ಪಣಜಿ : ಗೋವಾ ರಾಜ್ಯ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ. ಎನ್‍ಡಿಎ ಕೂಟದಿಂದ ಗೋವಾ ಫಾರ್ವರ್ಡ್ ಪಾರ್ಟಿ ಹೊರಕ್ಕೆ ಬಂದಿದೆ. ಬಿಜೆಪಿ ಮೈತ್ರಿಕೂಟ ‘ಎನ್‍ಡಿಎ’ದಿಂದ ಗೋವಾ ಫಾರ್ವರ್ಡ್ ಪಾರ್ಟಿ ಸಖ್ಯ ಕಡಿದುಕೊಂಡಿದೆ. ಇಂದು (ಏ.13) ಅಧಿಕೃತವಾಗಿ ಈ ಬಗ್ಗೆ ಘೋಷಿಸಿರುವ ಜಿಎಫ್‍ಪಿ, ತನ್ನ ಈ ನಿಲುವಿಗೆ ಬಿಜೆಪಿಯ ಗೋವಾ ವಿರೋಧಿ ನೀತಿಯೇ ಪ್ರಮುಖ ಕಾರಣ ಎಂದು ಹೇಳಿದೆ.
40 ಸಂಖ್ಯಾಬಲದ ಗೋವಾ ವಿಧಾನಸಭೆಯಲ್ಲಿ ಗೋವಾ ಫಾರ್ವರ್ಡ್ ಪಕ್ಷ ಮೂರು ಸ್ಥಾನಗಳನ್ನು ಹೊಂದಿದೆ. 2017 ರಲ್ಲಿ ಈ ಪಕ್ಷ ಎನ್‍ಡಿಎಗೆ ತನ್ನ ಬೆಂಬಲವನ್ನು ಸೂಚಿಸಿತ್ತು. ಅಂದಿನ ಬಿಜೆಪಿ ನಾಯಕ ದಿ.ಮನೋಹರ್ ಪರಿಕ್ಕರ್ ಅವರನ್ನು ಗೋವಾ ಮುಖ್ಯಮಂತ್ರಿ ಮಾಡುವ ನಿಟ್ಟಿನಲ್ಲಿ ಬೆಂಬಲ ಸೂಚಿಸಿತ್ತು. 2019 ರಲ್ಲಿ ಮನೋಹರ್ ಪರಿಕ್ಕರ್ ನಿಧನರಾದ ಬಳಿಕ ಜಿಎಫ್‍ಪಿ ಹಾಗೂ ಬಿಜೆಪಿ ಸಂಬಂಧದ ನಡುವೆ ಮೈಮನಸ್ಸು ಮೂಡಿತು. ಮುಖ್ಯಮಂತ್ರಿ ಪ್ರಮೋದ ಸಾವಂತ್ ಸಂಪುಟದಲ್ಲಿ ಜಿಎಫ್‍ಪಿ ನಾಯಕರನ್ನು ಕೈಬಿಟ್ಟಿದ್ದು ಉಭಯ ಪಕ್ಷಗಳ ನಡುವಿನ ಸಂಬಂಧಕ್ಕೆ ಹುಳಿ ಹಿಂಡಿತ್ತು.
ಇದೀಗ ಬಿಜೆಪಿ ಗೆಳೆತನಕ್ಕೆ ಗುಡ್ ಬೈ ಹೇಳಲು ನಿರ್ಧರಿಸಿರುವ ಗೋವಾ ಫಾರ್ವರ್ಡ್ ಪಕ್ಷದ ನಾಯಕರು ಇಂದು ಪಣಜಿಯಲ್ಲಿ ಸಭೆ ಸೇರಿ ಒಮ್ಮತ ತೀರ್ಮಾನಕ್ಕೆ ಬಂದಿದ್ದಾರೆ. ಸಭೆಯ ನಂತರ ತಮ್ಮ ನಿರ್ಧಾರವನ್ನು ಪ್ರಕಟಿಸಿರುವ ಜಿಎಫ್‍ಪಿ ಅಧ್ಯಕ್ಷ ವಿಜಯ್ ಸರ್ದೇಸಾಯಿ ಅವರು, ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರಿದಿದ್ದೇವೆ ಎಂದಿದ್ದಾರೆ.
ಎನ್‍ಡಿಎದಿಂದ ಹೊರ ಬರುವ ಬಗ್ಗೆ ಅಮಿತ್ ಶಾ ಅವರಿಗೆ ಇಂದು ಪತ್ರ ಬರೆದಿದ್ದೇವೆ. 2019ರ ಜುಲೈನಲ್ಲಿಯೇ ನಮ್ಮ ಹಾಗೂ ಬಿಜೆಪಿಯ ಸಂಬಂಧ ಮುರಿದು ಬಿದ್ದಿತ್ತು. ಕಳೆದ ಎರಡು ವರ್ಷಗಳಿಂದ ಬಿಜೆಪಿ ಗೋವಾ ವಿರೋಧಿ ನೀತಿ ಅನುಸರಿಸಿಕೊಂಡು ಬರುತ್ತಿದೆ ಎಂದು ಅವರು ಹೇಳಿದ್ದಾರೆ.
ಇನ್ನು 2022ರಲ್ಲಿ ಗೋವಾ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮತ್ತೊಮ್ಮೆ ಗೋವಾ ಗದ್ದುಗೆ ಏರಲು ಯೋಜನೆ ರೂಪಿಸುತ್ತಿರುವ ಬಿಜೆಪಿಗೆ ಜಿಎಫ್‍ಪಿ ನಡೆ ಆಘಾತವನ್ನುಂಟು ಮಾಡಿದಂತಾಗಿದೆ.