗಿ