Advertisement

ಜನರ ಹೃದಯದಲ್ಲಿದ್ದಾನೆ ದೇವರು

04:15 PM May 14, 2019 | Team Udayavani |

ಕಾರವಾರ: ನಮ್ಮ ನಡುವೆ ಮಾನವೀಯತೆ ಬದುಕಿದೆ ಎಂಬುದಕ್ಕೆ ಇಲ್ಲಿನ ಕತೆ ಸಾಕ್ಷಿಯಾಗಿದೆ. ಗೋವಾದ ಪ್ರವಾಸಿಗರು ಹುಬ್ಬಳ್ಳಿಗೆ ಹೋಗುವಾಗ ದಾರಿಯಲ್ಲಿ ನೀರು ಕುಡಿಯಲು ನಿಂತು ಬಡವರ ಕಷ್ಟ ಕೇಳಿ, ಅದನ್ನೇ ಸೋಶಿಯಲ್ ಮೀಡಿಯಾ(ಫೇಸ್‌ ಬುಕ್‌)ದಲ್ಲಿ ಹಾಕಿ, ನೆರವು ಕೋರಿದ್ದಕ್ಕೆ ನೂರಾರು ಜನರು ಮತ್ತು ಗದಗ ಕನ್ನಡ ವೈಶ್ಯ ವೆಲ್ಫೇರ್‌ ಟ್ರಸ್ಟ್‌ ಅಗಸೂರಿನ ರಾಮಚಂದ್ರ ಶೆಟ್ಟಿ ಮತ್ತು ಅವರ ವಯೋವೃದ್ಧ ತಾಯಿ ಸರೋಜಿನಿ ಶೆಟ್ಟಿ ಅವರ ನೆರವಿಗೆ ಬಂದಿದೆ.

Advertisement

ಹದಿನೈದು ದಿನಗಳ ಹಿಂದೆ ಗೋವಾ ಮೂಲದವರು ಹುಬ್ಬಳ್ಳಿಗೆ ಪ್ರವಾಸ ಮಾಡುತ್ತಿದ್ದರು. ದಾರಿ ಮಧ್ಯೆ ಅಂಕೋಲಾದ ಅಗಸೂರಿನಲ್ಲಿ ಗೂಡಂಗಡಿ ಎದುರು ವಾಹನ ನಿಲ್ಲಿಸಿ ಕುಡಿಯುವ ನೀರನ್ನು ರಾಮಚಂದ್ರ ಶೆಟ್ಟಿ (45) ಅವರಿಂದ ಪಡೆದರು. ಹಾಗೂ ಅವರ ಕಷ್ಟ ಆಲಿಸಿದರು. ರಾಮಚಂದ್ರ ಅವರು ತಮಗಿರುವ ದೃಷ್ಟಿ ಸಮಸ್ಯೆ ಹಾಗೂ ತಾಯಿಯ ವಯೋ ಸಹಜ ಕಾಯಿಲೆ ವಿವರಿಸಿದರು.

75 ವರ್ಷದ ತಾಯಿಗೆ ಆರೋಗ್ಯ ಸಮಸ್ಯೆ, ಅಂಕೋಲಾಕ್ಕೆ ಚಿಕಿತ್ಸೆಗೆ ಕರೆದೊಯ್ಯಬೇಕು. ಅರ್ಥಿಕ ಸಂಕಷ್ಟ, ಕಳೆದ ವರ್ಷ ಮಳೆಗಾಲದಲ್ಲಿ ಮನೆ ಕುಸಿದು ಹೋದದ್ದನ್ನು ಹಾಗೂ ಗ್ರಾಮಸ್ಥರು ನೆರವಿಗೆ ಬಂದು ಪುಟ್ಟ ಮನೆ ನಿರ್ಮಿಸಿಕೊಟ್ಟದ್ದನ್ನು ಹೇಳಿಕೊಂಡರು. ಇದನ್ನು ಆಲಿಸಿದ ಗೋವಾದ ಎರಡು ಮೂರು ಜನ ಪ್ರವಾಸಿಗರು, ರಾಮಚಂದ್ರ ಅವರಿಗೆ ತಮ್ಮಿಂದ ಆದ ನೆರವು ಮಾಡಿದರು. ಅಲ್ಲದೇ ರಾಮಚಂದ್ರ ಹಾಗೂ ಅವರ ವಯೋವೃದ್ಧ ತಾಯಿಯ ಕಷ್ಟ ವಿವರಿಸಿ, ನೆರವಿಗೆ ಬರುವಂತೆ ಸೋಶಿಯಲ್ ಮೀಡಿಯಾದಲ್ಲಿ ವಿನಂತಿಸಿದರು.

ಚರ್ಚ್‌, ಮಸೀದಿ, ದೇವಸ್ಥಾನಗಳಿಗೆ ಹಣಕಾಸು ನೆರವು, ದಾನ ನೀಡುವ ಬದಲು ಕಣ್ಣಿನ ದೃಷ್ಟಿದೋಷದ ನಡುವೆಯೂ ಛಲದಿಂದ ಬದುಕುವ ರಾಮಚಂದ್ರ ಶೆಟ್ಟಿ ಅವರಿಗೆ ನೆರವಾಗಿ ಎಂದು ಮನವಿ ಮಾಡಲಾಯಿತು. ತಕ್ಷಣ ವಿಳಾಸ, ಬ್ಯಾಂಕ್‌ ಆಕೌಂಟ್ ಪಡೆದ ಹೃದಯವಂತ ಜನರು ಆರ್ಥಿಕ ನೆರವು ನೀಡಿದ್ದಾರೆ.

ಹೀಗೆ ಹರಿದು ಬಂದ ಆರ್ಥಿಕ ನೆರವಿನಿಂದ ತಾಯಿಯ ಬ್ಯಾಕ್‌ ಬೋನ್‌ ಸಮಸ್ಯೆಗೆ ಚಿಕಿತ್ಸೆ ಕೊಡಿಸಲು ರಾಮಚಂದ್ರ ಶೆಟ್ಟಿ ಮುಂದಾಗಿದ್ದಾರೆ. ಅಲ್ಲದೇ ಗದಗ ನಗರದ ಕನ್ನಡ ವೈಶ್ಯ ವೆಲ್ಫೇರ್‌ ಟ್ರಸ್ಟ್‌ ಒಂದು ಲಕ್ಷ ರೂ. ದೇಣಿಗೆ ನೀಡಲು ಮುಂದೆ ಬಂದಿದೆ.

Advertisement

ವಾರದಲ್ಲಿ ಆರ್ಥಿಕ ನೆರವು ಮಾಡುವುದಾಗಿ ಟ್ರಸ್ಟ್‌ನ ಸದಸ್ಯರಾದ ದೀಪಕ್‌ ಶೆಟ್ಟಿ ಪ್ರಕಟಿಸಿದ್ದಾರೆ. ವ್ಯಾಪಾರಕ್ಕೆ ಅನುಕೂಲವಾಗುವಂತೆ ಶೆಡ್‌ವೊಂದು ಸಜ್ಜಾಗಿದ್ದು, ರಾಮಚಂದ್ರ ಅವರ ಮನೆಯ ಪಕ್ಕವೇ ಅದನ್ನು ಸ್ಥಾಪಿಸಲಾಗಿದೆ. ಸಣ್ಣ ಕಿರಾಣಿ ಅಂಗಡಿ ನಡೆಸುತ್ತಾ ಜೀವನ ಮಾಡುತ್ತಿದ್ದ ರಾಮಚಂದ್ರ ಶೆಟ್ಟಿ ಅವರು ನೆರವಾದ ಜನಗಳ ಹೃದಯದಲ್ಲಿ ದೇವರು ಕಂಡಿದ್ದಾನೆ. ಸಮಾಜದಲ್ಲಿ ಮಾನವೀಯತೆ ಬದುಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಗದಗ ಕನ್ನಡ ವೈಶ್ಯ ವೆಲ್ಫೇರ್‌ ಟ್ರಸ್ಟ್‌ ನಿಂದ 1ಲಕ್ಷ ರೂ. ನೆರವು

Advertisement

Udayavani is now on Telegram. Click here to join our channel and stay updated with the latest news.