Advertisement

ಮಹದಾಯಿ ನೀರಿಗೆ ಗೋವಾ ಕನ್ನ

09:59 AM Jan 03, 2020 | Lakshmi GovindaRaj |

ಪಣಜಿ: ಮಹದಾಯಿ ನದಿ ನೀರಿನಲ್ಲಿ ಒಂದಿಷ್ಟು ಪ್ರಮಾಣದ ನೀರನ್ನು ಗೋವಾ ಸರ್ಕಾರ ತನ್ನ ಕಡೆಗೆ ತಿರುಗಿಸಿಕೊಂಡಿದೆ ಎಂದು ಗೋವಾದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಒಪ್ಪಿಕೊಂಡಿದ್ದಾರೆ. ಕರ್ನಾಟಕ-ಗೋವಾ ನಡುವಿನ ಮಹದಾಯಿ ನದಿ ವ್ಯಾಜ್ಯವು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ನದಿಯ ನೀರಿನಲ್ಲಿ ಭಾಗಶ: ತಮ್ಮ ಕಡೆಗೆ ಗೋವಾ ತಿರುಗಿಸಿಕೊಂಡಿರುವುದು ನಿಯಮಗಳನ್ನು ಉಲ್ಲಂಘಿಸಿದಂತಾಗಿದೆ.

Advertisement

ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಚಾರ ತಿಳಿಸಿರುವ ಅವರು, “ಮಹದಾಯಿ ನದಿ ನೀರಿನ ಒಂದಿಷ್ಟು ಪ್ರಮಾಣವನ್ನು ನಮ್ಮ ಕಡೆಗೆ ತಿರುಗಿಸಿಕೊಂಡಿರುವುದನ್ನು ನಾನು ಈ ಮೂಲಕ ಒಪ್ಪಿಕೊಳ್ಳುತ್ತಿದ್ದೇನೆ. ಇಂಥ ಕೆಲಸ ಮಾಡಿಲ್ಲ ಎಂದು ನಾವು ಹೇಳುತ್ತಿಲ್ಲ. ಬಹಿರಂಗವಾಗಿ ಒಪ್ಪಿಕೊಳ್ಳುತ್ತೇವೆ” ಎಂದಿದ್ದಾರೆ.

ಜೊತೆಗೆ, “ಮಹದಾಯಿ ನದಿಯನ್ನು ಆಧರಿಸಿ ಕರ್ನಾಟಕ ಜಾರಿಗೆ ತರಲು ಉದ್ದೇಶಿಸಿರುವ ಕಳಸಾ-ಬಂಡೂರಿ ಕುಡಿಯುವ ನೀರು ಯೋಜನೆಗೆ ಕೇಂದ್ರ ಅರಣ್ಯ ಇಲಾಖೆಯ ಒಪ್ಪಿಗೆ ಪತ್ರ ಬೇಕಿಲ್ಲ ಎಂದು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆ ಪತ್ರಕ್ಕೆ ಯಾವುದೇ ಕಾನೂನಾತ್ಮಕ ಮಾನ್ಯತೆಯಿಲ್ಲ” ಎಂದು ಸಾವಂತ್‌ ಹೇಳಿದ್ದಾರೆ.

ಕಳಸಾ-ಬಂಡೂರಿ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ 2019ರ ಅಕ್ಟೋಬರ್‌ನಲ್ಲಿ ನೀಡಿದ್ದ ಒಪ್ಪಿಗೆ ಪತ್ರಕ್ಕೆ ಡಿಸೆಂಬರ್‌ನಲ್ಲಿ ತಡೆ ನೀಡಲಾಗಿತ್ತು. ಆದರೆ, ಅದರ ಬೆನ್ನಲ್ಲೇ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದ ಜಾವಡೇಕರ್‌, ಕುಡಿಯುವ ನೀರಿನ ಯೋಜನೆಗಳಿಗೆ ಅರಣ್ಯ ಇಲಾಖೆಯ ಒಪ್ಪಿಗೆ ಬೇಕಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಪತ್ರಕ್ಕೆ ಕಾನೂನಿನ ಮಾನ್ಯತೆಯಿಲ್ಲ ಎಂದು ಸಾವಂತ್‌ ಹೇಳಿದ್ದಾರೆ.

ಗೋವಾ ಪರ 1 ರೂ. ಸಂಭಾವನೆಗೆ ವಾದ ಮಂಡನೆ: ಖಲಪ್‌
ಪಣಜಿ: ಮಹದಾಯಿ ನದಿ ನೀರು ಹಂಚಿಕೆ ಪ್ರಕರಣ ಕುರಿತು ಗೋವಾ ಸರ್ಕಾರದ ಪರವಾಗಿ ಕೇವಲ 1 ರೂ. ಸಂಭಾವನೆ ಪಡೆದು ಎಷ್ಟು ವರ್ಷ ಬೇಕಾದರೂ ಪ್ರಕರಣದಲ್ಲಿ ವಾದ ಮಂಡಿದಲು ಸಿದ್ಧ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ವಕೀಲ ರಮಾಕಾಂತ ಖಲಪ್‌ ಗೋವಾ ಸರ್ಕಾರಕ್ಕೆ ಆಫರ್‌ ನೀಡಿದ್ದಾರೆ.

Advertisement

ಮಹದಾಯಿ ಪ್ರಕರಣದಲ್ಲಿ ನ್ಯಾಯಾಲಯದಲ್ಲಿರಲಿ ಅಥವಾ ರಾಷ್ಟ್ರೀಯ ಹಸಿರು ಪೀಠದಲ್ಲಿರಲಿ ಗೋವಾ ಸರ್ಕಾರದಿಂದ ಯಾವುದೇ ಪಡೆಯದೆ ಕೇವಲ 1 ರೂ. ಫಿ ಪಡೆದು ಎಷ್ಟು ವರ್ಷ ಬೇಕಾದರೂ ನ್ಯಾಯಾಲಯದಲ್ಲಿ ಗೋವಾ ಸರ್ಕಾರದ ಪರ ವಾದ ಮಂಡಿಸಲು ನಾನು ಸಿದ್ಧ. ಈ ಕುರಿತು ಗೋವಾ ಸಿಎಂ ಹಾಗೂ ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆಯುತ್ತೇನೆ.

ಇದುವರೆಗೂ ಗೋವಾ ಸರ್ಕಾರ ಮಹದಾಯಿ ಪ್ರಕರಣದಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿದರೂ ಕೂಡ ಮಹದಾಯಿ ಪ್ರಕರಣದಲ್ಲಿ ನಮಗೆ ಸಿಗಬೇಕಾದ ನ್ಯಾಯ ಸಿಗಲಿಲ್ಲ. ಮಹದಾಯಿ ನದಿ ನೀರನ್ನು ಕರ್ನಾಟಕ ತಿರುಗಿಸಿದರೆ ಗೋವಾಕ್ಕೆ ಹೆಚ್ಚಿನ ಹಾನಿಯಾಗಲಿದೆ ಎಂದು ತಿಳಿಸಿದ್ದಾರೆ. ಇದೀಗ ನಡೆಯಲಿರುವ ಗೋವಾ ವಿಧಾನಸಭಾ ಅಧಿ ವೇಶನದಲ್ಲಿ ಚರ್ಚೆ ನಡೆಸಿ ಮಹದಾಯಿ ವಿಷಯದಲ್ಲಿ ಪ್ರಮುಖ ಠರಾವು ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಗೋವಾ ಸರ್ಕಾರ ಕೇಳಿದರೆ ಸಹಾಯ
ಪಣಜಿ: ಮಹದಾಯಿ ನದಿ ನೀರು ವಿಷಯದಲ್ಲಿ ನಾನು ಮಾಡಲೇ ಬೇಕಾಗಿರುವುದನ್ನು ಮಾಡಿ ದ್ದೇನೆ. ಈಗ ಮುಂದಿನ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ. ಈ ವಿಷಯದಲ್ಲಿ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡಲು ಇಷ್ಟಪಡುವು ದಿಲ್ಲ ಎಂದು ಗೋವಾ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಹೇಳಿದ್ದಾರೆ.

ಬುಧವಾರ ದೋನಾಪಾವುಲ್‌ನ ನ್ಯಾಷನಲ್‌ ಓಷನೋಗ್ರಫಿ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಮಾತನಾಡಿ, ಮಹದಾಯಿ ವಿಷಯದಲ್ಲಿ ಗೋವಾ ಸರ್ಕಾರ ಸಹಾಯ ಕೇಳಿದರೆ ಮಾಡುತ್ತೇನೆ. ಇಲ್ಲವಾದರೆ ಈ ಕುರಿತಂತೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. ಮಹದಾಯಿ ವಿವಾದಾತ್ಮಕ ವಿಷಯವಾಗಿ ಮಾರ್ಪಟ್ಟಿದೆ. ಈ ಬಗ್ಗೆ ನನ್ನನ್ನು ಏನೂ ಕೇಳಬೇಡಿ ಎಂದರು.

ಕಳೆದ ತಿಂಗಳು ಗೋವಾ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮಹದಾಯಿ ವಿಷಯವನ್ನು ಚರ್ಚಿಸಿದ್ದರು. ದೂರವಾಣಿ ಮೂಲಕ ಕೇಂದ್ರ ಮಂತ್ರಿ ಪ್ರಕಾಶ ಜಾವಡೇಕರ್‌ ಜತೆಗೂ ಮಾತನಾಡಿದ್ದರು. ನಂತರ ಗೋವಾ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರ ಮಹದಾಯಿ ವಿಷಯದ ಹೇಳಿಕೆ ವಿವಾದ ಸೃಷ್ಟಿಸಿತ್ತು.

ಮಹದಾಯಿ ಯೋಜನೆ ಕೈಗೆತ್ತಿಕೊಳ್ಳಲು ಪರಿಸರ ಇಲಾಖೆಯ ಅನುಮತಿ ಬೇಕಿಲ್ಲ ಎಂದು ಕೇಂದ್ರ ಪರಿಸರ ಇಲಾಖೆಯ ಮುಖ್ಯಸ್ಥರಾಗಿರುವ ಪ್ರಕಾಶ್‌ ಜಾವಡೇಕರ್‌ ಅವರೇ ಪತ್ರ ಬರೆದಿರುವುದಕ್ಕೆ ಸಂಪೂರ್ಣ ಕಾನೂನು ಮಾನ್ಯತೆ ಇದೆ. ಗೋವಾ ಮುಖ್ಯಮಂತ್ರಿಗೆ ಅಷ್ಟೂ ಕಾನೂನು ಜ್ಞಾನ ಇಲ್ಲ. ತಮ್ಮ ರಾಜ್ಯದ ಜನರನ್ನು ಓಲೈಸಲು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next