ಬೆಂಗಳೂರು: ಗೋವಾದಲ್ಲಿ ಭಾನುವಾರ ನಡೆದ ಪ್ರತಿಷ್ಠಿತ ವಾಕಿಂಗ್, ಸ್ವಿಮ್ಮಿಂಗ್ ಹಾಗೂ ಸೈಕ್ಲಿಂಗ್ ಮೂರು ರೀತಿಯ “ದಿ ಐರನ್ ಮ್ಯಾನ್ 70.3 ಸ್ಪರ್ಧೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಭಾಗಿಯಾಗಿ, ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ವಿಜೇತರಾದ ಪ್ರಥಮ ಜನಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಸ್ಪರ್ಧೆಯು 1.9 ಕಿಮೀ ಈಜು, 90 ಕಿಮೀ ಸೈಕ್ಲಿಂಗ್ ಮತ್ತು 21.1 ಕಿಮೀ ಓಟ ಸೇರಿದಂತೆ ಒಟ್ಟು 113 ಕಿ.ಮೀ ದೂರ ಕ್ರಮಿಸಬೇಕಿತ್ತು. ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ, ಐರನ್ ಮ್ಯಾನ್ 70.3 ಗೋವಾ ಸ್ಪರ್ಧೆಯೂ ಕ್ರೀಡೆಗೆ ಹೆಚ್ಚು ಪ್ರಸಿದ್ಧವಾಗಿದೆ. ಈ ಸ್ಪರ್ಧೆಯಲ್ಲಿ 50 ಕ್ಕೂ ಹೆಚ್ಚು ದೇಶಗಳ ಕ್ರೀಡಾಪಟುಗಳು ಭಾಗವಹಿಸುತ್ತಾರೆ. ಆ ಮೂಲಕ ಭಾರತ ಮತ್ತು ವಿಶ್ವದಾದ್ಯಂತ ಕ್ರೀಡಾಪಟುಗಳು ಮತ್ತು ಫಿಟ್ನೆಸ್ ಪ್ರಿಯರ ಪ್ರಮುಖ ಸ್ಪರ್ಧೆ ಆಗಿದೆ ಎಂದಿದ್ದಾರೆ.
ಐರನ್ ಮ್ಯಾನ್ 70.3 ಗೋವಾ ಸ್ಪರ್ಧೆಯೂ ತುಂಬಾ ಕಠಿನವಾಗಿದ್ದು, ಕಳೆದ 4 ತಿಂಗಳಿನಿಂದ ನನ್ನ ಫಿಟ್ನೆಸ್ಗಾಗಿ ನಾನು ಕಠಿನ ತರಬೇತಿ ಪಡೆದಿದ್ದೇನೆ. ಇದರ ಪರಿಣಾಮವಾಗಿ ನಾನು ಈ ಸ್ಪರ್ಧೆ ಪೂರ್ಣಗೊಳಿಸಿದ್ದೇನೆ ಎಂದು ಹಂಚಿಕೊಳ್ಳಲು ಸಂತೋಷವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಫಿಟ್ ಇಂಡಿಯಾ ಅಭಿಯಾನವೇ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಸ್ಪೂರ್ತಿ ಎಂದು ಹೇಳಿದ್ದಾರೆ.
ದೊಡ್ಡ ಮಹತ್ವಾಕಾಂಕ್ಷೆಗಳು ಹೊತ್ತು ಬೆನ್ನಟ್ಟುತ್ತಿರುವ ಭಾರತವು ಯುವ ರಾಷ್ಟ್ರವಾಗಿ ರೂಪುಗೊಳಿಸುವಲ್ಲಿ ನಾವು ನಮ್ಮ ದೈಹಿಕ ಸಾಮರ್ಥ್ಯ ಪೋಷಿಸಬೇಕು ಮತ್ತು ಹೆಚ್ಚು ಆರೋಗ್ಯಕರ ರಾಷ್ಟ್ರವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಆ ನಿಟ್ಟಿನಲ್ಲಿ ಸದೃಢನಾಗುವ ಪ್ರಯತ್ನವು ನಿಮ್ಮನ್ನು ಹೆಚ್ಚು ಶಿಸ್ತುಬದ್ಧ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.
ಪ್ರಧಾನಿ ಮೋದಿ ಶ್ಲಾಘನೆ:
ಇನ್ನು ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ಸಂಸದ ತೇಜಸ್ವಿ ಸೂರ್ಯ ಅವರ ಈ ಸಾಧನೆಯ ಶ್ಲಾಘಿಸಿದ್ದಾರೆ. ಇದು ಫಿಟ್ನೆಸ್ ಸಂಬಂಧಿತ ಚಟುವಟಿಕೆಗಳನ್ನು ಮುಂದುವರಿಸಲು ಇನ್ನೂ ಅನೇಕ ಯುವಕರಿಗೆ ಸ್ಫೂರ್ತಿ ನೀಡುತ್ತದೆ ಎಂಬುವುದು ನನಗೆ ಖಾತ್ರಿಯಿದೆ ಎಂದು ಹೇಳಿದ್ದಾರೆ.