Advertisement

ಗೋಬರ್‌ ಗ್ಯಾಸ್‌ ಗೀಸರ್‌

08:03 PM Jan 26, 2020 | Lakshmi GovindaRaj |

ಗ್ರಾಮೀಣ ಪ್ರದೇಶದಲ್ಲಿ ಉರುವಲಿನ ಸಮಸ್ಯೆ ಸಾಮಾನ್ಯವಾದುದು. ಕೆಲವು ಪ್ರದೇಶಗಳಲ್ಲಂತೂ ಮಹಿಳೆಯರಿಗೆ ಕಟ್ಟಿಗೆ ಸಂಗ್ರಹಿಸುವುದರಲ್ಲೇ ದಿನದ ಬಹುತೇಕ ಸಮಯ ಕಳೆದುಹೋಗಿರುತ್ತದೆ. ಈಗೀಗ ಬಹುತೇಕ ಕಡೆ ಎಲ್‌ಪಿಜಿ ಬಳಕೆ ಆರಂಭವಾಗಿದೆಯಾದರೂ ಅದಕ್ಕೂ ಸಾಕಷ್ಟು ಅಡೆತಡೆಗಳಿವೆ. ಸೀಮೆಎಣ್ಣೆ ಪಡೆಯುವುದೂ ಸುಲಭವಲ್ಲ.

Advertisement

ಸಿಕ್ಕಾಗ ದೂರದಿಂದ ಹೊತ್ತುಕೊಂಡು ಬಂದು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಅದೂ ಸಹ ಎಲ್ಲರಿಗೂ ಸುಲಭದಲ್ಲಿ ದಕ್ಕುವುದಿಲ್ಲ. ಮಲೆನಾಡಿನಲ್ಲಿ ಕಟ್ಟಿಗೆ ಸುಲಭವಾಗಿ ಸಿಗುತ್ತದೆಯಾದರೂ ಸಂಗ್ರಹ ಮಾಡಿಟ್ಟುಕೊಳ್ಳಲೇಬೇಕಾಗುತ್ತದೆ. ಇಷ್ಟೆಲ್ಲಾ ತೊಂದರೆಗಳ ನಿವಾರಣೆಗೆ ಮಾರ್ಗೋಪಾಯ ಕಂಡುಹಿಡಿದಿದ್ದಾರೆ ಸಾಗರದ ರಾಮಚಂದ್ರ ಹೆಗಡೆಯವರು. ಅವರು ಗೋಬರ್‌ ಗ್ಯಾಸ್‌ನಿಂದ ಕಾರ್ಯನಿರ್ವಹಿಸುವ ಪರಿಸರಸ್ನೇಹಿ ಗೀಸರ್‌ಅನ್ನು ಆವಿಷ್ಕರಿಸಿದ್ದಾರೆ.

ಸ್ಪೆಷಲ್‌ ಬರ್ನರ್‌: ಎಲ್‌ಪಿಜಿಯಲ್ಲಿ ಸಂಕುಚಿತ ಉರಿ ಹೊರಸೂಸಲ್ಪಡುತ್ತದೆ. ಆದರೆ, ಗೋಬರ್‌ ಗ್ಯಾಸ್‌ ಗೀಸರ್‌, ವಿಶಾಲ ಉರಿಯನ್ನು ಹೊರಸೂಸುತ್ತದೆ. ಅದಕ್ಕೆ ಕಾರಣ, ಅವರೇ ಕಂಡುಹಿಡಿದ ವಿಶೇಷ ಬರ್ನರ್‌ ತಂತ್ರಜ್ಞಾನ. ಈ ಗ್ಯಾಸ್‌ ಗೀಸರ್‌ ಅನ್ನು ಗೊಬ್ಬರ ಗುಂಡಿಯಿಂದ 350ರಿಂದ 400 ಮೀ. ದೂರದವರೆಗೂ ಪೈಪ್‌ ಲೈನ್‌ ಅಳವಡಿಸಿ ಕೂರಿಸಬಹುದು.

ಇದರಲ್ಲಿ 40ರಿಂದ 70 ಡಿಗ್ರಿ ಸೆಲ್ಸಿಯಸ್‌ನಷ್ಟು ನೀರು ಬಿಸಿಯಾಗುತ್ತದೆ. “ಸ್ನಾನಕ್ಕೆ 45 ಡಿಗ್ರಿ ಬಿಸಿ ನೀರು ಯೋಗ್ಯ’ ಎನ್ನುತ್ತಾರೆ ಹೆಗಡೆಯವರು. ಈ ಗೀಸರ್‌ ಮೂಲಕ 100 ಲೀ. ನೀರನ್ನು 25 ನಿಮಿಷದಲ್ಲಿ ಕಾಯಿಸಬಹುದು. 100 ಲೀಟರ್‌ ಬಿಸಿನೀರು, ಏನಿಲ್ಲವೆಂದರೂ ಐದು ಮಂದಿಯ ಸ್ನಾನಕ್ಕೆ ಸಾಕಾಗುತ್ತದೆ.

ಸಾವಿರ ಮಂದಿ ಗ್ರಾಹಕರು: ಗೋಬರ್‌ ಗ್ಯಾಸ್‌ ಗೀಸರ್‌ನಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ಸ್ನಾನಕ್ಕೆಂದೇ ವರ್ಷವಿಡೀ ಹೆಚ್ಚಿನ ಪ್ರಮಾಣದಲ್ಲಿ ಕಟ್ಟಿಗೆ ಸಂಗ್ರಹಿಸುವ ಅಗತ್ಯವಿಲ್ಲ. ಹೊಗೆ ಸೇವನೆ, ಕಣ್ಣುರಿಯ ಪ್ರಶ್ನೆಯೂ ಬರುವುದಿಲ್ಲ. ಮಳೆಗಾಲ, ಚಳಿಗಾಲದಲ್ಲೂ ಈ ಗೀಸರ್‌ ಬೆಚ್ಚನೆಯ ನೀರನ್ನು ಕೊಡುತ್ತದೆ. ಈಗಾಗಲೇ ಮಲೆನಾಡಿನ ಸಾವಿರಕ್ಕೂ ಹೆಚ್ಚು ಮಂದಿ ರಾಮಚಂದ್ರ ಅವರು ತಯಾರಿಸುವ ಗೋಬರ್‌ ಗ್ಯಾಸ್‌ ಗೀಸರನ್ನು ಅಳವಡಿಸಿಕೊಂಡಿದ್ದಾರೆ.

Advertisement

ಸೊರಬ, ಸಾಗರ, ಹೊಸನಗರ, ಶಿಕಾರಿಪುರದಲ್ಲಷ್ಟೇ ಅಲ್ಲ, ದೂರದ ಕುಂದಾಪುರ, ಹೊನ್ನಾವರ, ಬೆಂಗಳೂರು ತನಕವೂ ಗೋಬರ್‌ ಗೀಸರ್‌ನ ಕೀರ್ತಿ ವಿಸ್ತರಿಸಿದೆ. “ಸರ್ಕಾರ, ಸ್ವಸಹಾಯ ಸಂಘಗಳಿಂದ ಏನಾದರೂ ನೆರವು ಸಿಕ್ಕಲ್ಲಿ, ಈ ಪರಿಸರಸ್ನೇಹಿ ಗೀಸರ್‌ಅನ್ನು ಇನ್ನಷ್ಟು ಕಡಿಮೆ ಬೆಲೆಗೆ ಜನರಿಗೆ ಮಾರಾಟಮಾಡಬಹುದು. ಇದರಿಂದ ಹಳ್ಳಿಗರ ಸಮಯ, ದುಡ್ಡು ಎರಡೂ ದೊಡ್ಡ ಪ್ರಮಾಣದಲ್ಲಿ ಉಳಿತಾಯವಾಗುತ್ತದೆ.’ ಎನ್ನುತ್ತಾರೆ ರಾಮಚಂದ್ರ ಹೆಗಡೆ.

ಸಂಪರ್ಕ: 9449400159

* ಎಂ. ಎಸ್‌. ಎಸ್‌, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next