ಕೋಲಾರ: ಕನ್ನಡಿಗರ ಆಸ್ತಿಯಾದ ನಂದಿನಿಯನ್ನು ಗುಜರಾತಿನ ಮಾರ್ವಾಡಿಗಳ ಅಮುಲ್ ಉತ್ಪನ್ನಗಳಿಗೆ ಅಡ ಇಡಲು ಹೊರಟಿರುವ ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ, ಏ.13ರಂದು ಜಾನುವಾರಗಳ ಸಮೇತ ಸಂಸದರ ಕಚೇರಿ ಮುತ್ತಿಗೆ ಹಾಕಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಎಪಿಎಂಸಿ ಆವರಣದಲ್ಲಿ ನಡೆದ ರೈತಸಂಘದ ಸಭೆಯಲ್ಲಿ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ, ಗೋ ಬ್ಯಾಕ್ ಅಮುಲ್ ಎಂಬ ಘೋಷಣೆಯೊಂದಿಗೆ ಕನ್ನಡಿಗರ ಆಸ್ತಿ, ರೈತ ಕೂಲಿ ಕಾರ್ಮಿಕರ ಸ್ವಾಭಿಮಾನದ ಬದುಕು ಕಲ್ಪಿಸಿ ಕೊಟ್ಟಿರುವ ನಂದಿನಿ ಹಾಲಿಗೆ ಪರ್ಯಾಯವಾಗಿ, ಗುಜರಾತಿನ ಅಮುಲ್ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆ ಒದಗಿಸಲು ಹೊರಟಿರುವ ಆದೇಶ ವಾಪಸ್ ಪಡೆಯದೇ ಇದ್ದರೆ, ಮತ ಕೇಳಲು ಬರುವ ಬಿಜೆಪಿ ನಾಯಕರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಪೊರಕೆ ಚಳುವಳಿ ಮಾಡುವ ಎಚ್ಚರಿಕೆಯನ್ನು ಜನಪ್ರತಿನಿ ಧಿಗಳಿಗೆ ನೀಡಿದರು.
ದೇಶದಲ್ಲಿನ ಬಹಳಷ್ಟು ಕೆಟ್ಟು ಕಣ್ಣುಗಳು ಕರ್ನಾಟಕದ ಮೇಲೆಯೇ ಬೀಳುತ್ತಿರುವುದು ವಿಪರ್ಯಾಸ. ಬೆಳಗಾವಿ ಮೇಲೆ ಮಹಾರಾಷ್ಟ್ರದ ಕಾಕದೃಷ್ಠಿ, ಅದು ಭೀಕರತೆ ಪಡೆಯುವ ಸಮಯದಲ್ಲಿ ಮತ್ತೆ ನಮ್ಮ ರಾಜ್ಯದ ಹೆಮ್ಮೆಯ ನಂದಿನಿ ಹಾಲಿಗೆ ಸಂಬಂಧಿಸಿದಂತೆ ಕೆಲವರ ವಕ್ರದೃಷ್ಠಿ ಬೀಳುತ್ತಲೇ ಬಂದಿದೆ ಎಂದರು.
ಸರ್ಕಾರದ ವಿರುದ್ಧ ಆಕ್ರೋಶ: ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಕೋಟ್ಯಾಂತರ ಗ್ರಾಮೀಣ ಪ್ರದೇಶದ ರೈತಾಪಿ ಕುಟುಂಬಗಳಿಗೆ ಸಾಂಕ್ರಾಮಿಕ ರೋಗಗಳು ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಆರ್ಥಿಕವಾಗಿ ಸಂಸಾರದ ಕೈ ಹಿಡಿದ ಏಕೈಕ ಉದ್ಯಮ ಹೈನುಗಾರಿಕೆ. ಅಂತಹ ಉದ್ಯಮವನ್ನೇ ಹೊರ ರಾಜ್ಯದವರು ಕಿತ್ತುಕೊಳ್ಳಲು ಹೊರಟಿರುವುದು ದುರಾದೃಷ್ಟಕರ. ಕೇಂದ್ರ ಸರ್ಕಾರದ ಆದೇಶವನ್ನು ತಿರಸ್ಕರಿಸದೆ ಅವರ ಮಾತಿಗೆ ಬೆನ್ನೆಲುಬಾಗಿ ರಾಜ್ಯದ ರೈತರೇ ಅಮುಲ್ ಉತ್ಪನ್ನಗಳನ್ನು ಬಯಸಿದ್ದಾರೆಂದು ಹೇಳಿಕೆ ನೀಡುತ್ತಿರುವುದು ನೋಡಿದರೆ, ಮುಂದಿನ ದಿನಗಳಲ್ಲಿ ಕರ್ನಾಟಕವನ್ನೇ ಮಹಾರಾಷ್ಟ್ರಕ್ಕೆ ಮಾರಾಟ ಮಾಡುವ ಕಾಲ ದೂರವಿಲ್ಲವೆಂದು ಏಕ ನಿರ್ಣಯ ತೆಗೆದುಕೊಳ್ಳು ತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಂದಿನಿ ಉಳಿಸಲು ಏಕೆ ಮನಸ್ಸು ಮಾಡುತ್ತಿಲ್ಲ: ಯಾವ ರಾಜಕಾರಣಿಯೂ ಹಸುಗಳನ್ನು ಸಾಕಾಣಿಕೆ ಮಾಡಿ ಸಗಣಿ, ಗಂಜಲ ಎತ್ತಿಲ್ಲ. ಆದರೂ ಅವರಿಗೆ ಪ್ರತಿದಿನ ಪೌಷ್ಟಿಕ ಹಾಲು ಕೊಡುವ ಕರ್ನಾಟಕದ ನಂದಿನಿಯನ್ನು ಉಳಿಸಿಕೊಳ್ಳಲು ಏಕೆ ಮನಸ್ಸು ಮಾಡುತ್ತಿಲ್ಲ ಎಂಬುದು ಕನ್ನಡಿಗರ ಪ್ರಶ್ನೆ. ಭಾಷೆಯಿಂದ ಹಿಡಿದು ಆಹಾರದವರೆಗೂ ಕರ್ನಾಟಕವನ್ನೇ ಗುರಿಯಾಗಿಸಿಕೊಂಡಿರುವುದಕ್ಕೆ ಕಾರಣವಾದರೂ ಏನು. ಹಿರಿಯರು ಕಟ್ಟಿ ಬೆಳೆಸಿದಂತಹ ನಂದಿನಿಯನ್ನೇ ಉಳಿಸಿಕೊಳ್ಳಲಾಗದ ಜನಪ್ರತಿನಿಧಿ ಗಳಿಗೆ ಮಾನ ಮರ್ಯಾದೆ ಇದೆಯೇ? ಇವು ಇದ್ದರೆ ಕೂಡಲೇ ಅಮುಲ್ ಉತ್ಪನ್ನಗಳನ್ನು ಏಕಪಕ್ಷಿಯವಾಗಿ ಕನ್ನಡಿಗರ ಸ್ವಾಭಿಮಾನ ರೈತಾಪಿ ವರ್ಗದ ಜೀವನ ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇಲ್ಲವಾದರೆ ಕನ್ನಡಿಗರ ಆಸ್ತಿಯನ್ನು ಉಳಿಸಲು ಕನ್ನಡಿಗರೇ ಕಾನೂನನ್ನು ಕೈಗೆತ್ತಿಕೊಳ್ಳಬೇಕಾದ ದಿನಗಳು ದೂರವಿಲ್ಲವೆಂದು ರಾಜಕಾರಣಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.
ನಂದಿನಿ ಉಳಿವಿಗಾಗಿ ನಮ್ಮ ಹೋರಾಟ: 24 ಗಂಟೆಯಲ್ಲಿ ಕನ್ನಡಿಗರ ನಂದಿನಿಯನ್ನು ನಿರ್ಲಕ್ಷ್ಯ ಮಾಡಿ ಅಮುಲ್ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಿರುವ ಆದೇಶವನ್ನು ವಾಪಸ್ ಪಡೆಯದೇ ಇದ್ದರೆ, ಜಾನುವಾರುಗಳ ಸಮೇತ ಸಂಸದ ಕಚೇರಿ ಏ.13ರಂದು ಮುತ್ತಿಗೆ ಹಾಕಿ ನ್ಯಾಯ ಪಡೆದುಕೊಳ್ಳುತ್ತೇವೆ. ನಮ್ಮ ಹೋರಾಟ ನಮ್ಮ ಕನ್ನಡಿಗರ ಆಸ್ತಿಯಾದ ನಂದಿನಿಯ ಉಳಿವಿಗಾಗಿ ಎಂದು ಹೇಳಿದರು.
ರಾಜ್ಯ ಪ್ರ.ಕಾ. ಫಾರೂಖ್ ಪಾಷ, ರಾಜ್ಯ ಕಾರ್ಯಾಧ್ಯಕ್ಷ ಬಂಗಾರಿ ಮಂಜು, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಹೆಬ್ಬಣಿ ಆನಂದರೆಡ್ಡಿ, ಭಾಸ್ಕರ್, ರಾಜೇಶ್, ಆದಿಲ್ ಪಾಷ, ವಿಜಯ್ ಪಾಲ್, ಜುಬೇರ್ ಪಾಷ, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಗಿರೀಶ್, ರಾಮಸಾಗರ ವೇಣು, ಮಾಸ್ತಿ ವೆಂಕಟೇಶ್, ಯಲ್ಲಣ್ಣ, ಹರೀಶ್ ಇದ್ದರು.