ಚಿಂಚೋಳಿ: ಹಿಂದುಳಿದ ಪ್ರದೇಶವಾದ ತಾಲೂಕನ್ನು ಸರ್ವಾಂಗೀಣ ಅಭಿವೃದ್ಧಿ ಮಾಡುವುದೇ ತಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಶಾಸಕರಾದ ಡಾ| ಅವಿನಾಶ ಜಾಧವ ಹೇಳಿದರು.
ತಾಲೂಕಿನ ಚಿಮ್ಮಾಇದಲಾಯಿ ಗ್ರಾಮದಲ್ಲಿ 2019-20ರ 5054 ಯೋಜನೆ ಹಾಗೂ 2020-21ನೇ ಸಾಲಿನ ಕೆಕೆಆರ್‌ಡಿಬಿ ಮೈಕ್ರೋ ಯೋಜನೆ ಅಡಿಯಲ್ಲಿ 3.70ಕೋಟಿ ರೂ. ಗಳಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಅಡಿಗಲ್ಲು ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಜಾರಿ ಗೊಳಿಸಿದ ಜಲಜೀವನ ಮಿಷನ್ ಅಡಿಯಲ್ಲಿ ಒಟ್ಟು 1.70ಕೋಟಿ ರೂ. ಮಂಜೂರು ಮಾಡಿ ಎಲ್ಲ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ತೇರ ಮೈದಾನದಲ್ಲಿ ಸಿಮೆಂಟ್ ರಸ್ತೆಗಾಗಿ 38 ಲಕ್ಷ ರೂ., ಮೂರು ಶಾಲೆ ಕೋಣೆಗಳನ್ನು ನಿರ್ಮಿಸಲು 32 ಲಕ್ಷ ರೂ., ಗಾರಂಪಳ್ಳಿ- ಚಿಮ್ಮಾಇದಲಾಯಿ ರಸ್ತೆಗೆ 65 ಲಕ್ಷ ರೂ., ಹೈಮಾಸ್ಟ್ ದೀಪಕ್ಕಾಗಿ 19 ಲಕ್ಷ ರೂ., ಕಸ ವಿಲೇವಾರಿ ವಾಹನ ಸೇರಿದಂತೆ ಇನ್ನಿತರ ಕಾರ್ಯಗಳಿಗಾಗಿ 3.70 ಕೋಟಿ ರೂ. ಅನುದಾನ ನೀಡಿ ಗ್ರಾಮಕ್ಕೆ ಮೂಲಸೌಕರ್ಯ ಒದಗಿಸಿದ್ದೇನೆ ಎಂದರು.
ಚಿಂಚೋಳಿ-ಕಲಬುರಗಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಕಬ್ಬು ನುರಿಸುವ ಕೆಲಸ ಪ್ರಾರಂಭವಾಗಲಿದೆ. ಇದರಿಂದ ರೈತರಿಗೆ ಸಾಕಷ್ಟು ಉಪಯೋಗವಾಗಲಿದೆ. ಬೀದರ ಜಿಲ್ಲೆಯ ಬಾಪೂರ-ಮಹೆಬೂಬನಗರ (ತೆಲಂಗಾಣ) ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ 703 ಕೋಟಿ ರೂ. ಅನುದಾನ ಮಂಜೂರಿಗೊಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ತಾಲೂಕಿನಲ್ಲಿ ಒಟ್ಟು 58 ಕಿ.ಮೀ ರಸ್ತೆಯಿರುವುದರಿಂದ ಸಾಕಷ್ಟು ಅಭಿವೃದ್ಧಿ ಆಗುತ್ತಿವೆ ಎಂದು ಹೇಳಿದರು.
ಕೃಷಿ ವಿಸ್ತಿರಣಾ ಕೇಂದ್ರ ಮಂಜೂರು: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಭೀಮರಾಯಗುಡಿ ಕೃಷಿ ವಿಸ್ತಿರಣಾ ಕೇಂದ್ರವನ್ನು ಕೃಷಿ ಸಚಿವ ಬಿ.ಸಿ. ಪಾಟೀಲ ತಾಲೂಕಿಗೆ ಸ್ಥಳಾಂತರಗೊಳಿಸಿ ಮಂಜೂರಿಗೊಳಿಸಿದ್ದಾರೆ. ಇದರಿಂದ ರೈತರಿಗೆ ಉಪಯೋಗವಾಗಲಿದೆ ಎಂದರು.
ಬಿಜೆಪಿ ಮುಖಂಡ ಗುಂಡಪ್ಪ ಅವರಾದಿ ಮಾತನಾಡಿ, ಗ್ರಾಪಂದಲ್ಲಿ ಒಟ್ಟು 480 ಬೋಗಸ್ ಶೌಚಾಲಯ ಸೃಷ್ಟಿಸಿ ಹಣ ಲಪಟಾಯಿಸಿದ್ದಾರೆ. ಆದ್ದರಿಂದ ಇದನ್ನು ತನಿಖೆಗೆ ಒಳಪಡಿಸಿ, ಮಹಿಳೆಯರಿಗೆ ಶೌಚಾಲಯ ನಿರ್ಮಿಸಿಕೊಡಬೇಕು ಎಂದರು.
ಮುಖಂಡರಾದ ರಾಜೇಂದ್ರ ಗುತ್ತೇದಾರ, ದೌಲಪ್ಪ ಸುಣಗಾರ, ಶಿವಯೋಗಿ ರುಸ್ತಂಪುರ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ರೇಣುಕಾ ಅವರಾದಿ, ಅಮರ ಲೊಡನೋರ, ಭೀಮಶೆಟ್ಟಿ ಮುರುಡಾ, ಮಹೇಂದ್ರ ಪೂಜಾರಿ, ಎಇಇ ಆನಂದ ಕಟ್ಟಿ, ಎಇಇ ಮಹಮ್ಮದ್ ಹುಸೇನ, ಕೆ.ಎಂ.ಬಾರಿ, ಶಿವಶರಣಪ್ಪ ಮಾಲಿಪಾಟೀಲ, ಮಲ್ಲಿಕಾರ್ಜುನ ಬೆಳಕೇರಿ, ಚಂದ್ರಶೇಖರ ಗುತ್ತೇದಾರ, ಪ್ರೇಮಸಿಂಗ್ ಜಾಧವ, ಅಶೋಕ ಚವ್ಹಾಣ, ಜೆಇ ಲಕ್ಷ್ಮಣ ಕುಂಬಾರ, ಗಣಪತರಾವ್, ಲಕ್ಷ್ಮಣ ಆವಂಟಿ, ಎಇಇ ಪ್ರಕಾಶ ಕುಲಕರ್ಣಿ, ಲಕ್ಷ್ಮೀ ಇನ್ನಿತರರಿದ್ದರು. ಗುಂಡಪ್ಪ ಅವರಾದಿ ಸ್ವಾಗತಿಸಿದರು, ಶ್ರೀನಿವಾಸ ಚಿಂಚೋಳಿಕರ ವಂದಿಸಿದರು.