Advertisement

ಆತ್ಮ ವಿಶ್ವಾಸದಿಂದ ಮುನ್ನಡೆದರೆ ಗುರಿ ಸಾಧನೆ

09:41 PM Jan 03, 2022 | Team Udayavani |

ದಾವಣಗೆರೆ: ಸಾಧಕರು ಎಂದೆಂದಿಗೂ ಪ್ರಶಸ್ತಿಗೆ ಅರ್ಜಿ ಹಿಡಿದು ಹೋಗುವಂತಾಗಬಾರದು ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಡಾ| ಮಹೇಶ್‌ ಜೋಶಿ ಹೇಳಿದರು.

Advertisement

ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ಸಂಜೆ ನಡೆದ “ಜಿಲ್ಲೆ ಸಮಾಚಾರ ಬಳಗ’ ಕೊಡ ಮಾಡುವ “ವರ್ಷದ ವ್ಯಕ್ತಿ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಧಕರು ಪ್ರಶಸ್ತಿಗೆ ಅರ್ಜಿ ಹಿಡಿದು ಹೋಗುವಂತೆ ಆಗಬಾರದು. ಸರ್ಕಾರವೇ ಆಗಲಿ ಸಂಸ್ಥೆಯೇ ಗುರುತಿಸಿ ಪ್ರಶಸ್ತಿ ನೀಡುವುದು ಸಾಧಕರಿಗೆ ನೀಡುವ ಗೌರವ ಎಂದರು.

ದಾವಣಗೆರೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ರೂವಾರಿ ಜಸ್ಟಿನ್‌ ಡಿಸೌಜ್‌ ಎಂದಿಗೂ ಪ್ರಶಸ್ತಿಗೆ ಅರ್ಜಿ ಹಾಕಿದವರಲ್ಲ. “ಜಿಲ್ಲೆ ಸಮಾಚಾರ ಬಳಗ’ ಅವರ ಉತ್ತಮ ಸಾಧನೆ ಗುರುತಿಸಿ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಾಧಕರ ಸಾಧನೆಯ ಹಾದಿ ಎಂದೆಂದಿಗೂ ಸುಲಭ ಅಲ್ಲ. ಬಹಳ ಕಷ್ಟವಾಗಿರುತ್ತದೆ. ಸಾಧನೆಯ ಹಾದಿಯಲ್ಲಿ ಹೊರಟವರು ಮೊದಲಿಗೆ ಅಕ್ಕಪಕ್ಕದವರ ಗೇಲಿ ಎದುರಿಸಬೇಕಾಗುತ್ತದೆ.

ಅಂತಹ ಗೇಲಿಯನ್ನು ಮೆಟ್ಟಿ ನಿಂತು ಆತ್ಮವಿಶ್ವಾಸದೊಂದಿಗೆ ಸಾಗಿದಾಗ ನಿಜವಾದ ಸಾಧನೆ ಸಾಧ್ಯ. ಎಲ್ಲರೂ ಸಾಧಕರಾಗಬಹುದು. ಎಲ್ಲರಲ್ಲೂ ಒಂದಲ್ಲ ಒಂದು ರೀತಿಯ ವಿಶೇಷ ಗುಣಗಳಿರುತ್ತವೆ. ಪೋಷಕರು ಮತ್ತು ಶಿಕ್ಷಕರು ಅವರಲ್ಲಿ ಇರುವ ವಿಶೇಷ ಗುಣ ಗುರುತಿಸಿ ಪ್ರೋತ್ಸಾಹ, ಸಹಕಾರ ನೀಡಬೇಕು ಎಂದರು.

ಇಂದಿನ ವಾತಾವರಣದಲ್ಲಿ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಎಂಜಿನಿಯರ್‌ ಇಲ್ಲವೇ ವೈದ್ಯರಾಗಬೇಕು ಎಂದು ಬಯಸುತ್ತಾರೆ. ಮಕ್ಕಳ ಮೇಲೆ ಇದೇ ಆಗಬೇಕು ಎಂದು ಒತ್ತಡ ಹೇರಬಾರದು. ಅವರ ಅಪೇಕ್ಷೆ ಅನುಗುಣವಾಗಿ ಮುಂದೆ ಸಾಗಲು ನೆರವು ನೀಡಬೇಕು. ವಿದ್ಯೆಯ ಮೂಲಕ ಎಲ್ಲರಲ್ಲೂ ಇರುವಂತಹ ಪ್ರತಿಭೆ ಹೊರ ತರುವ ಶಕ್ತಿ ಇದೆ. ಶಿಕ್ಷಕರು ಮತ್ತು ಪೋಷಕರು ಅಂತಹ ಕೆಲಸ ಮಾಡಬೇಕು ಎಂದು ತಿಳಿಸಿದರು ಎಂದು ತಿಳಿಸಿದರು.

Advertisement

“ವರ್ಷದ ವ್ಯಕ್ತಿ’ ಪ್ರಶಸ್ತಿ ಪುರಸ್ಕೃತರಾದ ಡಾ| ಜಸ್ಟಿನ್‌ ಡಿಸೌಜ ಮಾತನಾಡಿ, “ಜಿಲ್ಲೆ ಸಮಾಚಾರ ಬಳಗ’ ಪ್ರಶಸ್ತಿ ನೀಡಿರುವುದು ಬಹಳ ಸಂತೋಷ ತಂದಿದೆ. ಎಂ.ಎಸ್‌. ಶಿವಣ್ಣ ಅವರಂತಹ ಕಷ್ಟಜೀವಿಯೊಡನೆ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಪ್ರಾರಂಭಿಸಿ ಅವರ ಆಶಯದಂತೆ ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಸಿದ್ಧಗಂಗಾ ವಿದ್ಯಾಸಂಸ್ಥೆ ಎಂದರೆ ಮಕ್ಕಳಿಗೆ ಶಕ್ತಿ. ಇಲ್ಲಿ ಕಲಿತ ಮಕ್ಕಳು ಸಮಾಜದ ಆಸ್ತಿಯಾಗಿ ಬೆಳೆದಿರುವುದು ಸಂತೋಷದ ವಿಚಾರ ಎಂದರು.

ಬಾಪೂಜಿ ವಿದ್ಯಾಸಂಸ್ಥೆಯ ಅಥಣಿ ಎಸ್‌. ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆ ಸಮಾಚಾರ ಬಳಗದ ಸಂಸ್ಥಾಪಕ ವಿ. ಹನುಮಂತಪ್ಪ, ಡಾ| ಈಶ್ವರ ಶರ್ಮ, ಅಧ್ಯಕ್ಷೆ ಕೆ.ಎಚ್‌. ಸತ್ಯಭಾಮ, ಎಚ್‌. ವೆಂಕಟೇಶ್‌, ಎಚ್‌. ಭಾರತಿ ಇತರರು ಇದ್ದರು.

 

 

Advertisement

Udayavani is now on Telegram. Click here to join our channel and stay updated with the latest news.

Next