Advertisement

Goa; ಕನ್ನಡದ ಶುದ್ಧ ಭಾಷೆಯನ್ನು ನಾವು ಯಕ್ಷಗಾನದಲ್ಲಿ ಕಾಣಬಹುದು: ಶಾಸಕ ಗಂಟಿಹೊಳೆ

05:58 PM Nov 04, 2023 | Team Udayavani |

ಪಣಜಿ: ಕನ್ನಡದ ಶುದ್ಧ ಭಾಷೆಯನ್ನು ನಾವು ಯಕ್ಷಗಾನದಲ್ಲಿ ಕಾಣಬಹುದು. ಶಿಸ್ತು,ಸಂಸ್ಕಾರ,ಶೃದ್ಧಾ ಭಕ್ತಿಯನ್ನು ಯಕ್ಷಗಾನದಲ್ಲಿ ಕಾಣಲು ಸಾಧ್ಯವಿದೆ. ಕರಾವಳಿಯ ಗಂಡು ಕಲೆಯಲ್ಲಿ ಸಂಘಟನೆಯ ಜೊತೆಗೆ ಭಾಷಾ ಶುದ್ಧತೆಯೂ ಇದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ನುಡಿದರು.

Advertisement

ಗೋವಾ ರಾಜಧಾನಿ ಪಣಜಿಯ ಮೆನೆಜಿಸ್ ಬ್ರಾಗಾಂಜಾ ಸಭಾಗೃಹದಲ್ಲಿ ಆಯೋಜಿಸಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ 39 ನೇಯ ಗೋವಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಯುವ ಸಮುದಾಯ ಯಕ್ಷಗಾನ ಆಕರ್ಷಣೆಗೆ ಒಳಗಾಗಿದ್ದಾರೆ. ಪುರಾಣದ ಕಥೆಯನ್ನು ತಿಳಿದುಕೊಳ್ಳುವ ಆಸಕ್ತಿಯೂ ಯುವ ಸಮುದಾಯಕ್ಕಿದೆ. ಯಕ್ಷಗಾನ ಮೇಲ್ಪಂಕ್ತಿಯಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ. ಯಕ್ಷಗಾನವನ್ನು ಆರಾಧಿಸೋಣ, ಪ್ರೀತಿಸೋಣ, ಎಂದು ಶಾಸಕ ಗುರುರಾಜ ಗಂಟಿಹೊಳೆ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಧಾನ ಸಂಚಾಲಕ ಶಶಿಧರ ಶೆಟ್ಟಿ ಮಾತನಾಡಿ, ಮುಂದಿನ ವರ್ಷ ಗೋವಾದ ಬೀಚ್ ಬಳಿ ಪಟ್ಲ ಫೌಂಡೇಶನ್‍ನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಪಟ್ಲ ಫೌಂಡೇಶನ್ ಟ್ರಸ್ಟನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಗೋವಾದಲ್ಲಿ ಘಟಕ ಸ್ಥಾಪಿಸುವುದು ಬಹುದಿನಗಳ ಕನಸಾಗಿತ್ತು. ಗೋವಾ ಘಟಕದ ಅಧ್ಯಕ್ಷರಾದ ಗಣೇಶ ಶೆಟ್ಟಿ ಇರ್ವತ್ತೂರು ಜವಾಬ್ದಾರಿ ಹೊತ್ತು ಗೋವಾ ಘಟಕ ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಗೋವಾ ಘಟಕದ ಅಡಿ ಯಕ್ಷಗಾನಕ್ಕೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.

Advertisement

ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಪ್ರಾಸ್ತಾವಿಕ ಮಾತನಾಡಿದರು. ಸಮಾರಂಭದಲ್ಲಿ ಕಂಬಳ ವಿಭಾಗದ ಅಶೋಕ ಶೆಟ್ಟಿ ಬೇಲಾಡಿ, ಮಾಜಿ ರಣಜಿ ಆಟಗಾರ ಜಯೇಶ್ ಶೆಟ್ಟಿ, ಯಕ್ಷಗಾನ ಕಲಾವಿದರು ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಮಂದಾರ್ತಿ ನಡೂರು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕಲಾವಿದರಿಂದ ಶಿವದೂತ ಪಂಜುರ್ಲಿ ಯಕ್ಷಗಾನ ಪ್ರದರ್ಶನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next