ಸುಳ್ಯ: ಯಾವುದ್ಯಾವುದೋ ಕಾರಣ ಗಳಿಂದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸುಳ್ಯ 110 ಕೆ.ವಿ. ಸಬ್ ಸ್ಟೇಷನ್ ಕಾಮಗಾರಿಗೆ ಕೊನೆಗೂ ಚಾಲನೆ ಸಿಕ್ಕಿದ್ದು ಈ ಅವಧಿಯಲ್ಲೇ.
ಇಲ್ಲಿ 110 ಕೆ.ವಿ.ಸಬ್ ಸ್ಟೇಷನ್ ಕಾಮಗಾರಿ ಆಗಬೇಕೆಂಬುದು ಹಲವು ವರ್ಷಗಳ ಬೇಡಿಕೆ. ಇನ್ನೇನು ಈ ಸ್ಟೇಷನ್ ಬಾರದು ಎಂದು ಜನರು ಹತಾಶೆಯಾಗುವಷ್ಟರಲ್ಲಿ 2022ರಲ್ಲಿ ಕಾಮಗಾರಿ ಆರಂಭಕ್ಕೆ ಇದ್ದ ಎಲ್ಲಾ ಅಡೆತಡೆಗಳು ನಿವಾರಣೆಗೊಂಡವು. ಟೆಂಡರ್ ಪ್ರಕ್ರಿಯೆ ನಡೆದು ಮೂರು
ತಿಂಗಳ ಹಿಂದೆ ಜನವರಿಯಲ್ಲಿ ಚಾಲನೆ ದೊರಕಿತು.ಈ ಭಾಗದಲ್ಲಿ ಬೇಸಗೆಯಲ್ಲಿ ತೀವ್ರ ರೀತಿಯ ವಿದ್ಯುತ್ ಅಭಾವ ಕಂಡುಬರುತ್ತಿತ್ತು.
ತ್ರೀಫೇಸ್ ವಿದ್ಯುತ್ ಗೂ ಸಮಸ್ಯೆ ಉಂಟಾಗಿ ಜನ ರೋಸಿ ಹೋಗಿದ್ದರು. ಅಲ್ಲದೇ ಇಲ್ಲಿನ ವಿದ್ಯುತ್ ವ್ಯತ್ಯಯದ ಸಮಸ್ಯೆ ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಸುದ್ದಿಯಾಗಿತ್ತು. ವಿದ್ಯುತ್ ಸಮಸ್ಯೆ ಬಗೆಗಿನ ಪ್ರಕರಣವೊಂದರಲ್ಲಿ ಅಂದು ಇಂಧನ ಸಚಿವರಾಗಿದ್ದ ಕಾಂಗ್ರೆಸ್ ನ ಡಿ.ಕೆ.ಶಿವಕುಮಾರ್ ಸುಳ್ಯ ನ್ಯಾಯಾಲಯಕ್ಕೆ ಆಗಮಿಸಿ ಸಾಕ್ಷಿ ನುಡಿದಿದ್ದರು. ಈಗಾಗಲೇ ಸುಳ್ಯದಲ್ಲಿ ಸಬ್ ಸ್ಟೇಷನ್ ಹಾಗೂ ಮಾಡಾವು- ಸುಳ್ಯ ವಿದ್ಯುತ್ ಪ್ರಸರಣ ಮಾರ್ಗದ ಕಾಮಗಾರಿಗೆ ಚಾಲನೆ ನೀಡಲಾಗಿದೆ.