ಪಣಜಿ: ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಗೋವಾದಲ್ಲಿ ಕ್ಯಾಸಿನೊ ಕಳೆದ ಸುಮಾರು ಒಂದೂವರೆ ವರ್ಷದಿಂದ ಬಂದ್ ಆಗಿದೆ. ಇದರ ಭಾರಿ ಪೆಟ್ಟು ರಾಜ್ಯ ಪ್ರವಾಸೋದ್ಯಮದ ಮೇಲೆ ಹಾಗೂ ರಾಜ್ಯದ ಅರ್ಥವ್ಯವಸ್ಥೆಯ ಮೇಲೆ ಬಿದ್ದಿದೆ. ಕಳೆದ ಕೆಲ ದಿನಗಳಿಂದ ಗೋವಾದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಇದರಿಂದಾಗಿ ಸರ್ಕಾರವು ನಿಯಮಾವಳಿಗಳನ್ನು ಜಾರಿಗೊಳಿಸಿ ಕ್ಯಾಸಿನೊ ಆರಂಭಿಸಲು ಪರವಾನಗಿ ನೀಡಬೇಕು ಎಂದು ಕ್ಯಾಸಿನೊಗಳ ಮಾಲೀಕರು ಸರ್ಕಾರದ ಬಳಿ ಮನವಿ ಮಾಡಿದ್ದಾರೆ ಎಂದು ಮೆಜಿಸ್ಟಿಕ್ ಪ್ರೈಡ್ ಸಂಚಾಲಕ ಶ್ರೀನಿವಾಸ್ ನಾಯಕ್ ಸ್ಥಳೀಯ ಸುದ್ದಿವಾಹಿನಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಉಮ್ಮತ್ತೂರು ಕೆರೆಗೆ ಹರಿಯದ ನೀರು: ದಿಢೀರ್ ಪ್ರತಿಭಟನೆ ಆರಂಭಿಸಿದ ರೈತರು
ಕ್ಯಾಸಿನೊ ಬಂದ್ ಇರುವುದರಿಂದ ಗೋವಾಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಪ್ರಸಕ್ತ ವರ್ಷವೂ ಗೋವಾ ರಾಜ್ಯ ಪ್ರವಾಸೋದ್ಯಮವು ದೇಶೀಯ ಪ್ರವಾಸಿಗರನ್ನೇ ಅವಲಂಭಿಸಬೇಕಾಗಲಿದೆ. ಬಹುತೇಕ ದೇಶೀಯ ಪ್ರವಾಸಿಗರು ಮನೋರಂಜನೆಗಾಗಿ ಕ್ಯಾಸಿನೊಕ್ಕೆ ತೆರಳಲು ಇಚ್ಛೆಪಡುತ್ತಾರೆ. ಆದರೆ ಗೋವಾದಲ್ಲಿ ಕ್ಯಾಸಿನೊಗಳು ಸದ್ಯ ಬಂದ್ ಇರುವುದರಿಂದ ಪ್ರವಾಸಿಗರು ಗೋವಾಕ್ಕೆ ಆಗಮಿಸುವ ಬದಲು ಹಿಮಾಚಲಪ್ರದೇಶ ಮತ್ತು ಜಮ್ಮು ಕಾಶ್ಮೀರದತ್ತ ತೆರಳುತ್ತಿದ್ದಾರೆ. ಮುಂಬರುವ ದಿನಗಳಲ್ಲಿಯೂ ಗೋವಾದಲ್ಲಿ ಇದೇ ಸ್ಥಿತಿ ಮುಂದುವರೆದರೆ ರಾಜ್ಯದ ಎದುರು ಆರ್ಥಿಕ ಬಿಕ್ಕಟ್ಟು ಎದುರಾಗುವ ಭೀತಿಯಿದೆ ಎಂದು ಶ್ರೀನಿವಾಸ್ ನಾಯಕ್ ಅಭಿಪ್ರಾಯಪಟ್ಟರು.