ಹೊಸದಿಲ್ಲಿ: ಭಾರತದಲ್ಲಿ ಫಾಸ್ಟ್ ಫುಡ್ ಗಳ ಹವಾ ಹೆಚ್ಚಾದ ಬಳಿಕ ದೇಶದ ಮೂಲೆಮೂಲೆಯಲ್ಲಿಯೂ ಪ್ರಸಿದ್ದಿ ಪಡೆದ ಖಾದ್ಯವೆಂದರೆ ಅದು ಗೋಬಿ ಮಂಚೂರಿ. ಹೂಕೋಸು ತುಂಡುಗಳು ಕೆಂಪು ಸಾಸ್ ನಲ್ಲಿ ಲೇಪಿತವಾಗಿರುವ ಗೋಬಿ ಮಂಚೂರಿಗೆ ಆಹಾರ ಪ್ರಿಯರಲ್ಲಿ ಉತ್ತಮ ಬೇಡಿಕೆಯಿದೆ. ಆದರೆ ಇದೀಗ ಭಾರತದ ಒಂದು ನಗರದಲ್ಲಿ ಗೋಬಿ ಮಂಚೂರಿಯನ್ನು ನಿಷೇಧಿಸಲಾಗಿದೆ. ಅದುವೇ ಗೋವಾದ ಮಪುಸಾ ನಗರ.
ಸಿಂಥೆಟಿಕ್ ಬಣ್ಣಗಳು ಮತ್ತು ನೈರ್ಮಲ್ಯದ ಕಾಳಜಿಯ ಕಾರಣದಿಂದ ಗೋವಾದ ನಗರವಾದ ಮಾಪುಸಾದಲ್ಲಿ ಸ್ಟಾಲ್ ಗಳು ಮತ್ತು ಫೆಸ್ಟ್ ಗಳಲ್ಲಿ ಗೋಬಿ ಮಂಚೂರಿಯನ್ ನಿಷೇಧಿಸಲಾಗಿದೆ.
ಗೋಬಿ ಮಂಚೂರಿ ವಿರುದ್ಧ ನಿಷೇಧ ಘೋಷಿಸಿದ ಗೋವಾದ ಮೊದಲ ನಾಗರಿಕ ಸಂಸ್ಥೆ ಮಾಪುಸಾ ಮುನ್ಸಿಪಲ್ ಕೌನ್ಸಿಲ್ ಅಲ್ಲ. 2022 ರಲ್ಲಿ, ಶ್ರೀ ದಾಮೋದರ್ ದೇವಸ್ಥಾನದಲ್ಲಿ ವಾಸ್ಕೋ ಸಪ್ತಾಹ ಮೇಳದ ಸಂದರ್ಭದಲ್ಲಿ, ಆಹಾರ ಮತ್ತು ಔಷಧಗಳ ಆಡಳಿತವು (ಎಫ್‌ಡಿಎ) ಮೊರ್ಮುಗಾವ್ ಮುನ್ಸಿಪಲ್ ಕೌನ್ಸಿಲ್ ಗೆ ಗೋಬಿ ಮಂಚೂರಿ ಮಾರಾಟ ಮಳಿಗೆಗಳನ್ನು ನಿರ್ಬಂಧಿಸಲು ಸೂಚನೆಗಳನ್ನು ನೀಡಿತು.
ಮುಂಬೈನ ಚೈನಿಸ್ ಪಾಕಶಾಲೆಯ ಪ್ರವರ್ತಕ ನೆಲ್ಸನ್ ವಾಂಗ್ ಅವರು 1970 ರ ದಶಕದಲ್ಲಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ಅಡುಗೆ ಮಾಡುವಾಗ ಚಿಕನ್ ಮಂಚೂರಿಯನ್ ಅನ್ನು ಕಂಡುಹಿಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಗೋಬಿ ಮಂಚೂರಿಯನ್ ಈ ಖಾದ್ಯಕ್ಕೆ ಸಸ್ಯಾಹಾರಿ ಪರ್ಯಾಯವಾಗಿದೆ.