ಪಣಜಿ/ಬೆಳಗಾವಿ: ಮಹದಾಯಿ ವಿವಾದ ಕುರಿತು ಕಳ್ಳ ಭೇಟಿ ನೀಡಿ ಪಾರಾಗುತ್ತಿದ್ದ ಗೋವಾ ಈ ಬಾರಿ ಕರ್ನಾಟಕ ಅಧಿಕಾರಿಗಳ ಕೈಗೆ ಸಿಕ್ಕು ಪೇಚಿಗೆ ಸಿಲುಕಿದೆ. ಬುಧವಾರ ಖಾನಾಪುರ ಬಳಿಯ ಕಳಸಾ ಯೋಜನಾ ಪ್ರದೇಶ ಕಣಕುಂಬಿಗೆ 8 ಜನರ ಗೋವಾ ನೀರಾವರಿ ಅಧಿ ಕಾರಿಗಳ ತಂಡ ಭೇಟಿ ನೀಡಿತ್ತು. ವಿಷಯ ತಿಳಿದ ರಾಜ್ಯ ಪೊಲೀಸ್ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ತೆರಳಿ ಪ್ರವಾಸಿ ಮಂದಿರಕ್ಕೆ ಕರೆತಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಬುಧವಾರ ಮಧ್ಯಾಹ್ನ ಗೋವಾ ಸರ್ಕಾರಿ ಜೀಪು ಮತ್ತು ಖಾಸಗಿ ಎರ್ಟಿಗಾ ವಾಹನದಲ್ಲಿ ಬಂದ ಗೋವಾ ಅಧಿ ಕಾರಿಗಳು ಮೊದಲು ಕಳಸಾ ನಾಲೆಯ ತಡೆಗೋಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆಗ ಅಲ್ಲಿದ್ದ ಕರ್ನಾಟಕದ ನೀರಾವರಿ ಇಲಾಖೆ ಸಿಬ್ಬಂದಿ ಆಕ್ಷೇಪವೆತ್ತಿದ್ದಾರೆ. ಇದರಿಂದ ಮುಜುಗರಗೊಂಡು ಮಾವುಲಿ ದೇವಸ್ಥಾನದತ್ತ ತೆರಳಿದ್ದಾರೆ. ಅಷ್ಟರಲ್ಲಿ ಕರ್ನಾಟಕದ ಸಿಬ್ಬಂದಿ ಖಾನಾಪುರ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರಿಂದ ಪಿಎಸ್‌ಐ ಸೇರಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲಿದ್ದ ಗೋವಾ ಅಧಿಕಾರಿಗಳ ವಾಹನ ಅಡ್ಡಗಟ್ಟಿ, ವಾಹನದಲ್ಲಿ ಕರ್ನಾಟಕದ ಪೊಲೀಸರು ಕುಳಿತು ಐಬಿಗೆ ಕರೆತಂದಿದ್ದಾರೆ.
ಬಳಿಕ ಪಿಎಸ್‌ಐ ಗೋವಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅನುಮತಿಯಿಲ್ಲದೇ ಈ ರೀತಿ ಯೋಜನಾ ಪ್ರದೇಶಕ್ಕೆ ಬರುವುದಿಲ್ಲ ಎಂದು ಗೋವಾ ಅಧಿ ಕಾರಿಗಳಿಂದ ಲಿಖೀತ ಪತ್ರ ಬರೆಸಿಕೊಂಡು ಬಿಡುಗಡೆ ಮಾಡಿದ್ದಾರೆ. ಕಳೆದ ಮಂಗಳವಾರ ಕೂಡ ಗೋವಾ ತಂಡವೊಂದು ಕಳಸಾ ಬಂಡೂರಿ ನಾಲಾ ಪ್ರದೇಶಕ್ಕೆ ಭೇಟಿ ನೀಡಿತ್ತು. ಕೆಲವೇ ದಿನಗಳಲ್ಲಿ ಮಹದಾಯಿ ನ್ಯಾಯಾಧಿಕರಣ ತೀರ್ಪು ಪ್ರಕಟಿಸಲಿದ್ದು ಗೋವಾ ಸರ್ಕಾರ ಕರ್ನಾಟಕದ ವಿರುದ್ಧ ಸಾûಾÂಧಾರಗಳನ್ನು ಸಂಗ್ರಹಿಸಲು ಹೆಣಗುತ್ತಿದೆ.
ಕಂಗಾಲಾದ ಪಾಳೇಕರ್: ಕಳ್ಳ ಭೇಟಿ ವೇಳೆ ರಾಜ್ಯದ ಅಧಿಕಾರಿಗಳ ಕೈಗೆ ಗೋವಾ ಅಧಿಕಾರಿಗಳು ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ಜಲಸಂಪನ್ಮೂಲ ಸಚಿವ ವಿನೋದ ಪಾಲೇಕರ್ ಕಂಗಾಲಾದ ಪ್ರಸಂಗವೂ ನಡೆಯಿತು. ನಮ್ಮ ಅಧಿಕಾರಿಗಳನ್ನು ಬಂಧಿಸಿದ್ದಾರೆ ಎಂದು ತಪ್ಪಾಗಿ ಅರ್ಥೈಸಿಕೊಂಡು ಮುಖ್ಯಮಂತ್ರಿ ಕಚೇರಿ ವರಿಷ್ಠ ಅಧಿಕಾರಿ ಕೃಷ್ಣಮೂರ್ತಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಕೂಡಲೇ ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳಿಗೆ ಕರೆ ಮಾಡುವಂತೆ ಸೂಚನೆ ನೀಡಿದರು ಎನ್ನಲಾಗಿದೆ.
ಫೋಟೊ ತೆಗೆಯಲು ತೆರಳಿದ್ದ ತಂಡ!
ಗೋವಾ ಸರ್ಕಾರವು ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಇದೀಗ ಸರ್ವೋತ್ಛ ನ್ಯಾಯಾಲಯದ ಮೆಟ್ಟಿಲೇರಿದೆ. ಕರ್ನಾಟಕವು ಕಳಸಾ ಬಂಡೂರಿ ನಾಲೆಯಿಂದ ಮಲಪ್ರಭಾ ನದಿಗೆ ಹೇಗೆ ನೀರನ್ನು ಹರಿಸಿದೆ ಎಂಬುದನ್ನು ಫೋಟೊ ಮತ್ತು ಚಿತ್ರೀಕರಣ ನಡೆಸಲು ಗೋವಾ ಅಧಿ ಕಾರಿಗಳ ತಂಡ ಬುಧವಾರ ಕಣಕುಂಬಿಗೆ ತೆರಳಿತ್ತು ಎನ್ನಲಾಗಿದೆ. ಇದನ್ನು ಸಾಕ್ಷéವನ್ನಾಗಿ ಬಳಸಿಕೊಳ್ಳಲು ಗೋವಾ ಸರ್ಕಾರವು ಯೋಚಿಸಿತ್ತು ಎನ್ನಲಾಗಿದೆ.
ಗೋವಾ ಅಧಿಕಾರಿಗಳನ್ನು ಹೆದರಿಸಲು ಕರ್ನಾಟಕ ಈ ಕೃತ್ಯವೆಸಗಿದೆ. ಅಧಿಕಾರಿಗಳನ್ನು ಬಂಧಿಸುವ ಕರ್ನಾಟಕದ ಕ್ರಮವನ್ನು ನಾವು ಖಂಡಿಸುತ್ತೇವೆ.
– ವಿನೋದ್ ಪಾಲೇಕರ್, ಗೋವಾ ನೀರಾವರಿ ಸಚಿವ