ನನ್ನ ಅಣ್ಣನ ಮೊಮ್ಮಗುವಿಗೆ ನಾಮಕರಣ ಸಮಾರಂಭವಿತ್ತು. ಬೆಳಗ್ಗೆ ಏಳು ಗಂಟೆಗೆ ಮೊದಲೇ ಸಮಾರಂಭ ಮಾಡಬೇಕೆಂದು ಪುರೋಹಿತರು ಸೂಚಿಸಿದ್ದರು. ತಡವಾದರೆ ಅಮಾವಾಸ್ಯೆ ಶುರುವಾಗುತ್ತಿದ್ದುದರಿಂದ ಹತ್ತಿರದ ಸಂಬಂಧಿಕರೆಲ್ಲಾ ಆರು ಗಂಟೆಗಿಂತ ಮೊದಲೇ ಸೇರಿದ್ದರು. ಆದರೆ, ಮನೆಯಿಂದ ಬರಬೇಕಾಗಿದ್ದ ತಾಯಿ-ಮಗುವೇ ಇನ್ನೂ ಬಂದಿರಲಿಲ್ಲ.
ಮೇಲಿಂದ ಮೇಲೆ ಫೋನ್ ಮಾಡಿದ ನಂತರ, ಮಗಳು- ಮೊಮ್ಮಗುವನ್ನು ಕರೆದುಕೊಂಡು ಅವಳ ತಾಯಿಯೂ ಬಂದರು. ಆಕೆ ಅವಸರವಸರವಾಗಿ ಇಳಿದು ಬಂದು ನಾಮಕರಣಕ್ಕೆ ಕುಳಿತುಕೊಳ್ಳಲು ಸಿದ್ಧಳಾದಳು. ಆ ಆತುರದಲ್ಲಿ ಒಂದು ಅಚಾತುರ್ಯ ನಡೆದುಹೋಗಿತ್ತು. ನಾಮಕರಣಕ್ಕೆ ಅಗತ್ಯವಾಗಿದ್ದ ಬೆಳ್ಳಿಯ ಹರಿವಾಣ, ಚೊಂಬು, ಅರಿಶಿನ- ಕುಂಕುಮದ ಬಟ್ಟಲು, ಮಗುವಿನ ಉಡುಗೆ, ಅಜ್ಜಿ ಹಾಕಬೇಕಿದ್ದ ಚಿನ್ನದ ಸರ,
ಮೊಬೈಲು ಇವೆಲ್ಲವೂ ಇದ್ದ ಒಂದು ಚೀಲ ಆಟೋದಲ್ಲಿಯೇ ಉಳಿದುಹೋಗಿತ್ತು. ಅವರು ಬಂದು ಆಗಲೇ ಕಾಲುಗಂಟೆಯ ಮೇಲಾಗಿದೆ. ಎಲ್ಲಿ ಅಂತ ಹುಡುಕುವುದು? ಎಲ್ಲರ ಮುಖದಲ್ಲೂ ಆತಂಕ ಮನೆಮಾಡಿತು. “ಅಷ್ಟು ಜವಾಬ್ದಾರಿ ಇಲ್ಲವಾ?’ ಕೆಲವರು ಗುಸುಗುಸು ಬೈದುಕೊಂಡರು. “ಇನ್ನೇನು ಮಾಡುವುದು, ಇದ್ದುದರಲ್ಲಿಯೇ ನಾಮಕರಣ ಮುಗಿಸಿ ಮತ್ತೆ ಯೋಚಿಸೋಣ’ ಎಂಬ ಹಿರಿಯರೊಬ್ಬರ ಸಲಹೆಯ ಮೇರೆಗೆ ನಾಮಕರಣಕ್ಕೆ ಅಣಿಯಾದೆವು.
ಹತ್ತಾರು ನಿಮಿಷಗಳು ಕಳೆದಿರಬೇಕು. ಒಬ್ಬ ವ್ಯಕ್ತಿ ಒಂದು ಬ್ಯಾಗನ್ನು ಹೊತ್ತುಕೊಂಡು ಬಂದು ಅಲ್ಲಿ ನೆರೆದಿದ್ದವರನ್ನು ವಿಚಾರಿಸುತ್ತಿದ್ದಾನೆ. ಅವನು ಇವರನ್ನು ಇಳಿಸಿಹೋದ ಆಟೋ ಡ್ರೈವರ್. ಅವನ ಕೈಯಲ್ಲಿದ್ದುದು ಇವರದೇ ಬ್ಯಾಗ್ ಆಗಿತ್ತು. ಎಲ್ಲರ ಮುಖದಲ್ಲಿಯೂ ಸಂತಸದ ಕಳೆ. ಸ್ವಲ್ಪ ದೂರ ಹೋದ ಮೇಲೆ ಆಟೋ ಡ್ರೈವರ್ ಯಾಕೋ ಹಿಂದಿರುಗಿ ನೋಡಿದಾಗ ಅಲ್ಲಿ ಒಂದು ಬ್ಯಾಗ್ ಇತ್ತು.
ಅದು ಆ ಮಗುವಿನ ಕಡೆಯವರದ್ದೇ ಎಂದು ತಿಳಿದು, ಹುಡುಕಿಕೊಂಡು ಬಂದು ವಾಪಸ್ ಮಾಡಿದ. “ಸ್ವಲ್ಪ ನಿಲ್ಲಿ’ ಅಂತ ಎಲ್ಲ ಹೇಳುತ್ತಿದ್ದರೂ ಕೇಳದೆ, ಯಾವುದೇ ಪ್ರತಿಫಲವನ್ನೂ ಬಯಸದೆ ನಿಮಿಷ ಮಾತ್ರದಲ್ಲಿ ಆತ ಅಲ್ಲಿಂದ ಹೊರಟುಹೋಗಿದ್ದ. ಬೇಸರದಲ್ಲಿ ಮುಗಿಯಬೇಕಿದ್ದ ಆ ಸಮಾರಂಭ ರಿಕ್ಷಾವಾಲಾನ ಮಾನವೀಯತೆಯಿಂದ ಸಂತಸದಲ್ಲಿ ಕೊನೆಗೊಂಡಿತ್ತು. ಇಂಥವರನ್ನೇ ಅಲ್ಲವೆ ಮನುಷ್ಯ ರೂಪದ ದೇವರು ಎಂದು ಕರೆಯುವುದು.
* ಪುಷ್ಪಾ ಎನ್.ಕೆ. ರಾವ್