ಪಣಜಿ: ಸೆಕ್ಸ್ ರಾಕೆಟ್ ಕುರಿತಾಗಿ ಕಾಂಗ್ರೆಸ್ ಆರೋಪ ಮಾಡಿದ ಬೆನ್ನಲ್ಲೇ ಸಚಿವ ಮಿಲಿಂದ್ ನಾಯ್ಕ ರವರು ರಾಜೇನಾಮೆ ನೀಡಿದ್ದು, ಆರೋಪದ ಬಗ್ಗೆ ತನಿಖೆ ನಡೆಸುತ್ತೇನೆ ಎಂದು ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಕಾಂಗ್ರೆಸ್ ಪ್ರದೇಶಾಧ್ಯಕ್ಷ ಗಿರೀಶ್ ಚೋಡಣಕರ್ ಸೆಕ್ಸ್ ರಾಕೆಟ್ ಕುರಿತಾಗಿ ಆರೋಪಿಸಿದ್ದರು, ಸಂಕಲ್ಪ ಅಮೋಣಕರ್ ರವರು ಪಾಲಿಕೆಗೆ ದೂರು ಸಲ್ಲಿಸಿದ್ದರು.
ನಗರಾಭಿವೃದ್ಧಿ ಸಚಿವರಾಗಿದ್ದ ಮಿಲಿಂದ್ ನಾಯ್ಕ್ ಕೂಡಲೇ ರಾಜೀನಾಮೆ ಸಲ್ಲಿಸಿದ್ದರು. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರವರು ರಾಜೀನಾಮೆಯನ್ನು ಸ್ವೀಕರಿಸಿದ್ದು ಮಂಜೂರಿಗಾಗಿ ರಾಜ್ಯಪಾಲರ ಬಳಿ ಕಳುಹಿಸಿದ್ದಾರೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಕಾಂಗ್ರೆಸ್ ನಾಯಕರಾದ ಸಂಕಲ್ಪ ಅಮೋಣಕರ್ ರವರು ಮಿಲಿಂದ್ ನಾಯ್ಕ್ ವಿರುದ್ಧ ಕೆಲವು ಆಡಿಯೊ ಕ್ಲಿಪ್, ವಿಡಿಯೋ ಮತ್ತು ವಾಟ್ಸಾಪ್ ಸಂದೇಶಗಳ ಪುರಾವೆಗಳೊಂದಿಗೆ ಪೋಲಿಸ್ ದೂರು ನೀಡಿದ್ದಾರೆ.
ಈ ಪ್ರಕರಣವನ್ನು ಇಷ್ಟಕ್ಕೆ ನಿರ್ಲಕ್ಷಿಸಿದರೆ ಮುಂಬರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಬೆಲೆ ತೆರೆಬೇಕಾಗಲಿದೆ ಎಂದು ಬಿಜೆಪಿ ವರಿಷ್ಠರ ಅಭಿಪ್ರಾಯದ ಹಿನ್ನೆಲೆಯಲ್ಲಿ ಮಿಲಿಂದ್ ನಾಯ್ಕ್ ರಾಜೀನಾಮೆ ನೀಡಿದರು ಎನ್ನಲಾಗಿದೆ.
ಬಿಜೆಪಿ ಉಸ್ತುವಾರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ಬಿ.ಎಲ್.ಸಂತೋಷ್ ತುರ್ತಾಗಿ ಗೋವಾಕ್ಕೆ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಡಿಸೆಂಬರ್ 19 ರಂದು ಗೋವಾಕ್ಕೆ ಆಗಮಿಸುತ್ತಿದ್ದು, ಇದಕ್ಕೂ ಮುನ್ನ ಕೆಲ ಮಹತ್ವದ ನಿರ್ಧಾರವನ್ನು ಬಿಜೆಪಿ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.