ಪಣಜಿ: ಮುಂದಿನ 16 ತಿಂಗಳಲ್ಲಿ ಗೋವಾದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಗೊಳ್ಳಲಿದೆ. ಟಾಟಾ ಸ್ಮಾರಕದೊಂದಿಗೆ ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಅವರ ಸಲಹೆಯಂತೆ ಆಸ್ಪತ್ರೆಯ ವಿನ್ಯಾಸ ರೂಪಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮಾಹಿತಿ ನೀಡಿದರು.
ವಿಶ್ವ ಕ್ಯಾನ್ಸರ್ ದಿನಾಚರಣೆ ನಿಮಿತ್ತ ಗೋವಾ ವೈದ್ಯಕೀಯ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ‘ಫೆಸ್ಗೊ’ ಕಂಪನಿ ತಯಾರಿಸಿದ ಸ್ತನ ಕ್ಯಾನ್ಸರ್ ಲಸಿಕೆಯನ್ನು ಇಂದು ಗೋವಾ ವೈದ್ಯಕೀಯ ಆಸ್ಪತ್ರೆಯ ರೋಗಿಗಳಿಗೆ ನೀಡಲು ಪ್ರಾರಂಭಿಸಲಾಗಿದೆ. ಪ್ರತಿ ಲಸಿಕೆ ವೆಚ್ಚ 4.20 ಲಕ್ಷ.ರೂಗಳಾಗಿದೆ. ಇಂದು ಮೊದಲ ಮಹಿಳಾ ಫಲಾನುಭವಿಗೆ ಈ ಲಸಿಕೆಯನ್ನು ಉಚಿತವಾಗಿ ನೀಡಲಾಯಿತು. ಆದ್ದರಿಂದ ಗೋವಾ ಉಚಿತ ಸ್ತನ ಕ್ಯಾನ್ಸರ್ ಲಸಿಕೆ ನೀಡುವ ಮೊದಲ ರಾಜ್ಯವಾಗಿದೆ’ ಎಂದು ಆರೋಗ್ಯ ಸಚಿವ ರಾಣೆ ಘೋಷಿಸಿದರು.
ಮುಂದಿನ 16 ತಿಂಗಳಲ್ಲಿ ಗೋವಾದಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಿಸಲಾಗುವುದು ಮತ್ತು ಅದರ ಗುತ್ತಿಗೆದಾರರನ್ನು ಸಹ ನೇಮಿಸಲಾಗಿದೆ ಎಂದು ರಾಣೆ ಹೇಳಿದರು.
ಟಾಟಾ ಮೆಮೋರಿಯಲ್ ಸೂಚಿಸಿದಂತೆ ಈ ಯೋಜನೆಯ ವಿನ್ಯಾಸವನ್ನು ಮಾತ್ರ ಮಾರ್ಪಡಿಸಬೇಕಾಗಿದೆ. ಅವುಗಳನ್ನು ಮಾಡಲಾಗುವುದು. ಈ ಸಂದರ್ಭದಲ್ಲಿ ಆರೋಗ್ಯ ಸಚಿವರು ಕ್ಯಾನ್ಸರ್ ಒಪಿಡಿಗೆ ಭೇಟಿ ನೀಡಿ ಅಲ್ಲಿನ ರೋಗಿಗಳನ್ನು ವಿಚಾರಿಸಿದರು. ಅಲ್ಲದೆ ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದರು.
ರಾಜ್ಯದಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಒಂದು ಲಕ್ಷ ಮಹಿಳೆಯರ ಸ್ಕ್ರೀನಿಂಗ್ ಪರೀಕ್ಷೆ ಮುಗಿದಿದೆ. ಒಂದು ಲಕ್ಷ ಮಹಿಳೆಯರಲ್ಲಿ ಎರಡೂವರೆ ಸಾವಿರ ಮಹಿಳೆಯರಿಗೆ ಕ್ಯಾನ್ಸರ್ ತರಹದ ಗಡ್ಡೆಗಳು ಕಂಡು ಬಂದಿದ್ದು, ಉಚಿತವಾಗಿ ಕ್ಯಾನ್ಸರ್ ಚುಚ್ಚುಮದ್ದು ನೀಡಲು ನಿರ್ಧರಿಸಲಾಗಿದೆ. ಕ್ಯಾನ್ಸರ್ ತಡೆಗಟ್ಟಲು ಆರೋಗ್ಯ ಇಲಾಖೆ ಮುಂದಾಗಿದೆ. ಅದರಂತೆ ನಿರಂತರ ಪ್ರಯತ್ನಗಳು ನಡೆಯುತ್ತಿದ್ದು, ಮೂರ್ತ ರೂಪವನ್ನೂ ಪಡೆಯುತ್ತಿದೆ. ಗೋವಾದಲ್ಲಿ ಕ್ಯಾನ್ಸರ್ ಆಸ್ಪತ್ರೆ ಇರುವುದು ದೊಡ್ಡ ಸಾಧನೆ. ಇಲ್ಲಿ ದೇಶ-ವಿದೇಶಗಳ ತಜ್ಞ ವೈದ್ಯರು ರೋಗಿಗಳ ಸೇವೆ ಮಾಡಲಿದ್ದಾರೆ ಎಂದರು.