Advertisement

ಗೋವಾ ಸಂಪುಟ ವಲಸಿಗರಿಗೆ ಆದ್ಯತೆ

03:21 PM Jul 20, 2019 | Team Udayavani |

ಪಣಜಿ: ಕಾಂಗ್ರೆಸ್‌ನಿಂದ 10 ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡುತ್ತಿದ್ದಂತೆಯೇ ಶನಿವಾರ ಸಚಿವ ಸಂಪುಟ ಪುನಾರಚನೆ ಮಾಡಿರುವ ಗೋವಾ ಸಿಎಂ ಪ್ರಮೋದ್‌ ಸಾವಂತ್‌, ಗೋವಾ ಫಾರ್ವರ್ಡ್‌ ಪಾರ್ಟಿ (ಜಿಎಫ್ಪಿ)ಯ ಮೂವರು ಹಾಗೂ ಒಬ್ಬ ಸ್ವತಂತ್ರ ಶಾಸಕರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿದ್ದಾರೆ.

Advertisement

ಉಪಸಭಾಪತಿಯಾಗಿದ್ದ ಮೈಕೆಲ್‌ ಲೋಬೋ ಹಾಗೂ ಬಿಜೆಪಿಗೆ ಸೇರಿದ ಕಾಂಗ್ರೆಸ್‌ನ 10 ಶಾಸಕರ ಪೈಕಿ ಮೂವರಿಗೆ ಮಂತ್ರಿ ಪಟ್ಟ ಸಿಕ್ಕಿದೆ. ರಾಜಭವನದಲ್ಲಿ ಶನಿವಾರ ಮಧ್ಯಾಹ್ನ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಮೃದುಲಾ ಸಿನ್ಹಾ ಹೊಸ ಸಚಿವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಕಾಂಗ್ರೆಸ್‌ ವಿಪಕ್ಷ ನಾಯಕರಾಗಿದ್ದ ಚಂದ್ರಕಾಂತ ಕವಲೇಕರ್‌ ಹಾಗೂ ಪಾರೀಕರ್‌ ನಿಧನದ ನಂತರ ಅವರ ಕ್ಷೇತ್ರ ಪಣಜಿಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಅಟನಾಸಿಯೋ ಮಾನ್ಸೆರಾಟ್ಟೆ, ಫಿಲಿಪ್‌ ನೆರಿ ರೋಡ್ರಿಗಸ್‌ ಸಂಪುಟ ಸೇರಿದ್ದಾರೆ.

ಈವರೆಗೆ ಜಿಎಫ್ಪಿಯಿಂದ ಇಬ್ಬರು ಸಚಿವರು ಹಾಗೂ ಉಪಮುಖ್ಯಮಂತ್ರಿಯಾಗಿ ವಿಜಯ್‌ ಸರದೇಸಾಯಿ ಇದ್ದರು. ಓರ್ವ ಸ್ವತಂತ್ರ ಶಾಸಕ ರೋಹನ್‌ ಖೌಂತೆಗೆ ಕಂದಾಯ ಸಚಿವ ಹುದ್ದೆ ಇತ್ತು. ಕಾಂಗ್ರೆಸ್‌ ಶಾಸಕರು ಪಕ್ಷಾಂತರ ಮಾಡಿದ್ದರಿಂದ ಬಿಜೆಪಿ ಸ್ಪಷ್ಟ ಬಹುಮತ ಹೊಂದಿದ್ದು, ಜಿಎಫ್ಪಿಯನ್ನು ಸಚಿವ ಸ್ಥಾನದಿಂದ ಕೈಬಿಡಲಾಗಿದೆ.

ಕಾರ್ಯಕರ್ತರಲ್ಲಿ ಅಸಮಾಧಾನ: ಕಾಂಗ್ರೆಸ್‌ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಕ್ಕೆ ಬಿಜೆಪಿಯ ಹಲವು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾನ್ಸೆರಾಟ್ಟೆ ವಿರುದ್ಧ ಅತ್ಯಾಚಾರ ಆರೋಪಗಳಿವೆ. ಅಷ್ಟೇ ಅಲ್ಲ, ಕೆಲವು ಇತರ ಶಾಸಕರ ವಿರುದ್ಧವೂ ಹಲವು ಆರೋಪಗಳಿವೆ. ಇವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದು, ಪಕ್ಷದ ನೈತಿಕತೆಗೆ ಧಕ್ಕೆ ಉಂಟಾಗಿದೆ ಎಂದು ಆಕ್ಷೇಪಿಸಿದ್ದಾರೆ.

ಪಾರೀಕರ್‌ ಆತ್ಮ ಈಗ ಸಾವನ್ನಪ್ಪಿತು: ಸರದೇಸಾಯಿ
ಉಪಮುಖ್ಯಮಂತ್ರಿ ಸ್ಥಾನದಿಂದ ಕೈಬಿಟ್ಟಿದ್ದರಿಂದಾಗಿ ಜಿಎಫ್ಪಿ ಮುಖಂಡ ಸರದೇಸಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಸರಕಾರಕ್ಕೆ ನೀಡಿದ ಬೆಂಬಲವನ್ನೂ ಅವರು ಹಿಂಪಡೆದಿದ್ದಾರೆ. ಪಾರೀಕರ್‌ ಆತ್ಮ ಈಗ ಸಾವನ್ನಪ್ಪಿದೆ. ಮಾರ್ಚ್‌ 17 ರಂದು ಅವರು ದೈಹಿಕವಾಗಿ ನಿಧನರಾಗಿದ್ದರು. ಪಾರೀಕರ್‌ ಇದ್ದರೆ ಈ ಬೆಳವಣಿಗೆ ನಡೆಯಲು ಬಿಡುತ್ತಿರಲಿಲ್ಲ, ಇಂದು ಅವರ ರಾಜಕೀಯ ಶಕೆ ಮುಗಿದಿದೆ ಎಂದು ಅವರು ಅಸಮಾಧಾನ ತೋಡಿಕೊಂಡಿದ್ದಾರೆ. ಬಿಜೆಪಿ ಈಗ 40 ಸದಸ್ಯ ಬಲದ ವಿಧಾನಸಭೆಯಲ್ಲಿ 27 ಶಾಸಕರನ್ನು ಹೊಂದಿದ್ದು, ಸ್ಪಷ್ಟ ಬಹುಮತ ಹೊಂದಿದೆ. ಹೀಗಾಗಿ ಜಿಎಫ್ಪಿ ಬೆಂಬಲ ನೀಡದಿದ್ದರೂ ಸರಕಾರಕ್ಕೆ ಯಾವ ತೊಂದರೆಯೂ ಇಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next