ಪಣಜಿ: ಗೋವಾ ವಿಧಾನಸಭಾ ಚುನಾವಣೆಯ ಫಲಿತಾಂಶದ ದಿನಾಂಕ ಸಮೀಪಿಸುತ್ತಿದೆ. ಆದರೆ ಪ್ರಸಕ್ತ ಬಾರಿ ಯಾವುದೇ ಪಕ್ಷ ಸಂಪೂರ್ಣ ಬಹುಮತ ಪಡೆಯುವ ಸಾಧ್ಯತೆ ಕಡಿಮೆಯಿದೆ ಎಂದೇ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಫಲಿತಾಂಶಕ್ಕೂ ಮುನ್ನವೇ ಸ್ಥಳೀಯ ಪಕ್ಷಗಳ ಬೆಂಬಲಕ್ಕೆ ಕಸರತ್ತು ನಡೆಸಿದೆ.
ಗೋವಾ ವಿಧಾನಸಭಾ ಚುನಾವಣೆಯ ಬಿಜೆಪಿ ಉಸ್ತುವಾರಿ ದೇವೇಂದ್ರ ಫಡ್ನವೀಸ್ ರವರು ಗೋವಾಕ್ಕೆ ಆಗಮಿಸಿ ಎಂಜಿಪಿ ಪಕ್ಷದ ನಾಯಕ ಸುದೀನ ಧವಳೀಕರ್ ಮತ್ತು ಕೆಲ ಪಕ್ಷೇತರ ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸಲು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಗೋವಾದಲ್ಲಿ ತ್ವರಿತ ಆಡಳಿತ ನೀಡಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಎಂಜಿಪಿ ನಾಯಕ ಸುದೀನ ಧವಳೀಕರ್ ಎಂಬ ನಿಲುವು ತಳೆದಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಗೋವಾಕ್ಕೆ ಆಗಮಿಸಿರುವ ಬಿಜೆಪಿ ಉಸ್ತುವಾರಿ ದೇವೇಂದ್ರ ಫಡ್ನವೀಸ್ ತಮ್ಮ ಪಕ್ಷದ ನಾಯಕರಿಂದ ಫಲಿತಾಂಶದ ಕುರಿತು ಚರ್ಚೆ ನಡೆಸಿದ್ದಾರೆ. ಬಿಜೆಪಿ ಸ್ಥಳೀಯ ನಾಯಕರ ಪ್ರಕರಾರ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ-16, ಕಾಂಗ್ರೇಸ್ 10 ಸ್ಥಾನ ಪಡೆದುಕೊಳ್ಳಲಿದೆ. ಅತಿದೊಡ್ಡ ಪಕ್ಷವಾಗಿರುವುದರಿಂದ ಬಿಜೆಪಿಯನ್ನು ಅಧಿಕಾರಕ್ಕೆ ಬರುವುದರಿಂದ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ಹೇಳಿದೆ. ಆದರೆ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು- ಬಿಜೆಪಿ ಪ್ರಸಕ್ತ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದ ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನ ಬೇಕು:
ಕಾಂಗ್ರೇಸ್ ಪಕ್ಷವು ಕೂಡ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಎಂಜಿಪಿ ಪಕ್ಷದೊಂದಿಗೆ ಚರ್ಚೆ ನಡೆಸಿದೆ ಎನ್ನಲಾಗಿದೆ. ಆದರೆ ಕಾಂಗ್ರೇಸ್ ಜೊತೆ ಸೇರಿ ಸರ್ಕಾರ ರಚಿಸಬೇಕಾದರೆ ಮುಖ್ಯಮಂತ್ರಿ ಹುದ್ಧೆಯ ಮೊದಲ ಅವಕಾಶ ತನಗೆ ನೀಡಬೇಕು ಎಂದು ಎಂಜಿಪಿ ನಾಯಕ ಸುದೀನ ಧವಳೀಕರ್ ಕಾಂಗ್ರೇಸ್ ಪಕ್ಷಕ್ಕೆ ಷರತ್ತು ವಿಧಿಸಿದ್ದರಿಂದ ಈ ಕುರಿತ ಮಾತುಕತೆ ಸದ್ಯಕ್ಕೆ ಸ್ಥಗಿತಗೊಂಡಿದೆ ಎನ್ನಲಾಗಿದೆ.