ಪಣಜಿ: ಕೆಲ ದಿನಗಳ ಹಿಂದೆ ಗೋವಾದ ಕೊಲ್ವಾದಲ್ಲಿ ಸಾಕು ನಾಯಿಗೆ ಕುದಿಯುವ ಬಿಸಿ ನೀರು ಸುರಿದ ಘಟನೆ ನಡೆದಿತ್ತು. ಈ ಅಮಾನವೀಯ ಕೃತ್ಯವನ್ನು ಖಂಡಿಸಿ ಪ್ರಾಣಿ ಪ್ರಿಯರು ಮತ್ತು ಸಾಮಾಜಿಕ ಮಾಧ್ಯಮಗಳು ತೀವ್ರವಾಗಿ ಪ್ರತಿಕ್ರಿಯಿಸಿವೆ.
ಇದೇ ರೀತಿ ಇದೀಗ ಮತ್ತೊಂದು ಪ್ರಕರಣ ಫೋಂಡಾ ತಾಲೂಕಿನಲ್ಲಿ ನಡೆದಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಸಾಕು ಬೆಕ್ಕೊಂದು ಮನೆಯ ಕೌಟುಂಬಿಕ ಕಲಹದಿಂದ ಗಂಭೀರವಾಗಿ ಗಾಯಗೊಂಡಿದೆ.
ಸಿಲ್ವಾ ನಗರದ ನಿವಾಸಿ ಅಲ್ಫಿಯಾ ರೇಗೊ ತನ್ನ ಅತ್ತೆ (ರೋಸಿ ರೇಗೊ) ವಿರುದ್ಧ ಸಿಟ್ಟಿನಲ್ಲಿ ಪರ್ಷಿಯನ್ ಬೆಕ್ಕಿನ ತಲೆ ಮತ್ತು ಬಾಯಿಯನ್ನು ಗಾಯಗೊಳಿಸಿದ್ದಕ್ಕಾಗಿ ಫೋಂಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅತ್ತೆ ಬೆಕ್ಕಿನ ಮೇಲಿನ ಕೋಪ ತಳೆದು ವಿನಾಕಾರಣ ಹೊಡೆದಿದ್ದು, ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ದೂರಿನನ್ವಯ ಫೋಂಡಾ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರತೀಕ್ ಭಟ್ ಅವರು ಅತ್ತೆ ರೋಸಿ ವಿರುದ್ಧ ಪ್ರಿವೆನ್ಶನ್ ಆಫ್ ಕ್ರೌಲ್ಟಿ ಟು ಅನಿಮಲ್ಸ್ ಆಕ್ಟ್ 1960 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.