ವಿಜಯಪುರ: ಗೋವಾ ರಾಜ್ಯದ ಜಲ ಸಂಪನ್ಮೂಲ ಸಚಿವ ವಿನೋದ ಪಾಲೇಕರ್ ಕನ್ನಡಿಗರ ಕುರಿತು ಅವಹೇಳನಕಾರಿ ಮಾತನಾಡಿದ್ದನ್ನು ಖಂಡಿಸಿ ಕರವೇ ಕಾರ್ಯಕರ್ತರು ನಗರದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ನಗರದ ಮಹಾತ್ಮ ಗಾಂಧಿಧೀಜಿ ವೃತ್ತದಲ್ಲಿ ನೆರೆದ ಕರವೇ ಕಾರ್ಯಕರ್ತರು, ಯಾವುದೇ ಮಾಹಿತಿ ನೀಡದೆ ಕರ್ನಾಟಕ ರಾಜ್ಯದ ಮಹದಾಯಿ ಯೋಜನೆ ಕಾಮಗಾರಿ ಸ್ಥಳಕ್ಕೆ ಭೇಡಿ ನೀಡಿದ ಗೋವಾ ಸಚಿವ ವಿನೋದ ಪಾಲೇಕರ, ಕನ್ನಡಿಗರನ್ನು ಹರಾಮಿ ಎಂದು ಅವಹೇಳನದ ಮಾಡಿದ್ದಾರೆ. ಆಮೂಲಕ ಕನ್ನಡಿಗರ ಸ್ವಾಭಿಮಾನ ಕೆಣಕುವ ಕೆಲಸ ಮಾಡಿದ್ದನ್ನು ಖಂಡಿಸಿ, ಪಾಲೇಕರ ಫೋಟೋಗೆ ಚಪ್ಪಲಿಯಿಂದ ಥಳಿಸಿ ಬೆಂಕಿ ಹಚ್ಚಿದ ಕರವೇ ಕಾರ್ಯಕರ್ತರುತ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ಮಾತನಾಡಿ, ಮಹದಾಯಿ ನದಿ ನೀರು ನಮ್ಮ ಹಕ್ಕು ಮತ್ತು ಮಹದಾಯಿ ನದಿ ನೀರಿನ ಯೋಜನೆ ನಮ್ಮ ಸರ್ಕಾರದ ಕರ್ತವ್ಯ. ಹೀಗಿದ್ದು ನಮ್ಮ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡದೆ ಕಾಮಗಾರಿ ವೀಕ್ಷಿಸಿ ಬಳಿಕ ಮಾತನಾಡಿದ ಗೋವಾ ಜಲ ಸಂಪನ್ಮೂಲ ಸಚಿವ ವಿನೋದ ಪಾಲೇಕರ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಹರಾಮಿ ಎಂದು ಸಂಭೋದಿಸಿದ ಕ್ರಮ ಖಂಡನೀಯ. ರಾಷ್ಟ್ರದ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ಮತ್ತು ಸಂವಿಧಾನ ಬಾಹೀರವಾಗಿ ಜವಾಬ್ದಾರಿಯುತ ಸಚಿವರಾಗಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ಬಾಯಿಯನ್ನು ಹರಿ ಬಿಟ್ಟಿದ್ದು ತರವಲ್ಲ ಎಂದರು.
ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಂಬಾರ ಮಾತನಾಡಿ, ಇಲ್ಲಿಯ ರೈತರು ಕುಡಿಯುವ ನೀರಿಗಾಗಿ ಮಹದಾಯಿ ನದಿ ಯೋಜನೆಗಾಗಿ ಬೀದಿಗಿಳಿದು ನಿತ್ಯ ಹೋರಾಡುತ್ತಿದ್ದಾರೆ. ಆದರೂ ಮಾನವೀಯತೆ ಮರೆತ ಗೋವಾ ಸರ್ಕಾರ
ರೈತರ ಬಾಳಿನಲ್ಲಿ ಚೆಲ್ಲಾಟವಾಡುತ್ತ ರಾಜಕೀಯ ಮಾಡುತ್ತಿದೆ. ಅಲ್ಲದೇ ಮದ್ಯ ಮಾನಿನಿಯರಿಗೆ ಹೆಸರಾದ ಗೋವಾ ರಾಜ್ಯದಿಂದ ನಾವೇನು ಕಲಿಯಬೇಕಿಲ್ಲ.
ಸಂಸ್ಕಾರ ಸಂಸ್ಕೃತಿಗೆ ಹೆಸರಾದ ಕರ್ನಾಟಕ ಜನ ಸ್ವಾಭಿಮಾನಿಗರು. ಇಂತಹ ಸ್ವಾಭಿಮಾನಿ ಕನ್ನಡಿಗರ ಭಾವನೆಗಳಿಗೆ ತೀವ್ರ ತರವಾಗಿ ಧಕ್ಕೆ ತರುವ ರೀತಿಯಲ್ಲಿ ಹರಾಮಿ ಎಂಬ ಶಬ್ದ ಬಳಸಿರುವುದು ಅವರ ಸಂಸ್ಕಾರವನ್ನು
ತಿಳಿಸುತ್ತದೆ. ಒಬ್ಬ ಜವಾಬ್ದಾರಿಯುತ ಸಚಿವನಾಗಿ ರಾಷ್ಟ್ರದ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ನಡೆಯಬೇಕು. ಅಲ್ಲದೇ ನೀರು ಪಡೆಯುವ ಹಕ್ಕು ಕನ್ನಡಿಗರದ್ದು, ಅವರನ್ನು ನೀರು ಕೊಡಿ ಎಂದು ಕೇಳಲು ಅವರ್ಯಾರು ದೊಣ್ಣೆ ನಾಯಕರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾದೇವ ರಾವಜಿ, ದಸ್ತಗೀರ್ ಸಾಲೋಟಗಿ, ಯಾಕೂಬ ಕೋಪರ, ವಿನೋದ ದಳವಾಯಿ, ರಾಜೇಂದ್ರ ಸಿಂಗ್ ಹಜೇರಿ, ಮೃತ್ಯುಂಜಯ ಹಿರೇಮಠ, ಮನೋಹರ ತಾಜವ, ಬಸಲಿಂಗ ಮಡಿವಾಳರ, ಸಾದಿಕ ಜಾನ್ವೇಕರ, ಆಸೀಫ್ ಪೀರವಾಲೆ, ರಜಾಕ್ ಕಾಖಂಡಕಿ ಇದ್ದರು.