Advertisement

ರಾಜ್ಯದ ಆರ್ಥಿಕ ಸ್ಥಿತಿ ದೇವರೇ ಬಲ್ಲ: ಬಿಎಸ್‌ವೈ

01:18 AM Aug 10, 2019 | Sriram |

ಹುಬ್ಬಳ್ಳಿ: ರಾಜ್ಯದ ಆರ್ಥಿಕ ಪರಿಸ್ಥಿತಿ ದೇವರೇ ಬಲ್ಲ. ರಾಜ್ಯದ ಖಜಾನೆ ಪರಿಸ್ಥಿತಿ ಅರ್ಥೈಸಿಕೊಂಡು ಕೇಂದ್ರಕ್ಕೆ ಮನವರಿಕೆ ಮಾಡಿದ್ದೇನೆಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

Advertisement

ಶುಕ್ರವಾರ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಖಜಾನೆ ಪರಿಸ್ಥಿತಿ ದೇವರೇ ಬಲ್ಲ, ಈ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಏನಾಗಿದೆ, ಏನಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ. ಇರುವ ವಾಸ್ತವ ಸ್ಥಿತಿಯನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಿದ್ದೇನೆ. ಈ ವಿಚಾರದಲ್ಲಿ ಹೆಚ್ಚಿಗೆ ಮಾತನಾಡಲು ಬಯಸುವುದಿಲ್ಲ ಎಂದರು. ರಾಜ್ಯದ ಸಚಿವ ಸಂಪುಟ ವಿಸ್ತರಣೆ ಕುರಿತು ಕೇಂದ್ರದ ನಾಯಕರ ಜತೆ ಚರ್ಚಿಸಲು ದೆಹಲಿಗೆ ತೆರಳಿದ್ದೆ. ರಾಜ್ಯದಲ್ಲಿ ನೆರೆ ಆವರಿಸಿದೆ, ಅದಕ್ಕೆ ಮೊದಲ ಆದ್ಯತೆ ನೀಡುವಂತೆ ತಿಳಿಸಿದ್ದರಿಂದ ನೆರೆ ಸಂತ್ರಸ್ತರ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗಿದೆ. ಶೀಘ್ರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದರು.

2009ರ ನೆರೆ ಪರಿಸ್ಥಿತಿ ಉದ್ಭವವಾಗಿದ್ದು, ರಾಜ್ಯದ ಜನತೆ ನೆರೆ ಸಂತ್ರಸ್ತರಿಗೆ ಸಹಾಯಹಸ್ತ ಚಾಚಬೇಕು. ಪರಿಹಾರಕ್ಕೆ ಕೇಂದ್ರ ಸಂಪೂರ್ಣ ಸಹಕಾರ ನೀಡುತ್ತಿದೆ. ತುರ್ತು ಕಾರ್ಯಗಳಿಗೆ ರಾಜ್ಯದಿಂದ ಬೇಡಿಕೆ ಸಲ್ಲಿಸಿರು ವುದಕ್ಕೆ ಸ್ಪಂದನೆ ಮಾಡಿದೆ. ಈ ಕುರಿತು ಈಗಾಗಲೇ ಕೇಂದ್ರದ ಹಲವು ಸಚಿವರನ್ನು ಭೇಟಿಯಾ ಗಿದ್ದು, ಅಗತ್ಯ ನೆರವು ನೀಡಲು ಭರವಸೆ ನೀಡಿದ್ದಾರೆ. ವಾಸ್ತವ ಚಿತ್ರಣ ಅರಿತು ಮತ್ತೂಮ್ಮೆ ಕೇಂದ್ರಕ್ಕೆ ತೆರಳಿ ಇಲ್ಲಿನ ಪರಿಸ್ಥಿತಿ ಮನವರಿಕೆ ಮಾಡಲಾಗುವುದು ಎಂದರು.

ಸ್ಮಾರ್ಟ್‌ ಸಿಟಿ ಅನುದಾನ ಬಳಕೆ: ಸ್ಮಾರ್ಟ್‌ಸಿಟಿ ಯೋಜನೆಗೆ 1,000 ಕೋಟಿ ರೂ. ನೀಡಲಾಗಿದೆ. ಇದರಲ್ಲಿ ಖರ್ಚಾಗಿರುವುದು ಕೇವಲ 60 ಕೋಟಿ ರೂ. ಮಾತ್ರ. ಹೀಗಾಗಿ ನೆರೆ ಹಾಗೂ ಮಳೆಯಿಂದ ಸಾಕಷ್ಟು ರಸ್ತೆಗಳು ಹಾನಿಯಾಗಿದ್ದು, ಇವುಗಳ ದುರಸ್ತಿಗೆ ಬಳಕೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾಲಾ ತಡೆಗೋಡೆ, ಸೇತುವೆ ಸೇರಿದಂತೆ ವಿವಿಧ ಕಾರ್ಯಗಳಿಗೆ ವಿನಿಯೋಗ ಮಾಡುವಂತೆ ಸೂಚಿಸಿದ್ದೇನೆ ಎಂದರು. ಪ್ರಧಾನಿಗಳು ನೆರೆಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸುತ್ತಾರಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿಎಂ ಯಡಿಯೂರಪ್ಪ ನಿಮ್ಮ ಭಾವನೆ ತಿಳಿಸುವುದಾಗಿ ಪ್ರತಿಕ್ರಿಯಿಸಿದರು. ನೆರೆ ಸಂತ್ರಸ್ತರ ಮೇಲೆ ದಬ್ಟಾಳಿಕೆ ಮಾಡುವುದನ್ನು ಸಹಿಸುವುದಿಲ್ಲ. ಪೊಲೀಸರು ಲಾಠಿ ಪ್ರಹಾರ ಮಾಡಿರುವುದು ನನ್ನ ಗಮನಕ್ಕಿಲ್ಲ. ಒಂದು ವೇಳೆ ಘಟನೆ ನಡೆದಿದ್ದರೆ ಈ ಕುರಿತು ಪೊಲೀಸರ ಮೇಲೆ ನಾನೇ ಕ್ರಮ ಕೈಗೊಳ್ಳುತ್ತೇನೆ ಎಂದರು.

ಲಾಠಿ ಪ್ರಹಾರ
ನರಗುಂದ: ಮಲಪ್ರಭಾ ನದಿ ಪ್ರವಾಹದಿಂದ ಜಲಾವೃತಗೊಂಡ ತಾಲೂಕಿನ ಕೊಣ್ಣೂರ ಗ್ರಾಮದ ಪ್ರವಾಹ ಪೀಡಿತ ಪ್ರದೇಶ ವೀಕ್ಷಣೆಗೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಭೇಟಿ ನೀಡಿದ ವೇಳೆ ನೂಕು ನುಗ್ಗಲು ಉಂಟಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ನಡೆಯಿತು. ಶುಕ್ರವಾರ ಕೊಣ್ಣೂರ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಸಂಪೂರ್ಣ ಜಲಾವೃತಗೊಂಡ ಪ್ರದೇಶಗಳಿಗೆ ಆಗಮಿಸಿದ ಬಿಎಸ್‌ವೈ, ಪರಿಸ್ಥಿತಿಯ ವೀಕ್ಷಣೆ ಮಾಡಿದರು. ಬಳಿಕ, ಅಲ್ಲಿಂದ ನಿರ್ಗಮಿಸುವ ವೇಳೆ ಗ್ರಾಮಸ್ಥರಿಗೆ ಸಿಎಂ ಭೇಟಿಗೆ ಅವಕಾಶ ನೀಡಲಿಲ್ಲ. ಇದರಿಂದ ನೂಕು ನುಗ್ಗಲು ಉಂಟಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next