Advertisement

ಒಂದು ನಗರದ ಹನ್ನೊಂದು ಕಥೆಗಳಲ್ಲಿ ನಾವೆಲ್ಲಿ ?

03:04 PM Jan 20, 2021 | Team Udayavani |

ಪಣಜಿ : ಅಲ್ಲಿನ ಜಗತ್ತೂ ಬಹಳ ವಿಭಿನ್ನವಾಗಿಲ್ಲ !
ಎಲ್ಲ ನಗರಗಳಲ್ಲೂ ನೆರಳಿನಲ್ಲೇ ಜನರು ಬದುಕುತ್ತಾರೆಯೇ?
ಈ ಅಭಿಪ್ರಾಯ ಮೂಡುವುದು ಚಿತ್ರೋತ್ಸವದಲ್ಲಿ “ಕಂಟ್ರಿ ಫೋಕಸ್” ವಿಭಾಗದಲ್ಲಿ ಪ್ರದರ್ಶಿಸಿದ ಬಾಂಗ್ಲಾದೇಶದ ಹನ್ನೊಂದು ನಿರ್ದೇಶಕರ ಸಂಯುಕ್ತ ಪ್ರಯತ್ನವಾದ “ಇತಿ ; ತೊಮಾರಿ ಢಾಕಾ (ಸಿನ್ಸಿಯರ್ಲಿ ಯುವರ್ಸ್, ಢಾಕಾ) ಚಿತ್ರವನ್ನು ಕಂಡಾಗ.
ಹನ್ನೊಂದೂ ನಿರ್ದೇಶಕರು ಕಟ್ಟಿಕೊಡಲು ಪ್ರಯತ್ನಿಸಿರುವುದು ನಗರದಲ್ಲಿನ ಚದುರಿದ ಚಿತ್ರಗಳನ್ನು. ಒಂದು ಫ್ರೇಮಿನಡಿ ಬಂಧಿಸಿ ಛಾಯಾ ಬದುಕಿನ ಪದರಗಳನ್ನು ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಎಲ್ಲೆಡೆ ಹೆಚ್ಚಾಗಿ ಕಂಡು ಬರುವಂತೆ ಇಲ್ಲಿಯೂ ನಗರದಲ್ಲಿನ ಬದುಕಿನ ಅನಿವಾರ್ಯತೆ, ಅಸಹಾಯಕತೆ ಹಾಗೂ ಆಯ್ಕೆಯ ನೆಲೆಗಳು-ಅದರಲ್ಲೂ ಇರುವ ವೈಯಕ್ತಿಕ ಮಿತಿಗಳು- ಇದೇ ಚಿತ್ರಣ ಬಹುತೇಕ ಚಿತ್ರಗಳಲ್ಲಿವೆ.

Advertisement

ಸೆಲೆಬ್ರಿಟಿ ಬದುಕಿನ ಸಾಧ್ಯತೆ ಇರುವ ಸಿನಿಮಾ ರಂಗದ ಸಹನಟನೊಬ್ಬನ ಬದುಕನ್ನು ಚಿತ್ರಿಸುತ್ತಲೇ ಅವನು ನಾಯಕ ನಟನಾಗಬೇಕೆಂಬ ಹಂಬಲಕ್ಕಾಗಿ ಹೇಗೆ ನೆರಳಿನಲ್ಲೇ ಬದುಕುತ್ತಾನೆ. ಅದೇ ಸಂದರ್ಭದಲ್ಲಿ ಪ್ರತಿಷ್ಠಿತ ಶಾಲೆಯೊಂದಕ್ಕೆ ತನ್ನ ಮೊಮ್ಮಗನನ್ನು ತನ್ನ ಅಸ್ತಿತ್ವದ ಮೇಲೆ ಸೇರಿಸಲಾಗದೇ ತನ್ನ ಕನಸನ್ನು ಈಡೇರಿಸಿಕೊಳ್ಳಲು ದರ್ಜಿಯೊಬ್ಬ ಪಡುವ ಪ್ರಯತ್ನ(ನಿರ್ದೇಶಕ : ನುಹೂಶ್ ಹುಮಾಯನ್)

ಇಷ್ಟೇ ಅಲ್ಲ ; ಜಿಬೋನ್ಸ್ ಗನ್ ನಲ್ಲೂ ಸಹ ಅಂಥದ್ದೇ ಛಾಯೆಯಿದೆ. ತಾನೂ ಗ್ಯಾಂಗ್ ಸ್ಟರ್ ಆಗಬೇಕೆಂಬ ಬಯಕೆ ಜಿಬೋನ್ ನನ್ನು ಯಾವ ನೆಲೆಗೆ ತಂದು ನಿಲ್ಲಿಸುತ್ತದೆ ಎಂಬುದು ಈ ಚಿತ್ರದಲ್ಲಿ ಅನಾವರಣಗೊಳ್ಳುತ್ತದೆ (ನಿರ್ದೇಶಕ : ರಾಹತ್ ರೆಹಮಾನ್).

ಮ್ಯಾಗ್ ಫಿರಾತ್ (ನಿರ್ದೇಶಕ : ಎಂಡಿ ರಬಿಯುಲ್ ಅಲಾಂ)ಒಬ್ಬ ಉದ್ಯಮಿಯ ಕಾರು ಚಾಲಕನಾಗಿ ತನ್ನದಲ್ಲದ ಹಂಬಲವನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಾ, ತನ್ನ ಮನೆಗೆ ಹವಾನಿಯಂತ್ರಿತ ಸೌಲಭ್ಯವನ್ನು ದಕ್ಕಿಸಿಕೊಳ್ಳುವುದೇ ದೊಡ್ಡದಾದ ಕನಸೆಂದು ಕೊಳ್ಳುವವನ ಕಥೆ.

ಹಾಗೆಯೇ ಢಾಕಾ ಮೆಟ್ರೋ (ನಿರ್ದೇಶಕ-ಮೆಹಮೂದ್ ಹಸನ್) ಕಥೆಯಲ್ಲೂ ಒಬ್ಬ ಕಾರ್ ಚಾಲಕ ತನ್ನ ರೋಗಗ್ರಸ್ತೆ ಹೆಂಡತಿಯ ಚಿಕಿತ್ಸೆಗಾಗಿ ಪಡುವ ಸಂಕಟ, ಯಾರೋ ಬಳಸಿದ ಕಾರನ್ನು ಪಡೆದು ಬದುಕನ್ನು ಕಟ್ಟಿಕೊಳ್ಳಬೇಕೆಂದಾಗ ಎದುರಾಗುವ ಹೊಸ ಸನ್ನಿವೇಶಗಳು, ಕಾರನ್ನು ಕದ್ದು ಅದನ್ನೇ ಮತ್ತೆ ಮಾರಿ ಬದುಕುವ ಮಾಫಿಯಾ ಒಡ್ಡುವ ಆಯ್ಕೆಯ ಅನಿವಾರ್ಯತೆಗಳು, ಅದನ್ನೂ ಕೊನೆಗೆ ಗೆದ್ದು ಬದುಕನ್ನು ಉಳಿಸಿಕೊಳ್ಳಬೇಕೆನ್ನುವ ಅದಮ್ಯ ಆತ್ಮವಿಶ್ವಾಸ ವಿಶಿಷ್ಟವೆನಿಸುತ್ತದೆ.

Advertisement

ಇದನ್ನೂ ಓದಿ:ಚಲನಚಿತ್ರಗಳಲ್ಲಿ ಪ್ರಣಯ ಗೀತೆಗಳು ಇಂದಿನ ಮಾರುಕಟ್ಟೆಯ ಅಗತ್ಯಗಳಲ್ಲ!

ನಗರದ ಬದುಕಿನ ಅನಿವಾರ್ಯತೆಯ ಮುಖಗಳನ್ನು ಇವೆಲ್ಲವೂ ಅನಾವರಣಗೊಳ್ಳುವುದು ಸ್ಪಷ್ಟ. ಇದರ ಮಧ್ಯೆ ಜುತಿ (ನಿರ್ದೇಶಕ :ಸೈಯದ್ ಸಲೇ ಅಹ್ಮದ್ ಸೊಬಾನ್) ಹಾಗೂ ಚೀರ್ಸ್ (ಸೈಯದ್ ಅಹ್ಮದ್ ಶಾಕಿ) ಢಾಕಾದಲ್ಲಿ ಬದಲಾಗುತ್ತಿರುವ ಸನ್ನಿವೇಶಗಳನ್ನು ವಿವರಿಸುತ್ತದೆ. ಬಹಳ ಮುಖ್ಯವಾಗಿ ಮಹಿಳೆಯರು ತಮ್ಮ ಆಶೋತ್ತರ-ಮಹಾತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ಹೊಸ ಬಗೆಯ ತೀರ್ಮಾನಗಳಿಗೆ ಸಜ್ಜಾಗುತ್ತಿದ್ದಾರೆ ಎಂದು ತೋರಿಸುತ್ತದೆ. ಇವೆರಡೂ ಸ್ವಲ್ಪ ಭಿನ್ನವಾದ ವರ್ತಮಾನದ ಹಂದರಗಳು.

“ಓಬಿಸಾಸೆ ಢಾಕಾ” (12 ಎ.ಎಂ. ಢಾಕಾ) ಮಿರ್ಮುಕ್ರಂ ಹೊಸೇನ್ ನಿರ್ದೇಶನದ್ದು. ಹೇಗೆ ಪರಸ್ಪರ ಪರಿಚಯವೇ ಇಲ್ಲದಂತೆ ಬದುಕುವ ನಗರಗಳಲ್ಲಿ ಅಪರಿಚಿತರಿಗೆ ಸಹಾಯ ಮಾಡುವುದು ಎಷ್ಟು ಕಠಿಣ ಸನ್ನಿವೇಶಗಳನ್ನು ತಂದೊಡ್ಡಬಲ್ಲದು ಎಂಬುದನ್ನು ಬಿಂಬಿಸುವಂಥದ್ದು. ಈ ನೆಲೆಯ ಹಲವಾರು ಚಿತ್ರಗಳು ಎಲ್ಲ ನಗರಗಳ ಬಗ್ಗೆಯೂ ಬಂದಿರುವುದರಿಂದ ವಿಶೇಷವೆನ್ನಿಸುವುದಿಲ್ಲ.

ಒಟ್ಟೂ ಇಡೀ ಚಿತ್ರವನ್ನು ಗಟ್ಟಿಯಾಗಿ ಹಿಂಡಿದಾಗ ನಾಲ್ಕೈದು ಹನಿಯಾದರೂ ಗಟ್ಟಿಯಾದುದು ಸಿಗುವುದು ಈ ಸಂಯುಕ್ತ ಪ್ರಯತ್ನದ ಫಲವೆನ್ನಬಹುದು. ಇದರಲ್ಲಿ ಹಲವು ಮಂದಿ ಹೊಸ ನಿರ್ದೇಶಕರಿಗೆ ಇದೇ ಚೊಚ್ಚಲ ಪ್ರಯತ್ನ. ಅದೂ ವಿಶೇಷವೇ.
ಢಾಕಾ, ಬಾಂಗ್ಲಾದೇಶದ ವರ್ತಮಾನದ ಚಿತ್ರಗಳನ್ನು ಅರಿಯಲು ಈ ಚಿತ್ರ ನೆರವಾಗಬಲ್ಲದು. ಭಾರತದಂಥ ದೇಶದ ಮುಂಬಯಿ, ದಿಲ್ಲಿ ನೋಡಿದವರಿಗೆ ಇದು ತೀರಾ ಹೊಸದೇನೂ ಅಲ್ಲ ಎನಿಸಬಹುದು. ಆದರೆ, ದಕ್ಷಿಣ ಏಷ್ಯಾದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಹೊಸ ನಗರಗಳಲ್ಲಿ ಒಂದಾದ ಢಾಕಾದ ನೆರಳುಗಳನ್ನು ನಾವಿಲ್ಲಿ ಹುಡುಕಬಹುದು. ಹಾಗಾಗಿ ಈ ಸಿನಿಮಾ ನೋಡುಗನಿಗೆ ತೀರಾ ನಷ್ಟ ಉಂಟು ಮಾಡದು ಎಂಬುದು ನನ್ನ ಭಾವನೆ.

ಬಾಂಗ್ಲಾದೇಶದಲ್ಲಿಒಂದಿಷ್ಟು ಹೊಸ ಬೆಳೆ ಬರುತ್ತಿದೆ ಎನ್ನಲಿಕ್ಕೆ ಅಡ್ಡಿಯಿಲ್ಲ.ಹಾಗೆಯೇ ಈ ನಗರದ ಹನ್ನೊಂದು ಕಥೆಗಳಲ್ಲಿ ನಗರಗಳಲ್ಲಿರುವ ನಾವೆಲ್ಲಾ ಎಲ್ಲಿ ಇದ್ದೇವೆ, ಯಾವ ಫ್ರೇಮಿನಲ್ಲಿದ್ದೇವೆ ಎಂಬುದನ್ನೂ ಹುಡುಕಿಕೊಳ್ಳಬಹುದು.
– ಅಶ್ವಘೋಷ

Advertisement

Udayavani is now on Telegram. Click here to join our channel and stay updated with the latest news.

Next