ಪಣಜಿ: ಒಬ್ಬ ದಿನಗೂಲಿ ನೌಕರ ಗರಿಷ್ಠವೆಂದರೆ ಏನು ಮಾಡಬಹುದು? ಆತ ಒಂದು ರೊಬೋಟ್ ಅನ್ನೇ ಸೃಷ್ಟಿಸಬಲ್ಲ, ವಿಜ್ಞಾನಿಗಳೇ ಕೌತುಕಪಡಬಹುದಂತದ್ದನ್ನು ಮಾಡಬಲ್ಲ! ಇದಕ್ಕೊಂದು ಸಾಕ್ಷಿ ಗೋವಾದಲ್ಲಿ ಸಿಕ್ಕಿದೆ.
ದಕ್ಷಿಣ ಗೋವಾದ ಪೊಂಡಾ ತಾಲೂಕಿನ, ಬೆಥೋರಾ ಹಳ್ಳಿಯ ದಿನಗೂಲಿ ನೌಕರ ಬಿಪಿನ್ ಕದಮ್ ಮನೆತುಂಬಾ ಕಷ್ಟ. ಅವರಿಗೆ 14 ವರ್ಷ ಮಗಳಿದ್ದಾರೆ.
ಆಕೆಗೆ ಸ್ವತಂತ್ರವಾಗಿ ಊಟ ಮಾಡಲು ಆಗುವುದಿಲ್ಲ. ಕಾರಣ ಕೈ ಚಲಿಸುವುದಿಲ್ಲ. 2 ವರ್ಷದ ಹಿಂದೆ ಪತ್ನಿಯೂ ಹಾಸಿಗೆ ಹಿಡಿದಿದ್ದಾರೆ. ಮಗಳಿಗೆ ಊಟ ಮಾಡಿಸಲು ಆಗುತ್ತಿಲ್ಲವೆಂದು ಒಂದೇ ಸಮನೆ ಅಳುತ್ತಿದ್ದರು. ಅದನ್ನು ನೋಡಿ ಬಿಪಿನ್ ಏನಾದರೂ ಮಾಡಬೇಕೆಂದು ಯೋಚಿಸಿದರು.
ಅಂತಹದ್ದೊಂದು ರೊಬೋಟ್ ಹುಡುಕಿದರೂ ಸಿಗಲಿಲ್ಲ. ಕಡೆಗೆ ತಮ್ಮ ದಿನದ 12 ಗಂಟೆ ದುಡಿಮೆಯ ನಂತರ, ರೊಬೋಟ್ ಸೃಷ್ಟಿಸಲು ತಾವೇ ಕುಳಿತರು. ಆನ್‌ಲೈನ್‌ನಲ್ಲಿ ಹುಡುಕಿ, ಹುಡುಕಿ ಸತತ 4 ತಿಂಗಳು ಪರಿಶ್ರಮಪಟ್ಟು ಒಂದು ರೊಬೋಟ್ ಕಂಡುಹಿಡಿದರು.
ಅದು ಮಗಳು ಏನು ಹೇಳುತ್ತಾಳ್ಳೋ, ಅದನ್ನು ತಾನೇ ಬಾಯಿಗಿಡುತ್ತದೆ. ಇದನ್ನು ನೋಡಿ ಗೋವಾ ಸರ್ಕಾರಿ ನಾವೀನ್ಯತಾ ಆಯೋಗ ಶಹಬ್ಟಾಶ್ ಅಂದಿದೆ. ಮಾ ರೊಬೋಟ್ ಎಂದು ಕರೆಸಿಕೊಳ್ಳುತ್ತಿರುವ ಇದನ್ನು ಜಾಗತಿಕವಾಗಿ ಮಾರುವ ಯೋಜನೆಯೊಂದು ಬಿಪಿನ್ ಮುಂದಿದೆ.