ಪಣಜಿ: ಮೂರನೇಯ ದರ್ಜೆಯ ರಾಜಕಾರಣಿಗಳನ್ನು ಹೊಂದಿರುವ ಗೋವಾ ಮೊದಲ ದರ್ಜೆಯ ರಾಜ್ಯವಾಗಿದೆ. ಇಲ್ಲಿನ ಜನ ಒಳ್ಳೆಯವರು, ಆದರೆ ಇಲ್ಲಿನ ರಾಜಕಾರಣಿಗಳು ಕೆಟ್ಟವರು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನುಡಿದರು.
ಪಣಜಿಯಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಆಮ್ ಆದ್ಮಿ ಪಕ್ಷದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ, ಕಳೆದ ಐದು ವರ್ಷಗಳ ಹಿಂದೆ ರಾಜ್ಯದ ಜನತೆ ಕಾಂಗ್ರೆಸ್‍ನ 17 ಶಾಸಕರನ್ನು ಆಯ್ಕೆ ಮಾಡಿದ್ದರು. ಈ ಪೈಕಿ 15 ಶಾಸಕರು ಈಗಾಗಲೇ ಮಾರಾಟವಾಗಿದ್ದಾರೆ. ಇನ್ನು ಇಬ್ಬರು ಶಾಸಕರು ಮಾತ್ರ ಉಳಿದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಹಿಂದೆ ಗೋವಾದಲ್ಲಿ ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿತ್ತು. ಆದರೆ ಈಗ ಅಭ್ಯರ್ಥಿಗಳನ್ನು ಮಾರಾಟ ಮಾಡಲಾಗುತ್ತಿದೆ. ಅಭ್ಯರ್ಥಿಗಳು ಕೋಟಿಗಟ್ಟಲೆ ಹಣಕ್ಕೆ ಮಾರಾಟವಾಗುತ್ತಿರುವುದನ್ನು ನಾವು ಕೇಳಿದ್ದೇವೆ. ಆಮ್ ಆದ್ಮಿ ಪಕ್ಷವು ಗೋವಾದಲ್ಲಿ ಮೊದಲ ” ಭ್ರಷ್ಟಾಚಾರ ಮುಕ್ತ” ಸರ್ಕಾರ ರಚಿಸಲಿದೆ ಎಂದರು.
ಇದನ್ನೂ ಓದಿ:ಅಗತ್ಯವಿದ್ದರೆ ನೈಟ್ ಕರ್ಫ್ಯೂ ಜಾರಿ ಮಾಡಿ : ಕೇಂದ್ರ ಸೂಚನೆ
ಬಿಜೆಪಿ ಅಥವಾ ಕಾಂಗ್ರೆಸ್ ಗೋವಾದಲ್ಲಿ ಗಣಿಗಾರಿಕೆಯನ್ನು ಆರಂಭಿಸಲು ಬಯಸುವುದಿಲ್ಲ. ಏಕೆಂದರೆ ಅವರ ಉದ್ದೇಶಗಳು ಸರಿಯಾಗಿಲ್ಲ. ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದ ಆರು ತಿಂಗಳೊಳಗೆ ಗಣಿಗಾರಿಕೆ ಪುನರಾರಂಭಿಸಲಿದೆ. ಗಣಿಗಾರಿಕೆ ಪುನರಾರಂಭಗೊಳ್ಳುವವರೆಗೆ ಗಣಿ ಅವಲಂಭಿತರಿಗೆ ಮಾಸಿಕ 5,000 ರೂ ಭತ್ತೆ ನೀಡಲಿದೆ ಎಂದು ಭರವಸೆ ನೀಡಿದರು.