ಪಣಜಿ: ಗೋವಾ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ಬಿಡುಗಡೆಗೊಳಿಸಿದೆ.
ಕಳೆದ ಕೆಲ ದಿನಗಳ ಹಿಂದೆ 40 ಕ್ಷೇತ್ರಗಳ ಪೈಕಿ 34 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಲಾಗಿತ್ತು. ಇದೀಗ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಬಿಚೋಲಿ ಕ್ಷೇತ್ರದಿಂದ ರಾಜೇಶ್ ಪಾಟ್ನೇಕರ್, ಕಲಂಗುಟ್ ಕ್ಷೇತ್ರದಿಂದ ಜೋಸೆಫ್ ಸಿಕ್ವೇರಾ, ಸಂತಕ್ರೂಜ್ ಕ್ಷೇತ್ರದಲ್ಲಿ ಅಂಟೋನಿಯೊ ಫರ್ನಾಂಡೀಸ್, ಕುಂಭಾರಜುವೆ ಕ್ಷೇತ್ರದಿಂದ ಜೆನಿತಾ ಪಾಂಡುರಂಗ ಮಡಕಯಿಕರ್, ಕುಠ್ಠಾಳಿ ಕ್ಷೇತ್ರದಿಂದ ನಾರಾಯಣ ನಾಯ್ಕ, ಕುಡ್ತರಿ ಕ್ಷೇತ್ರದಿಂದ ಅಂಟನಿ ಬಾರ್ಬೋಸಾ ಬಿಜೆಪಿ ಟಿಕೆಟ್ ನೀಡಿದೆ.
ಕುಂಭಾರಜುವಾ ಕ್ಷೇತ್ರದಿಂದ ಶ್ರೀಪಾದ ನಾಯ್ಕ ಪುತ್ರ ಸಿದ್ದೇಶ ನಾಯ್ಕ ಕಣಕ್ಕಿಳಿಯಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಹಾಲಿ ಶಾಸಕ ಪಾಂಡುರಂಗ ಮಡಕಯಿಕರ್ ರವರ ಪತ್ನಿ ಜೆನಿತಾ ಮಡಕಯಿಕರ್ ರವರಿಗೆ ಬಿಜೆಪಿ ಟಿಕೇಟ್ ನೀಡಿದೆ. ಆದರೆ ಇದರಿಂದಾಗಿ ಸಿದ್ದೇಶ ನಾಯ್ಕ ರವರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದು ಕುತೂಹಲ ಮೂಡಿಸಿದೆ.