ಪಣಜಿ: ಗೋವಾದಲ್ಲಿ ಜಾರಿಯಾದ ಲಾಕ್‍ಡೌನ್‍ನಿಂದಾಗಿ ವಿವಿಧ ದೇಶಗಳಿಂದ ಗೋವಾಕ್ಕೆ ಆಗಮಿಸಿದ್ದ ಸುಮಾರು 1200 ಕ್ಕೂ ಹೆಚ್ಚು ಪ್ರವಾಸಿಗರು ಗೋವಾದಲ್ಲಿ ಸಿಲುಕಿಕೊಂಡಿದ್ದಾರೆ.
ಈ ಪೈಕಿ ಪೆಡ್ನೆ ತಾಲೂಕಿನ ಮೋರಜಿ, ಆಶ್ವೆ, ಮಾಂದ್ರೆ, ಹರಮಲ್, ತೆರೆಖೋಲ್ ಭಾಗದಲ್ಲಿ 400 ಕ್ಕೂ ಹೆಚ್ಚು ಜನ ವಿದೇಶಿ ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಈ ವಿದೇಶಿ ಪ್ರವಾಸಿಗರಿಗೆ ಅವರ ದೇಶದ ದೂತಾವಾಸದ ಸಂಪರ್ಕವಿದ್ದು, ಆ ದೇಶದಿಂದ ಈ ಪ್ರವಾಸಿಗರಿಗೆ ಸ್ವಲ್ಪ ಮಟ್ಟಿನ ಹಣ ನೀಡಲಾಗುತ್ತಿದ್ದು, ಇದರಿಂದಾಗಿಯೇ ಅವರು ಸದ್ಯ ಉದರ ನಿರ್ವಹಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಸಿಲುಕಿಕೊಂಡಿರುವ ವಿದೇಶಿ ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಂಚಾಲಕ ಮೈಕಲ್ ಡಿಸೋಜಾ ಭರವಸೆ ನೀಡಿದ್ದರು. ಗೋವಾದಲ್ಲಿ ಸಿಲುಕಿಕೊಂಡಿರುವ ವಿದೇಶಿ ಪ್ರವಾಸಿಗರಿಗೆ ಸರ್ಕಾರ ಅಗತ್ಯ ಸೌಕರ್ಯ ಕಲ್ಪಿಸಿಕೊಡುತ್ತಿರುವುದು ಮಾತ್ರವಲ್ಲದೆಯೇ ಹಂತ ಹಂತವಾಗಿ ಅವರವರ ದೇಶಗಳಿಗೆ ಕಳುಹಿಸುವ ಕೆಲಸವನ್ನು ಗೋವಾ ಸರ್ಕಾರ ಮಾಡುತ್ತಿದೆ.
ಇದನ್ನೂ ಓದಿ :ಯಲ್ಲಾಪುರ : ಕುತೂಹಲಕ್ಕೆ ಕಾರಣವಾದ ಸಚಿವ ಆನಂದ್ ಸಿಂಗ್, ಶಿವರಾಮ್ ಹೆಬ್ಬಾರ್ ನಡೆ
ಪೆಡ್ನೆ ತಾಲೂಕಿನ ಮೋರಜಿ ಬೀಚ್ ಪರಿಸರದಲ್ಲಿ ಹೆಚ್ಚಾಗಿ ರಷ್ಯಾ ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಪ್ರತಿ ವರ್ಷವೂ ಕೂಡ ಮೋರಜಿ ಬೀಚ್‍ಗೆ ಶೇ 70 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ರಷ್ಯನ್ ಪ್ರವಾಸಿಗರೇ ಆಗಮಿಸುತ್ತಾರೆ. ಸದ್ಯ ಈ ಭಾಗದಲ್ಲಿ ಹೆಚ್ಚಾಗಿ ರಷ್ಯನ್ ಪ್ರವಾಸಿಗರೇ ಸಿಲುಕಿಕೊಂಡಿದ್ದಾರೆ.