Advertisement

ಗೋವಾ ಕನ್ನಡಿಗರ ನೆರವಿಗೆ ಧಾವಿಸಲು ಒತ್ತಾಯ

11:00 PM Mar 13, 2020 | Lakshmi GovindaRaj |

ವಿಧಾನ ಪರಿಷತ್‌: ಅತಂತ್ರ ಸ್ಥಿತಿಯಲ್ಲಿರುವ ಗೋವಾ ಕನ್ನಡಿಗರ ರಕ್ಷಣೆಗೆ ಸರ್ಕಾರ ಧಾವಿಸಬೇಕು ಎಂದು ಜೆಡಿಎಸ್‌ನ ಬಸವರಾಜ ಹೊರಟ್ಟಿ ಒತ್ತಾಯಿಸಿದರು. ಮೇಲ್ಮನೆಯಲ್ಲಿ ಶುಕ್ರವಾರ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಗೋವಾ ಜನರ ಹಿತ ಕಾಯಲು ನಡೆಯುತ್ತಿರುವ “ಪೋಗೋ ಆಂದೋಲನ’ದ ಮೂಲಕ ದಶಕಗಳಿಂದ ಗೋವಾದಲ್ಲಿ ನೆಲೆಸಿರುವ ಕನ್ನಡಿಗರನ್ನು ಬಲವಂತವಾಗಿ ಹೊರ ಹಾಕಲಾಗುತ್ತಿದೆ.

Advertisement

ಆರು ತಿಂಗಳಿಂದ ಗೋವಾದಲ್ಲಿ ನಡೆಯುತ್ತಿರುವ ಈ ಆಂದೋಲನಕ್ಕೆ ಕನ್ನಡಿಗರು ತತ್ತರಿಸಿದ್ದಾರೆ ಎಂದು ಸರ್ಕಾರದ ಗಮನ ಸೆಳೆದರು.  ಗೋವಾದ 13.60 ಲಕ್ಷ ಜನಸಂಖ್ಯೆಯಲ್ಲಿ ಸುಮಾರು ನಾಲ್ಕು ಲಕ್ಷ ಕನ್ನಡಿಗರಿದ್ದಾರೆ. ಇದೀಗ ಜಮ್ಮು-ಕಾಶ್ಮೀರಕ್ಕೆ ಈ ಹಿಂದೆ ನೀಡಿದ್ದ 370ರ ವಿಶೇಷ ಸ್ಥಾನಮಾನದ ಮಾದರಿಯಲ್ಲಿ ಗೋವಾ ರಕ್ಷಣೆಗಾಗಿ ಆರಂಭವಾಗಿರುವ “ಪೋಗೋ ಅಭಿಯಾನ’ದಿಂದ ಕನ್ನಡಿಗರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೀಗಾಗಿ, ರಾಜ್ಯ ಸರ್ಕಾರ ಕೂಡಲೇ ಅವರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಪ್ರತಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ, ಗೋವಾದಲ್ಲಿ ಉತ್ತರ ಕರ್ನಾಟಕ ಭಾಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗೋವಾ ವಿಮೋಚನೆಯಲ್ಲಿ ಕನ್ನಡಿಗರದು ಪ್ರಮುಖ ಪಾತ್ರವಿದೆ. ಹೀಗಾಗಿ, ರಾಜ್ಯ ಸರ್ಕಾರ ಒಂದು ನಿಯೋಗವನ್ನು ಗೋವಾಗೆ ಕಳುಹಿಸಿ, ವಾಸ್ತವಾಂಶ ತಿಳಿದುಕೊಳ್ಳಬೇಕು.

ಭಯದಲ್ಲಿ ಬದುಕುತ್ತಿರುವ ಕನ್ನಡಿಗರಿಗೆ ಧೈರ್ಯ ತುಂಬಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next