Advertisement

ಆಡು ಸಾಕಿ ನೋಡು!

09:00 PM Jul 07, 2019 | mahesh |

ಆಡು, ಕೋಳಿ ಸಾಕಣಿಕೆಯನ್ನು ಉಪಕಸುಬನ್ನಾಗಿ ಮಾಡಿಕೊಂಡು ಹೆಚ್ಚಿನ ಆದಾಯ ಗಳಿಸಬಹುದು. “ಆಡು ಮತ್ತು ಕೋಳಿ ನಡೆದಾಡುವ ಎ.ಟಿ.ಎಮ್‌. ವರ್ಷಪೂರ್ತಿಯಾಗಿ ಕೈಯಲ್ಲಿ ಹಣ ಓಡಾಡಿಕೊಂಡಿರುತ್ತದೆ’ ಎಂದು ಖುಷಿಯಾಗಿ ಹೇಳುತ್ತಾರೆ ಸಿದ್ದಪ್ಪ ಮತ್ತು ಗೀತಾ ದಂಪತಿ.

Advertisement

ಇತ್ತೀಚಿನ ವರ್ಷಗಳಲ್ಲಿ ನಿರಂತರ ಅನಾವೃಷ್ಟಿ, ಕೃಷಿ ಉತ್ಪಾದನಾ ವೆಚ್ಚ ಹೆಚ್ಚಳ ಹಾಗೂ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ದೊರಕದೆ ಇರುವುದು “ಸಾಮಾನ್ಯ’ ಸುದ್ದಿ ಆಗಿಹೋಗಿದೆ. ಹೀಗಾಗಿ ಕೃಷಿ ಕಾಯಕದ ಜೊತೆಗೆ ಆಡು ಹಾಗೂ ಕೋಳಿ ಸಾಕಣಿಕೆಯಿಂದ ಆದಾಯದ ದಾರಿ ಕಂಡುಕೊಂಡು ಬದುಕು ಕಟ್ಟಿಕೊಂಡಿದ್ದಾರೆ ಯುವ ರೈತ ಸಿದ್ದಪ್ಪ ನಡಹಟ್ಟಿ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದವರಾದ ಈತ, ಅದಕ್ಕೂ ಮೊದಲು, ಆಡು ಸಾಕಣೆ ಮಾಡಿ ಯಶಸ್ಸು ಗಳಿಸಿರುವ ಜತೆಗೆ ಇತರೆ ಯುವಕರಿಗೆ ಮಾದರಿಯಾಗಿದ್ದಾರೆ.

ಸ್ಥಳೀಯ ಸಂಸ್ಥೆಯೊಂದರಲ್ಲಿ ಸಿದ್ದಪ್ಪ ಕೆಲಸಕ್ಕೆ ಸೇರಿಕೊಂಡಿದ್ದರೂ, ಬರುತ್ತಿದ್ದ ಸಂಬಳ ಮಾತ್ರ ಜೀವನ ನಿರ್ವಹಣೆಗೆ ಸಾಲುತ್ತಿರಲಿಲ್ಲ. ಮೊದಮೊದಲು ವಾಣಿಜ್ಯ ಬೆಳೆಗಳಾದ ಕಬ್ಬು, ಜೋಳಗಳನ್ನು ತಮ್ಮ ಎರಡು ಏಕರೆ ಜಮೀನಿನಲ್ಲಿ ಬೆಳೆಯುತ್ತಿದ್ದರು. ಆದರೆ ಈ ಬೆಳೆಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಲಾಭ ದೊರೆಯದೆ ನಷ್ಟ ಅನುಭವಿಸಿದರು. ಹೀಗಿದ್ದಾಗಲೇ, ಪತ್ನಿ ಗೀತಾ ಆಡು ಸಾಕಾಣಿಕೆಯ ಬಗ್ಗೆ ಸಲಹೆ ನೀಡಿದರು. ಹೀಗಾಗಿ 2016ರಲ್ಲಿ 10 ಹೋತ ಮತ್ತು 10 ಆಡುಗಳನ್ನು ಸಾಕಲು ಮುಂದಾದರು.

ರಾಜಸ್ಥಾನದಿಂದ ಬಂತು ಟಗರು
ಆಡುಗಳಿಗೆ ಕಾಲಕಾಲಕ್ಕೆ ಮೇವು ಕೊಡುವುದು, ನೀರು ಹಾಕುವುದು, ಹೀಗೆ ಆಡು ಸಾಕಣಿಕೆಯ ಕಸುಬನ್ನು ಗೀತಾ ನಿರ್ವಹಿಸಿದರು. ಎರಡನೆಯ ವರ್ಷದಲ್ಲಿ ಸಿದ್ದಪ್ಪ 50 ಟಗರು ಮರಿಗಳನ್ನು ಖರೀದಿಸಿದರು. ಕುರಿ, ಆಡು, ಕೋಳಿ ಸಾಕಣಿಕೆ ಕೆಲಸ ಜಾಸ್ತಿಯಾಯಿತು. ಆದಾಯ ಕೂಡಾ ದುಪ್ಪಟ್ಟಾಯಿತು. ಆದ್ದರಿಂದ ಸಿದ್ದಪ್ಪ ಕೆಲಸಕ್ಕೆ ರಾಜೀನಾಮೆ ನೀಡಿ, ಆಡು ಮತ್ತು ಕೋಳಿ ಸಾಕಣಿಕೆಗೆ ಇಳಿದುಬಿಟ್ಟರು. ಸದ್ಯ ಸಿದ್ದಪ್ಪ ಅವರ ಫಾರ್ಮ್ನಲ್ಲಿ 50 ಹೋತ, 50 ಆಡು ಹಾಗೂ 20 ಸಣ್ಣ ಮರಿಗಳಿವೆ. ರಾಜಸ್ಥಾನದ ಸಿರೋಯ್‌, ಉತ್ತರಪ್ರದೇಶದ ಜಮುನಾಪರಿ, ಸೌಜತ್‌, ಬಯೋರ್‌ ತಳಿಯ ಆಡುಗಳನ್ನು ಹಾಗೂ ಟಗರುಗಳನ್ನು ಫಾರ್ಮ್ನಲ್ಲಿ ಅವರು ಸಾಕಿದ್ದಾರೆ.

ರಾಜಸ್ಥಾನ ಮೂಲದ ಶಿರೋ ತಳಿಗಳು, ಉತ್ತಮವಾಗಿದ್ದು, ಹಾಲು ಕೊಡುವುದರ ಜತೆಗೆ ಸ್ವಲ್ಪ ದಿನಗಳಲ್ಲಿಯೇ ಉತ್ತಮವಾಗಿ ಬೆಳವಣಿಗೆ ಹೊಂದುತ್ತವೆ. ಸೌಜತ್‌ ತಳಿಯ ಆಡುಗಳು ಕೂಡಾ ಸದೃಢವಾಗಿ ಬೆಳೆಯುತ್ತವೆ. ಈ ಎರಡು ತಳಿಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ವ್ಯಾಪಾರಸ್ಥರು ಫಾರ್ಮ್ಹೌಸ್‌ಗೆà ಬಂದು ಖರೀದಿ ಮಾಡುತ್ತಾರೆ.

Advertisement

ವ್ಯವಸ್ಥಿತ ದೊಡ್ಡಿ
ನೆಲದಿಂದ 5 ಅಡಿ ಎತ್ತರದಲ್ಲಿ 50 ಅಡಿ ಅಗಲ ಮತ್ತು 50 ಅಡಿ ಉದ್ದದ ವ್ಯವಸ್ಥಿತ ದೊಡ್ಡಿಯನ್ನು ನಿರ್ಮಿಸಿದ್ದಾರೆ. ದೊಡ್ಡಿಯನ್ನು ಕಬ್ಬಿಣ ಮತ್ತು ಕಟ್ಟಿಗೆ ಹಲಗೆಗಳಿಂದ ನಿರ್ಮಿಸಿದ್ದು, ದೊಡ್ಡಿಯಲ್ಲಿ ಎರಡು ಭಾಗ ಮಾಡಿಕೊಂಡು ನಡುವೆ ಮೇವು ಹಾಕಲು ಪ್ಲಾಸ್ಟಿಕ್‌ ಬಾನಿ ಮಾಡಿಕೊಂಡಿದ್ದಾರೆ. ಸಾಕಷ್ಟು ಜಾಗವಿರುವುದರಿಂದ ಆಡುಗಳು ಆರಾಮವಾಗಿ ಓಡಾಡುತ್ತಿವೆ. ದೊಡ್ಡಿಯ ಮೇಲ್ಗಡೆ ಆಡುಗಳಿದ್ದು ಕೆಳಗಡೆ ಜವಾರಿ ಕೋಳಿಗಳು ವಾಸಿಸುತ್ತವೆ. ಆಡುಗಳ ಹಿಕ್ಕೆ, ಮಾತ್ರ ನೆಲಕ್ಕೆ ಬೀಳುವ ವ್ಯವಸ್ಥೆ ಇದೆ. ಕೆಳಭಾಗದಲ್ಲಿ ಕೋಳಿಗಳು ಇರುವುದರಿಂದ ಯಾವುದೇ ರೀತಿಯ ಕೆಟ್ಟ ವಾಸನೆ ಬರುವುದಿಲ್ಲ. ರಾತ್ರಿ ಸಮಯಕ್ಕೆ ಬೆಳಕಿನ ವ್ಯವಸ್ಥೆ ಇದ್ದು, ಆಡುಗಳ ಕಣ್ಗಾವಲಿಗೆ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಿದ್ದಾರೆ.

ಆರೋಗ್ಯ ವಿಚಾರಿಸಿಕೊಳ್ಳಬೇಕು
ಆಡುಗಳಿಗೆ ರೋಗ ಬರದಂತೆ ನೋಡಿಕೊಳ್ಳಲು ಚುಚ್ಚುಮದ್ದು ಮತ್ತು ಜಂತು ನಿಯಂತ್ರಿಸಲು ಪ್ರತಿ ತಿಂಗಳು ಔಷಧ ನೀಡಲೇಬೇಕು. ಆಡಿನ ಹಿಕ್ಕೆಯನ್ನು ತೋಟದಲ್ಲಿ ಗೊಬ್ಬರವಾಗಿ ಉಪಯೋಗಿಸುವುದರಿಂದ ಬೆಳೆಗಳು ಸಮೃದ್ಧವಾಗಿ ಬರುತ್ತವೆ. ಹೀಗಾಗಿ ಆಡಿನ ಹಿಕ್ಕೆಯ ಗೊಬ್ಬರಕ್ಕೆ ಬಹಳ ಬೇಡಿಕೆಯಿದೆ. ಒಂದು ಟ್ರ್ಯಾಕ್ಟರ್‌ ಗೊಬ್ಬರಕ್ಕೆ 5-6 ಸಾವಿರ ರುಪಾಯಿ ಆದಾಯ ಬರುತ್ತದೆ.

ಉಪಕಸುಬಿನಿಂದ ಜೀವನಕ್ಕೆ ಬಲ
ಆಡು, ಕೋಳಿ ಸಾಕಣಿಕೆಯನ್ನು ಉಪಕಸುಬನ್ನಾಗಿ ಮಾಡಿಕೊಂಡು ಹೆಚ್ಚಿನ ಆದಾಯ ಗಳಿಸಬಹುದು. ಆಡು ಮತ್ತು ಕೋಳಿ ನಡೆದಾಡುವ ಎ.ಟಿ.ಎಮ್‌. ವರ್ಷಪೂರ್ತಿಯಾಗಿ ಕೈಯಲ್ಲಿ ಹಣ ಓಡಾಡಿಕೊಂಡಿರುತ್ತದೆ ಎಂದು ಖುಷಿಯಾಗಿ ಹೇಳುತ್ತಾರೆ ಸಿದ್ದಪ್ಪ ಮತ್ತು ಗೀತಾ ದಂಪತಿ. ಜೊತೆಗೆ ಆಡು ಮತ್ತು ಕೋಳಿ ಸಾಕಾಣಿಕೆಯಂಥ ಉಪ ಕಸುಬನ್ನು ಮಾಡಿ ಅಭಿವೃದ್ಧಿಯತ್ತ ಮುನ್ನಡೆಯಬೇಕೆಂದು ಇವರ ನಿಲುವು. ಜಿಲ್ಲೆಯ ಅನೇಕ ಭಾಗಗಳಿಂದ ಸಾಕಷ್ಟು ಕೃಷಿಕರು ಸಿದ್ದಪ್ಪ ನಡಹಟ್ಟಿಯವರ ಫಾರ್ಮ್ಗೆ ಬಂದು ಭೇಟಿ ನೀಡಿ ಪ್ರೇರಣೆ ಪಡೆದಿದ್ದಾರೆ.

ಅವಕ್ಕೆ ತಿನ್ನಲು ಏನೇನು ಕೊಡಬಹುದು?
ಜೋಳ, ಗೋಧಿ, ಹುರುಳಿ, ನುಚ್ಚು ಮಾಡಿ ನೀರಿನಲ್ಲಿ ಆಡುಗಳಿಗೆ ಕಲಿಸುತ್ತಾರೆ. ಅದಕ್ಕೆ ನ್ಯೂಟ್ರಿಶಿಯನ್‌ ಪೌಡರ್‌ ಮಿಶ್ರಣ ಮಾಡಿ ನಿತ್ಯ ಬೆಳಿಗ್ಗೆ ಆಡುಗಳಿಗೆ ಆಹಾರವಾಗಿ ನೀಡುತ್ತಾರೆ. ಕಬ್ಬು, ಹೈಬ್ರಿಡ್‌ ಹುಲ್ಲು, ಒಣಹುಲ್ಲನ್ನು ಚಾಪ್‌ ಕಟರ್‌ ಮೂಲಕ ಕಟ್‌ ಮಾಡಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ನೀಡುತ್ತಾರೆ. ಹೀಗೆ, ಸಮಯಕ್ಕೆ ಸರಿಯಾಗಿ ಮೇವು ಹಾಕಿದರೆ, ಆಡುಗಳ ಜೀರ್ಣಕ್ರಿಯೆ ಸರಿಯಾಗಿ ಆಗಿ ನಿರೀಕ್ಷಿತ ತೂಕ ಪಡೆದುಕೊಳ್ಳುತ್ತದೆ’ ಎಂದು ಸಿದ್ದಪ್ಪ ತಿಳಿಸುತ್ತಾರೆ.

ಎರಡು ಎಕರೆಯಲ್ಲಿ ಮೇವು
ಮೇವಿಗೆಂದೇ 2 ಎಕರೆ ಜಮೀನಿನಲ್ಲಿ ಕಬ್ಬು, ಬಿಳಿಜೋಳ, ಜೋಳ, ತೊಗಚಿ, ಡೇರಿ ಹುಲ್ಲು ಬೆಳೆದಿದ್ದಾರೆ. ಚಿಕ್ಕೋಡಿಯ ಕೃಷಿ ಇಲಾಖೆಯಿಂದ ಧನಸಹಾಯ ಪಡೆದು ತೋಟದಲ್ಲಿ ಕೃಷಿ ಹೊಂಡ ನಿರ್ಮಿಸಿದ್ದಾರೆ. ವರ್ಷಕ್ಕೆ ಒಂದು ಆಡು ಕನಿಷ್ಟ 2ರಿಂದ 4 ಮರಿಗಳನ್ನು ಹಾಕುತ್ತದೆ. ಇವುಗಳನ್ನು ಆರು ತಿಂಗಳು ಚೆನ್ನಾಗಿ ಮೇಯಿಸಿದರೆ ಹಾಕಿದ ಖರ್ಚಿಗಿಂತ ನಾಲ್ಕು ಪಟ್ಟು ಹೆಚ್ಚು ಆದಾಯ ಪಡೆಯಬಹುದು. ಸಮೃದ್ಧವಾಗಿ ಬೆಳೆದ ಆಡುಗಳು 15ರಿಂದ 20ಸಾವಿರ ರುಪಾಯಿಗಳವರೆಗೆ ಮಾರಾಟವಾಗುತ್ತದೆ. ಅಲ್ಲದೇ ಆಫ್ರಿಕನ್‌ ಬಯೋಡ ತಳಿಯ ಹೋತದಿಂದ ಜವಾರಿ ಆಡುಗಳಿಗೆ ಕ್ರಾಸಿಂಗ್‌ ಮಾಡಿಸುತ್ತಿದ್ದು, ಅವುಗಳಿಂದ ಆಫ್ರಿಕನ್‌ ಬಯೋರ್‌ ತಳಿಯನ್ನೇ ಹೋಲುವ ಮರಿಗಳು ಜನಿಸುತ್ತವೆ.

ಹೆಚ್ಚಿನ ಮಾಹಿತಿಗೆ: 9731104052 (ಸಿದ್ದಪ್ಪ ನಡಹಟ್ಟಿ)

-ಸುರೇಶ ಗುದಗನ‌ವರ

Advertisement

Udayavani is now on Telegram. Click here to join our channel and stay updated with the latest news.

Next