ಧಾರವಾಡ: ಮಹದಾಯಿ ಇತ್ಯರ್ಥಕ್ಕೆ ಗೋವಾ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ. ಗೋವಾದ ಬಿಜೆಪಿ ಮುಖ್ಯಮಂತ್ರಿ ಮಾತುಕತೆಗೆ ಒಪ್ಪಿದರೆ, ಕಾಂಗ್ರೆಸ್ ಧರಣಿ ಮಾಡುತ್ತಿದ್ದು, ಇದು ನಿಲ್ಲಬೇಕಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಮಹದಾಯಿ ವಿಷಯದಲ್ಲಿ ಬಿಜೆಪಿ ನಿಲುವು ಒಂದೇ ಆಗಿದೆ. ಆದರೆ ಕಾಂಗ್ರೆಸ್ ನಾಯಕರ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು. ಮಹದಾಯಿ ವಿಚಾರದಲ್ಲಿ ಸರ್ಕಾರಗಳ ನಡುವಿನ ಪ್ರಶ್ನೆಯಾಗಿರದೆ ಎರಡು ರಾಷ್ಟ್ರೀಯ ಪಕ್ಷಗಳ ಪ್ರಶ್ನೆಯಾಗಿದೆ. ಸಮಸ್ಯೆ ಇತ್ಯರ್ಥಕ್ಕೆ ಗೋವಾ ಕಾಂಗ್ರೆಸ್ ಸುಮ್ಮನಿರಬೇಕು ಎಂದರು.
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕೆ ಮಾಡುವುದನ್ನು ಬಿಟ್ಟು ತಮ್ಮ ನಾಯಕರಿಗೆ ಸುಮ್ಮನಿರಲು ಹೇಳಿದರೆ ಐದು ನಿಮಿಷದಲ್ಲಿ ಸಮಸ್ಯೆ ಬಗೆಹರಿಯಲಿದೆ. ಮಹದಾಯಿ ವಿಷಯದಲ್ಲಿ ಗೋವಾ ಕಾಂಗ್ರೆಸ್ ವಿರೋಧ ಮಾಡುತ್ತಲೇ ಬಂದಿದೆ. ಗೋವಾ ಸಿಎಂ ಮಾತುಕತೆಗೆ ಸಿದ್ಧರಿದ್ದಾರೆ. ಇಂದಲ್ಲ, ನಾಳೆ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದಿಂದ ನೋಟಿಫಿಕೇಶನ್ ಹೊರಡಿಸಲಿದೆ ಎಂದರು.
ಯುಪಿಎ ಸರ್ಕಾರದ ಹತ್ತು ವರ್ಷ ಆಡಳಿತದಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ಮಲಗಿದ್ದರಾ? ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ಅವರಿಗೆ ಗೊತ್ತಾಗಲಿಲ್ಲವೇ? ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂಬುದು ನಮ್ಮ ಆಗ್ರಹವೂ ಆಗಿದೆ. ಸಿದ್ದರಾಮಯ್ಯ ಅವರಿಗೆ ತಲೆ ಇದೆಯೋ ಇಲ್ಲವೋ ಗೊತ್ತಾಗುತ್ತಿಲ್ಲ. ಇದೇ ಸಿದ್ದರಾಮಯ್ಯ ಹಿಂದೆ ಇಂದಿರಾಗಾಂಧಿ ಅವರನ್ನು ಸರ್ವಾಧಿಕಾರಿ ಎಂದಿದ್ದರು. ಈಗ ಏನು ಹೇಳುತ್ತಾರೆ. ಸಿದ್ದರಾಮಯ್ಯ ಈ ಹಿಂದೆ ಕಾಂಗ್ರೆಸ್ ವಿರುದ್ಧ ಮಾತನಾಡಿದ ದಾಖಲೆಗಳನ್ನು ಸ್ವಲ್ಪ ನೋಡಲಿ. ತಮ್ಮ ಹಿಂದಿನ ಹೇಳಿಕೆ ಅವಲೋಕಿಸಿದರೆ ಯಾರು ಸರ್ವಾಧಿಕಾರಿ ಎಂಬುದು ಗೊತ್ತಾಗಲಿದೆ ಎಂದರು.