Advertisement

ರುಚಿ ಹೆಚ್ಚಿಸುವ ವಿಷ: ತಿಂಡಿಗಳಿಗೆ ಬಳಸುವ ಕೃತಕ ಬಣ್ಣ, ರುಚಿಕಾರಕಗಳಿಂದ ಪ್ರಾಣಕ್ಕೆ ಕುತ್ತು

10:52 PM Jul 03, 2024 | Team Udayavani |

ಇತ್ತೀಚೆಗಷ್ಟೇ ಕ್ಯಾನ್ಸರ್‌ಕಾರಕ ಕೃತಕ ಬಣ್ಣಗಳನ್ನು ಬಳಸಲಾಗುತ್ತಿದೆ ಎಂಬ ಕಾರಣಕ್ಕೆ ಕರ್ನಾಟಕ ಸರಕಾರ ಗೋಬಿ ಮಂಚೂರಿಯನ್‌ ಹಾಗೂ ಕಾಟನ್‌ ಕ್ಯಾಂಡಿಗಳನ್ನು ಬ್ಯಾನ್‌ ಮಾಡಿತ್ತು. ಹಾಗೆಯೇ ಕೃತಕ ಬಣ್ಣಗಳನ್ನು ಬಳಕೆ ಮಾಡದೇ ಗೋಬಿ, ಕಬಾಬ್‌ ಮುಂತಾದ ಕರಿದ ತಿಂಡಿಗಳನ್ನು ಮಾಡಬೇಕು ಎಂದು ಸೂಚಿಸಿತ್ತು. ಆಹಾರದ ರುಚಿ ಮತ್ತು ಬಣ್ಣವನ್ನು ಹೆಚ್ಚಿಸುವ ಈ ಕೃತಕ ಬಣ್ಣಗಳು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಏನಿದು ಕೃತಕ ಬಣ್ಣಗಳು, ರುಚಿಕಾರಕಗಳು ಇದರಿಂದ ಏನಾಗಬಹುದು ಎಂಬುದರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

Advertisement

ನಾಲಗೆಯ ತೃಪ್ತಿಗಾಗಿ ಮನುಷ್ಯ ಎಲ್ಲಿಗಾದರೂ ಸುತ್ತುತ್ತಾನೆ. ರಸ್ತೆ ಬದಿಯಲ್ಲಿ ಬಣ್ಣ ಬಣ್ಣವಾಗಿ ಕಾಣುವ ತಿಂಡಿಗಳು ಅವನ ಮೊದಲ ಆಯ್ಕೆಯಾಗುತ್ತವೆ. ಇವು ರಂಗು ರಂಗಾಗಿರುವುದಷ್ಟೇ ಅಲ್ಲದೇ, ಮನೆಯಲ್ಲಿ ಸಿಗದ ರುಚಿ ಇದರಲ್ಲಿ ಸಿಗುತ್ತದೆ. ಹೀಗಾಗಿಯೇ ಜನ ಹುಡುಕಿಕೊಂಡು ಅಲೆಯುತ್ತಾರೆ. ಆದರೆ ಬಾಯಿ ಚಪಲ ತೀರಿಸಿಕೊಳ್ಳುವ ಭರದಲ್ಲಿ ಇಲ್ಲದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಸಾಮಾನ್ಯ ಹೊಟ್ಟೆ ನೋವಿನಿಂದ ಹಿಡಿದು ಜೀವ ಹಿಂಡುವ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಹೀಗಾಗಿಯೇ ಅಲ್ಲವೇ ಹೇಳುವುದು “ಊಟ ಬಲ್ಲವನಿಗೆ ರೋಗವಿಲ್ಲ’ ಎಂದು.

ಏನಾಯಿತು, ಈಗ್ಯಾಕೆ ಈ ಮಾತು?
ಗೋಬಿ ಮಂಚೂರಿಯನ್‌ ಮತ್ತು ಕಾಟನ್‌ ಕ್ಯಾಂಡಿಗಳನ್ನು ನಿಷೇಧಿಸಿದ ಬಳಿಕ ಅತಿ ಹೆಚ್ಚು ಜನರು ತಿನ್ನುವ ಪಾನಿಪೂರಿಯ ಗುಣಮಟ್ಟದ ಬಗ್ಗೆ ಸಾಕಷ್ಟು ಚರ್ಚೆ ಆರಂಭವಾಗಿತ್ತು. ಇದರ ಬೆನ್ನಲ್ಲೇ ಆಹಾರ ಗುಣಮಟ್ಟ ಪ್ರಾಧಿಕಾರ ಇಡೀ ರಾಜ್ಯಾದ್ಯಂತ ಸಂಚರಿಸಿ, ರಸ್ತೆ ಬದಿ ಅಂಗಡಿಗಳು, ಪ್ರಮುಖ

ಹೊಟೇಲ್, ರೆಸ್ಟೋರೆಂಟ್‌ಗಳಿಂದ 260 ಪಾನಿಪೂರಿ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಕ್ಕೆ ಒಳಪಡಿಸಿತ್ತು. ಇದರಲ್ಲಿ ಶೇ.22ರಷ್ಟು ಸ್ಯಾಂಪಲ್‌ಗ‌ಳು ತಿನ್ನಲು ಯೋಗ್ಯವಾಗಿರಲಿಲ್ಲ. ಬಹಳಷ್ಟು ಸ್ಯಾಂಪಲ್‌ಗ‌ಳಲ್ಲಿ ಮೊನೋ ಸೋಡಿಯಂ ಗ್ಲುಟಮೇಟ್‌, ಬ್ರಿಲಿಯಂಟ್‌ ಬ್ಲೂ, ಸನ್‌ಸೆಟ್‌ ಯಲ್ಲೋ, ಟಾಟ್ರìಜೈನ್‌ನಂತಹ ರಾಸಾಯನಿಕಗಳು ಕಂಡುಬಂದಿದ್ದವು. ಈ ಕುರಿತಾಗಿ ಆಹಾರ ಗುಣಮಟ್ಟ ಪ್ರಾಧಿಕಾರ ಸರಕಾರಕ್ಕೆ ವರದಿಯನ್ನು ಸಲ್ಲಿಕೆ ಮಾಡಿದೆ.

ಈ ತಿಂಡಿಗಳಲ್ಲಿರುತ್ತವೆ ರಾಸಾಯನಿಕಗಳು…
ಫ್ರೈಡ್‌ ರೈಸ್‌, ಫ್ರೈಡ್‌ ಚಿಕನ್‌, ಕೆಲವು ಬ್ರಾಂಡೆಂಡ್‌ ಆಲೂಗಡ್ಡೆ ಚಿಪ್ಸ್‌, ಸ್ನ್ಯಾಕ್ಸ್‌ ಮಿಕ್ಸರ್‌, ಶೈತ್ಯೀಕರಿಸಿದ ಆಹಾರ, ಸಂಸ್ಕರಿತ ಮಾಂಸ, ಬಾರ್ಬೆಕ್ಯು ಸಾಸ್‌, ಕೆಲವು ಇನ್ಸ್ಟಂಟ್ ನೂಡಲ್ಸ್‌, ಮಯೋನೀಸ್‌, ಕೆಚಪ್‌ಗಳು.

Advertisement

ನಿಮಗೆ ಯಾವೆಲ್ಲ ರೋಗಗಳು ಕಾಡಬಹುದು?
– ಹೊಟ್ಟೆ ಸಂಬಂಧಿತ ಕಾಯಿಲೆಗಳು
– ಜಠರ, ಯಕೃತ್‌ ಸಂಬಂಧಿ ಕ್ಯಾನ್ಸರ್‌
– ಮೆದುಳಿಗೆ ಸಂಬಂಧಿಸಿದ ರೋಗಗಳು
– ಮಧುಮೇಹ, ರಕ್ತದಲ್ಲಿನ ಸಕ್ಕರೆ ಅಂಶದಲ್ಲಿ ಏರುಪೇರು
– ಯಕೃತ್ತಿಗೆ ಹಾನಿ ಅಥವಾ ಲಿವರ್‌ ಕ್ಯಾನ್ಸರ್‌
– ನರವ್ಯೂಹಕ್ಕೆ ಸಂಬಂಧಿಸಿದ ಸಮಸ್ಯೆಗಳು
– ದಿಢೀರ್‌ ತೂಕ ಹೆಚ್ಚಳ, ತೂಕ ಇಳಿಕೆ
– ಥೈರಾಯ್ಡ ಕ್ಯಾನ್ಸರ್‌, ಆತಂಕದ ಭಾವ, ಮಾನಸಿಕ ಸಮಸ್ಯೆ

ಕರ್ನಾಟಕದಲ್ಲಿ ನಿಷೇಧ
ಗೋಬಿ ಮತ್ತು ಇತರ ತಿನಿಸುಗಳಲ್ಲಿ ಬಳಕೆ ಮಾಡುವ ಕೆಂಪು ಬಣ್ಣವಾದ “ರೋಡೋಮೈನ್‌-ಬಿ’ ಅನ್ನು ಕರ್ನಾಟಕ ಸರಕಾರ ಮಾರ್ಚ್‌ನಲ್ಲೇ ನಿಷೇಧ ಮಾಡಿದೆ. ಈ ಆದೇಶವನ್ನು ಉಲ್ಲಂಘನೆ ಮಾಡಿ ಇವುಗಳನ್ನು ಬಳಕೆ ಮಾಡಿದರೆ 10 ಲಕ್ಷ ರೂ.ವರೆಗೆ ದಂಡ ಹಾಗೂ 7 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಎಚ್ಚರಿಕೆಯನ್ನು ನೀಡಿದೆ.

ಡೇಂಜರ್‌ ರೋಡೋಮೈನ್‌ ಬಿ
ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಮತ್ತು ರೆಸ್ಟೋರೆಂಟ್‌ಗಳಲ್ಲಿ ದೊರೆಯುವ ಬಣ್ಣಬಣ್ಣದ ತಿನಿಸುಗಳಲ್ಲಿ ರಾಸಾಯನಿಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತದೆ. ಇದು ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಿವೆ. “ರೋಡೋಮೈನ್‌ ಬಿ’ ಎಂಬುದು ಹಸಿರು ಬಣ್ಣದ ಪುಡಿಯಾಗಿದೆ. ಇದನ್ನು ನೀರಿನಲ್ಲಿ ಬೆರೆಸಿದಾಗ ಗುಲಾಬಿ ಬಣ್ಣಕ್ಕೆ ತಿರುಗುವುದಲ್ಲದೇ ಸಾಕಷ್ಟು ರುಚಿಯನ್ನು ನೀಡುತ್ತದೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮೆದುಳಿನ ಸೆರೆಬ್ಲೆಮ್‌ಗೆ ಹಾನಿಯಾಗುತ್ತದೆ. ಇದನ್ನು ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅವರಲ್ಲಿ ಆಕ್ರಮಣಕಾರಿ ನಡವಳಿಕೆಗಳು ಆರಂಭವಾಗುವ ಸಾಧ್ಯತೆ ಇದೆ ಎಂದು ದಿಲ್ಲಿಯ ಗಂಗಾರಾಮ್‌ ಆಸ್ಪತ್ರೆಯ ಹಿರಿಯ ತಜ್ಞರಾದ ಡಾ| ಪಿಯೂಶ್‌ ರಂಜನ್‌ ತಿಳಿಸಿದ್ದಾರೆ.

ಯಾವ ರಾಸಾಯನಿಕದಿಂದ ಏನು ಪರಿಣಾಮ?
1. ಎಂಎಸ್‌ಜಿ
ಮೋನೋ ಸೋಡಿಯಂ ಗ್ಲುಟಮೇಟ್‌, ಗ್ಲುಟಾನಿಕ್‌ ಆ್ಯಸಿಡ್‌ನ‌ ಲವಣಾಂಶ ಇದು ಆಹಾರದಲ್ಲಿ ರುಚಿಯನ್ನು ಹೆಚ್ಚಿಸುತ್ತದೆ.
ಎಲ್ಲಿ ಬಳಕೆ?: ಫ್ರೈಡ್‌ರೈಸ್‌, ಫ್ರೈಡ್‌ ಚಿಕನ್‌, ಆಲೂಗಡ್ಡೆ ಚಿಪ್ಸ್‌, ಸಂಸ್ಕರಿತ ಮಾಂಸ, ನೂಡಲ್ಸ್‌, ಮಯೋನೀಸ್‌, ಕೆಚಪ್‌
ಪರಿಣಾಮ: ಮೆದುಳು ಸಂಬಂಧಿತ ರೋಗ, ಬೊಜ್ಜು, ಮಧುಮೇಹ, ಯಕೃತ್ತಿಗೆ ಹಾನಿ, ನರವ್ಯೂಹದ ಮೇಲೆ ಪರಿಣಾಮ

2.ಕೃತಕ ಬಣ್ಣಗಳು
ರೆಡ್‌ 40, ಬೆಂಜಿಡೈನ್‌-4, ಎಲ್ಲೋ-6 ಪ್ರಮುಖವಾಗಿ ಬಳಕೆಯಾಗುವ ಬಣ್ಣಗಳು. ಇವು ಆಹಾರದಲ್ಲಿನ ಬಣ್ಣವನ್ನು ಹೆಚ್ಚಿಸುತ್ತವೆ.
ಎಲ್ಲಿ ಬಳಕೆ?: ಗೋಬಿ ಮಂಚೂರಿಯನ್‌, ಕಾಟನ್‌ ಕ್ಯಾಂಡಿ, ಸಿಹಿ ತಿಂಡಿಗಳು
ಪರಿಣಾಮ: ಸಣ್ಣ ಮಕ್ಕಳಲ್ಲಿ ಅಲರ್ಜಿ, ಥೈರಾಯx… ಕ್ಯಾನ್ಸರ್‌, ತೂಕ ಹೆಚ್ಚಳ.

3.ಸೋಡಿಯಂ ನೈಟ್ರೇಟ್‌
ಆಹಾರಗಳನ್ನು ಹೆಚ್ಚು ಕಾಲ ಸುರಕ್ಷಿತವಾಗಿ ಡಲು ಬಳಕೆ ಮಾಡುವ ಉಪ್ಪಿನ ಮಾದರಿ ಯಲ್ಲಿರುವ ರಾಸಾಯನಿಕ ಇದಾಗಿದೆ.
ಎಲ್ಲಿ ಬಳಕೆ?: ಸಂಸ್ಕರಿಸಿದ ಮಾಂಸ, ಬೇಕರಿ ತಿನಿಸುಗಳು, ಮಾಂಸದ ಸ್ಲೆ„ಸ್‌, ಬೇಕನ್ಸ್‌
ಪರಿಣಾಮ: ಕ್ಯಾನ್ಸರ್‌, ಹೊಟ್ಟೆ ಸಂಬಂಧಿತ ಕಾಯಿಲೆ, ರಕ್ತದಲ್ಲಿ ಆಮ್ಲಜನಕ ಸಂಚಾರಕ್ಕೆ ಕುತ್ತು, ಉಸಿರಾಟದ ಸಮಸ್ಯೆ, ಹೆಚ್ಚು ಬೆವರು

4.ಕಾರ್ನ್ ಸಿರಪ್‌
ಫ್ರಕ್ಟೊಸ್ ಹೆಚ್ಚಿನ ಪ್ರಮಾಣದಲ್ಲಿರುವ ಮೆಕ್ಕೆಜೋಳದ ರಸ (ಸಿರಪ್‌) ಇದಾಗಿದೆ.
ಎಲ್ಲಿ ಬಳಕೆ?: ಸೋಡಾ, ಜ್ಯೂಸ್‌, ಕ್ಯಾಂಡಿ, ಬೆಳಗಿನ ಉಪಾಹಾರದ ಸಿರಲ್‌ ಮತ್ತು ಸ್ನ್ಯಾಕ್ಸ್‌
ಪರಿಣಾಮ: ಮಧುಮೇಹ, ಬೊಜ್ಜು, ಫ್ಯಾಟಿ ಲಿವರ್‌, ಹೊಟ್ಟೆ ಸಂಬಂಧಿತ ಕಾಯಿಲೆಗಳು

5.ಕೃತಕ ಸಿಹಿಗಳು
ಆಸ್ಪಟ್ರೇಮ್, ಸುಕ್ರಲೋಸ್‌, ಸಚಾರೈನ್‌, ಅಸಾಸು ಲ್ಫೆಮ್‌ ಪೊಟ್ಯಾಷಿಯಂನಿಂದ ಕೃತಕ ಸಿಹಿ ತಯಾರಿಕೆ.
ಎಲ್ಲಿ ಬಳಕೆ?: ಇನ್‌ಸ್ಟಂಟ್‌ ತಿನಿಸುಗಳು, ಸಾಫ್ಟ್ ಡ್ರಿಂಕ್‌, ಪಾನೀಯಗಳು, ಸಿರಿಯಲ್ಸ್‌
ಪರಿಣಾಮ: ದಿಢೀರ್‌ ತೂಕ ಇಳಿಕೆ, ರಕ್ತದಲ್ಲಿ ಸಕ್ಕರೆ ಪ್ರಮಾಣದ ಏರಿಳಿತ, ವಿಪರೀತ ತಲೆನೋವು, ಕ್ಯಾನ್ಸರ್‌

6.ಸೋಡಿಯಂ ಬೆಂಜೋಯೇಟ್‌
ಈ ರಾಸಾಯನಿಕ ಬಳಕೆಗೆ ಅವಕಾಶವಿದೆ. ಆದರೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಎಲ್ಲಿ ಬಳಕೆ?: ಸಾಫ್ಟ್ ಡ್ರಿಂಕ್‌, ಉಪ್ಪಿನ ಕಾಯಿ, ಸೋಯಾ ಸಾಸ್‌, ಜೆಲ್ಲಿ
ಪರಿಣಾಮ: ಹೈಪರ್‌ ಆ್ಯಕ್ಟಿವಿಟಿ, ಕ್ಯಾನ್ಸರ್‌, ಅಲರ್ಜಿ

7.ಟ್ರಾನ್ಸ್‌ ಫ್ಯಾಟ್‌
ಹೈಡ್ರೋಜೆನೇಶನ್‌ನಿಂದ ಮಾಡಲಾಗಿರುವ ಕೊಬ್ಬಿನ ಪದಾರ್ಥ. ಕೊಬ್ಬಿಗೆ ಹೈಡ್ರೋಜನ್‌ ಬೆರೆಸಲಾಗಿರುತ್ತದೆ.
ಎಲ್ಲಿ ಬಳಕೆ?: ಕರಿದ, ಬೇಕರಿ ತಿನಿಸು, ಮಾರ್ಗರೀನ್‌
ಪರಿಣಾಮ: ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ಸ್ಟ್ರೋಕ್‌, ಕೊಲೆಸ್ಟ್ರಾಲ್‌ ಏರಿಕೆ.

– ಗಣೇಶ್ ಪ್ರಸಾದ್

Advertisement

Udayavani is now on Telegram. Click here to join our channel and stay updated with the latest news.

Next