Advertisement

ಗುರಿ ಮುಟ್ಟದ ಪ್ರಯಾಣ

05:24 PM Jul 27, 2018 | Team Udayavani |

ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊರಟ ಪ್ರಯಾಣಿಕರನ್ನು ಪಿಕ್‌ಅಪ್‌ ಮಾಡುವ ಬಸ್ಸೊಂದು ಸಿಟಿಯೆಲ್ಲಾ ಸುತ್ತಾಡಿ ಎಲ್ಲರನ್ನು ಹತ್ತಿಸಿಕೊಂಡು ಬಾಗಿಲು ಮುಚ್ಚುತ್ತದೆ. ಕ್ಲೀನರ್‌ ತನ್ನ ಮೊಬೈಲ್‌ ಬಿಸಾಕಿಬಿಡುತ್ತಾನೆ. ಬಸ್ಸಿನೊಳಗಡೆ ಮೊಬೈಲ್‌ ಜಾಮರ್‌ ಯಾರಿಗೂ ನೆಟ್‌ವರ್ಕ್‌ ಸಿಗದಂತೆ ಮಾಡುತ್ತದೆ. ಬಸ್ಸು ಸಿಟಿ ದಾಟಿ ಊರ ಹೊರಗಿನ ಕಲ್ಲು ಕ್ವಾರಿಯೊಳಗೆ ಬಂದು ನಿಂತು ಬಿಡುತ್ತದೆ. ಡ್ರೈವರ್‌, ಕ್ಲೀನರ್‌ ಇಬ್ಬರು ತಾವು ಅಂದುಕೊಂಡ ಕಾರ್ಯಕ್ಕೆ ರೆಡಿಯಾಗುತ್ತಾರೆ.

Advertisement

ಪ್ರಯಾಣಿಕರ ಮುಖದಲ್ಲಿ ದಿಗಿಲು, ಏನಾಗುತ್ತಿದೆ ಎಂಬ ಗೊಂದಲ. ಹಾಗಾದರೆ ಮುಂದೇನಾಗುತ್ತದೆ ಎಂಬ ಒಂದು ಸಣ್ಣ ಕುತೂಹಲ ನಿಮ್ಮಲ್ಲಿರಬಹುದು. ಅದಕ್ಕೆ ನೀವು “ಪ್ರಯಾಣಿಕರ ಗಮನಕ್ಕೆ’ ಚಿತ್ರ ನೋಡಬೇಕು. ಚಿತ್ರದ ಒನ್‌ಲೈನ್‌ ಕೇಳಿದ ನಂತರ ನಿಮಗೊಂದು ಅಂಶ ಸ್ಪಷ್ಟವಾಗಿರುತ್ತದೆ. ಇದೊಂದು ಬಸ್‌ ಹೈಜಾಕ್‌ ಕಥೆ ಎಂಬುದು. ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳುವ ಬಸ್ಸನ್ನು ಹೈಜಾಕ್‌ ಮಾಡುವ ಪ್ಲ್ರಾನ್‌ನೊಂದಿಗೆ ಇಡೀ ಸಿನಿಮಾ ತೆರೆದುಕೊಳ್ಳುತ್ತದೆ.

ಈ ಹಿಂದೆ ನಡೆದ ನೈಜ ಘಟನೆಯೊಂದನ್ನು ಸ್ಫೂರ್ತಿಯಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಒಂದು ಬಸ್ಸಿನಲ್ಲಿರುವ ವಿಭಿನ್ನ ಪಾತ್ರಗಳು ಒಟ್ಟಾದಾಗ ಏನೇನು ಆಗುತ್ತದೆ ಎಂಬ ಅಂಶವೂ ಸಿನಿಮಾದಲ್ಲಿ ಹೈಲೈಟ್‌ ಎಂದು ಈ ಹಿಂದೆ ಚಿತ್ರತಂಡ ಹೇಳಿತ್ತು. ಆದರೆ, ಆ ಅಂಶ ತೆರೆಮೇಲೆ ಹೈಲೈಟ್‌ ಆಗಿಲ್ಲ ಎಂದರೆ ನಿರ್ದೇಶಕರಿಗೆ ಬೇಸರವಾಗಬಹುದು. ತುಂಬಾ ವರ್ಷಗಳ ನಂತರ ಪತ್ನಿಯನ್ನು ನೋಡಲು ಹೊರಟ ಹಿರಿಜೀವ, ಮನೆಬಿಟ್ಟು ಓಡಿಹೋಗುವ ಪ್ರೇಮಿಗಳು,

ಸ್ಟಾರ್‌ ನಟಿಯಾಗುವ ಕನಸಿನೊಂದಿಗೆ ಪರ ಊರಿಗೆ ಹೊರಟ ನವನಟಿ, ದೊಡ್ಡ ಕಂಪೆನಿಯಲ್ಲಿ ಉದ್ಯೋಗ ಗಿಟ್ಟಿಸಿ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳುವ ಆಸೆಯೊಂದಿಗೆ ಬಸ್ಸು ಹತ್ತಿದ ತರುಣ, ತಾಯಿಯಾಗುತ್ತಿರುವ ಖುಷಿಯಲ್ಲಿ ತವರು ಮನೆಗೆ ಹೋಗುತ್ತಿರುವ ಗೃಹಿಣಿ … ಹೀಗೆ ತರಹೇವಾರಿ ಪಾತ್ರಗಳೆಲ್ಲವೂ ಒಟ್ಟಾಗಿರುತ್ತವೆ. ಈ ಪಾತ್ರಗಳನ್ನು ಇಟ್ಟುಕೊಂಡು ಒಂದಷ್ಟು ಸನ್ನಿವೇಶಗಳನ್ನು ಬೆಳೆಸುತ್ತಾ, ಇನ್ನೊಂದಿಷ್ಟು ಮಜವಾದ ಸನ್ನಿವೇಶಗಳನ್ನು ಸೃಷ್ಟಿಸುವ ಅವಕಾಶ ನಿರ್ದೇಶಕರಿಗಿತ್ತು.

ಆದರೆ, ಚಿತ್ರ ಆರಂಭವಾಗಿ ಇಂಟರ್‌ವಲ್‌ವರೆಗೆ ಪಿಕ್‌ಅಪ್‌ ಸರ್ವೀಸ್‌ಗೆ ಕಥೆ ಸೀಮಿತವಾಗಿರುತ್ತದೆ. ಮೊದಲೇ ಹೇಳಿದಂತೆ ಈ ಚಿತ್ರದ ಪ್ರಮುಖ ಅಂಶ ಬಸ್‌ ಹೈಜಾಕ್‌. ಖುಷಿ ಖುಷಿಯಾಗಿ ಹತ್ತಿದ ಬಸ್‌ ಹೈಜಾಕ್‌ ಆಗುತ್ತಿದೆ ಎಂದು ಗೊತ್ತಾದಾಗ ಅದರೊಳಗಿನ ಪ್ರಯಾಣಿಕರ ಮನಸ್ಥಿತಿ, ಆ ಸಂದರ್ಭ ಹೇಗಿರಬೇಡ ಹೇಳಿ. ಆದರೆ, ಆ ಅಂಶ ಇಲ್ಲಿ ಸರಿಯಾಗಿ ಸೆರೆಯಾಗಿಲ್ಲ. ದ್ವಿತೀಯಾರ್ಧ ತುಂಬಾ ಪೊಲೀಸರ ಹುಡುಕಾಟವೇ ಆವರಿಸಿದ್ದು, ಇತರ ಅಂಶಗಳು ಗೌಣವಾಗಿವೆ.

Advertisement

ಸಿನಿಮಾದ ಕ್ಲೈಮ್ಯಾಕ್ಸ್‌ ವೇಳೆ ಬರುವ ಫ್ಲ್ಯಾಶ್‌ಬ್ಯಾಕ್‌ ಈ ಚಿತ್ರದ ಹೈಲೈಟ್‌. ಈ ಮೂಲಕ ಸಿನಿಮಾಕ್ಕೊಂದು ಸೆಂಟಿಮೆಂಟ್‌ ಟಚ್‌ ಕೊಡಲು ಪ್ರಯತ್ನಿಸಿದ್ದಾರೆ. “ಪ್ರಯಾಣಿಕರ ಗಮನಕ್ಕೆ’ ಚಿತ್ರದಲ್ಲಿ ಒಂದಷ್ಟು ತಪ್ಪುಗಳಿದ್ದರೂ, ಇದು ಕೆಟ್ಟ ಸಿನಿಮಾವಲ್ಲ. ಇಲ್ಲಿ ಅನಾವಶ್ಯಕ ಕಾಮಿಡಿ, ಬಿಲ್ಡಪ್‌, ಸಾಂಗ್‌ ಯಾವುದೂ ಇಲ್ಲ. ಪ್ರೇಕ್ಷಕರಿಗೆ “ಕಿರಿಕಿರಿ’ ನೀಡದಂತಹ ಸಿನಿಮಾ. ಯಾವುದೇ ದೃಶ್ಯಗಳನ್ನು ಹೆಚ್ಚು ಎಳೆದಾಡಿಲ್ಲ.

ಅದೇ ಕಾರಣದಿಣದ ಸಿನಿಮಾ ತನ್ನ ಪಾಡಿಗೆ ತಣ್ಣಗೆ ಸಾಗುತ್ತಿರುತ್ತದೆ. ಈ ತಣ್ಣನೆಯ ಪಯಣದಲ್ಲಿ ಕುತೂಹಲ, ಖುಷಿ, ಬೇಸರ, ಆಕಳಿಕೆ ಎಲ್ಲವೂ ನಿಮಗೆ ಎದುರಾಗುತ್ತದೆ. ಅಂತಿಮವಾಗಿ ತೆರೆಮೇಲೆ ಒಂದು ಸಂದೇಶವನ್ನು ನೀವು ಕಣ್ತುಂಬಿಕೊಳ್ಳಬಹುದು. ಚಿತ್ರದಲ್ಲಿ ಭರತ್‌ ಸರ್ಜಾ, ಲೋಕೇಶ್‌, ಅಮಿತಾ ರಂಗನಾಥ್‌, ದೀಪಕ್‌ ಶೆಟ್ಟಿ, ನಂಜಪ್ಪ, ಗಿರೀಶ್‌, ಬೇಬಿ ಸೋನಿಯ, ಪವಿತ್ರ, ನಿನಾದ್‌ ಹರಿತ್ಸ, ಪ್ರಣವ್‌ ಮೂರ್ತಿ ಇತರರು ನಟಿಸಿದ್ದಾರೆ.

ಇಲ್ಲಿ ಸಾಕಷ್ಟು ಮಂದಿ ಕಲಾವಿದರಿದ್ದರೂ ಯಾರೊಬ್ಬರು ವೈಯಕ್ತಿಕವಾಗಿ ಗಮನ ಸೆಳೆಯುವುದಿಲ್ಲ. ಅಂತಹ ಅವಕಾಶವನ್ನು ಕಥೆ ಕೊಟ್ಟಿಲ್ಲವೋ, ನಿರ್ದೇಶಕರು ಕಲ್ಪಿಸಿಲ್ಲವೋ. ತಕ್ಕಮಟ್ಟಿಗೆ ಗಮನ ಸೆಳೆದಿರೋದು ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿರುವ ದೀಪಕ್‌ ಶೆಟ್ಟಿ. ಚಿತ್ರದಲ್ಲಿ ಹಾಡು ಹಾಗೂ ಛಾಯಾಗ್ರಹಣಕ್ಕೆ ಹೆಚ್ಚಿನ ಮಹತ್ವವಿಲ್ಲ.

ಚಿತ್ರ: ಪ್ರಯಾಣಿಕರ ಗಮನಕ್ಕೆ
ನಿರ್ಮಾಣ: ಸುರೇಶ್‌
ನಿರ್ದೇಶನ: ಮನೋಹರ್‌
ತಾರಾಗಣ: ಭರತ್‌ ಸರ್ಜಾ, ಲೋಕೇಶ್‌ ಅಮಿತಾ ರಂಗನಾಥ್‌, ದೀಪಕ್‌ ಶೆಟ್ಟಿ, ನಂಜಪ್ಪ, ಗಿರೀಶ್‌ ಮುಂತಾದವರು

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next