Advertisement

Goa: ಗೋವಾದಲ್ಲಿವೆ 300ಕ್ಕೂ ಹೆಚ್ಚು ಅಕ್ರಮ ಹೊಟೇಲ್‌ಗಳು- ಸಚಿವ ರೋಹನ್ ಖಂವಟೆ ಮಾಹಿತಿ

05:23 PM Aug 05, 2023 | Team Udayavani |

ಪಣಜಿ: ಗೋವಾ ದೇಶೀಯಹಾಗೂ ವಿದೇಶಿಯ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಪ್ರತಿ ವರ್ಷ ದೇಶಾದ್ಯಂತ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ, ಗೋವಾದಲ್ಲಿ ಪ್ರವಾಸೋದ್ಯಮ ಹೆಸರಿನಲ್ಲಿ ಹಲವರಿಗೆ ವಂಚನೆ ಮಾಡುತ್ತಿರುವ ಪ್ರಕರಣಗಳೂ ಇವೆ. ಆದ್ದರಿಂದ, ಗೋವಾ ಸರ್ಕಾರ ಆಗಾಗ್ಗೆ ಪ್ರವಾಸಿಗರಿಗೆ ವಿವಿಧ ಮಾಹಿತಿಯನ್ನು ನೀಡುತ್ತದೆ. ಇತ್ತೀಚಿನ ಮಾಹಿತಿ ಪ್ರಕಾರ ರಾಜ್ಯದಲ್ಲಿ 300ಕ್ಕೂ ಹೆಚ್ಚು ಅಕ್ರಮ ಹೊಟೇಲ್ ಗಳು ಗೋವಾದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸ್ವತಃ ಪ್ರವಾಸೋದ್ಯಮ ಸಚಿವ ರೋಹನ್ ಖಂವಟೆ ಅವರು ವಿಧಾನಸಭೆಗೆ ನೀಡಿದ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.

Advertisement

ಹಾಗಾಗಿ ಪ್ರವಾಸಿಗರು ಗೋವಾಕ್ಕೆ ಬಂದು ಹೊಟೇಲ್ ಬುಕ್ ಮಾಡುವ ಮುನ್ನ ಅಕ್ರಮ ಹೋಟೆಲ್ ನಲ್ಲಿ ಬುಕ್ ಮಾಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ, ಅವರು ಮೋಸ ಹೋಗಬಹುದು ಮತ್ತು ಅನಗತ್ಯ ಕಿರುಕುಳವನ್ನು ಎದುರಿಸಬೇಕಾಗುತ್ತದೆ. ಸಚಿವ ರೋಹನ್ ಖಂವಟೆ ಮಾತನಾಡಿ- ರಾಜ್ಯದ ಉತ್ತರ ಗೋವಾದಲ್ಲಿ 188 ಮತ್ತು ದಕ್ಷಿಣ ಗೋವಾ ಜಿಲ್ಲೆಗಳಲ್ಲಿ 113 ಹೋಟೆಲ್‍ಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಯಾಗಿಲ್ಲ. ಆದ್ದರಿಂದ, ಈ ಹೋಟೆಲ್‍ಗಳು ತಾಂತ್ರಿಕವಾಗಿ ಕಾನೂನುಬಾಹಿರವಾಗಿವೆ. ನೋಂದಣಿಯಾಗದ ಕಾರಣ ಈ ಹೋಟೆಲ್‍ಗಳಿಗೆ ನೋಟಿಸ್ ನೀಡಲಾಗಿದೆ ಎಂದು ಸಚಿವ ಖಂವಟೆ ಮಾಹಿತಿ ನೀಡಿದರು.

ಇದೇ ವೇಳೆ ಪ್ರವಾಸೋದ್ಯಮ ಇಲಾಖೆ ಟೈಮ್ ಸಾಪ್ಟವೇರ್ ತಂದಿದೆ. ಇದು ಹೋಟೆಲ್ ಬಗ್ಗೆ ಎಲ್ಲಾ ಮಾಹಿತಿಯನ್ನು ಒದಗಿಸುತ್ತದೆ. ಪ್ರವಾಸಿಗರು ಗೋವಾಕ್ಕೆ ಬಂದು ಇಂತಹ ಅಕ್ರಮ ಹೋಟೆಲ್‍ಗಳಲ್ಲಿ ರೂಂ ಬುಕ್ ಮಾಡಿ ತೊಂದರೆಗೆ ಸಿಲುಕಬಾರದು.  ಪ್ರವಾಸಿಗರು ಇಂತಹ ಅಕ್ರಮ ಹೋಟೆಲ್‍ಗಳಲ್ಲಿ ಬುಕ್ ಮಾಡಿದರೆ ಅವರಿಗೆ ಅನಗತ್ಯ ಕಿರುಕುಳಕ್ಕೆ ಎದುರಾಗಬಹುದು. ಪ್ರವಾಸಿಗರು ಪ್ರವಾಸೋದ್ಯಮಕ್ಕಾಗಿ ಇಲ್ಲಿಗೆ ಆಗಮಿಸಿ ವಿವಿಧ ತೊಂದರೆಗಳಿಗೆ ಸಿಲುಕದಂತೆ ಎಚ್ಚರವಹಿಸಬೇಕು ಎಂದು ಸಚಿವ ರೋಹನ್ ಖಂವಟೆ ಮನವಿ ಮಾಡಿದರು.

ಹೋಟೆಲ್‍ಗಳ ಹೆಸರಿನಲ್ಲಿ ನಕಲಿ ವೆಬ್‍ಸೈಟ್‍ಗಳಿಂದ ಪ್ರವಾಸಿಗರನ್ನು ಸುಲಿಗೆ ಮಾಡುತ್ತಿರುವ ವಿಷಯ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿತ್ತು. ಗೋವಾ ಪ್ರವಾಸೋದ್ಯಮ ಇಲಾಖೆಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ನೀವು ಅಂತಹ ವಂಚನೆಯನ್ನು ತಪ್ಪಿಸಬಹುದು ಅಥವಾ ಗೋವಾ ಪ್ರವಾಸೋದ್ಯಮ ಇಲಾಖೆಯ ವೆಬ್‍ಸೈಟ್‍ಗಳಲ್ಲಿ ವಿವಿಧ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳೊಂದಿಗೆ ನೀವು ಮಾಹಿತಿ ಪಡೆದುಕೊಳ್ಳಬಹುದು ಎಂದು ಸಚಿವ ರೋಹನ್ ಖಂವಟೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next