ಪಣಜಿ : 40 ಸದಸ್ಯ ಬಲದ ಗೋವಾ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 17 ಸ್ಥಾನಗಳನ್ನು ಗೆದ್ದು ಅತೀ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಪಕ್ಷ ಮೂಡಿಬಂದಿರುವ ಹೊರತಾಗಿಯೂ ಸರಕಾರ ರಚಿಸುವಲ್ಲಿ ಪಕ್ಷವು ವಿಫಲವಾಗಿರುವುದಕ್ಕೆ ಪಕ್ಷದ ಉನ್ನತ ನಾಯಕತ್ವವನ್ನು ಕಾಂಗ್ರೆಸ್ ಶಾಸಕರ ಒಂದು ಗುಂಪು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
“ಅತೀ ದೊಡ್ಡ ಪಕ್ಷವಾಗಿ ಆಯ್ಕೆಯಾಗಿ ಬಂದಿರುವ ಹೊರತಾಗಿಯೂ ಸರಕಾರ ರಚಿಸುವಲ್ಲಿನ ಪರಿಸ್ಥಿತಿಯನ್ನು ಕ್ಷಿಪ್ರವಾಗಿ ನಿಭಾಯಿಸುವಲ್ಲಿ ಕಾಂಗ್ರೆಸ್ ಪಕ್ಷದ ಉನ್ನತ ನಾಯಕತ್ವ ವಿಫಲವಾಗಿರುವುದು ನಿಜಕ್ಕೂ ದುರದೃಷ್ಟಕರ. ಇದರಿಂದ ನನಗೆ ತೀರ ನಿರಾಶೆಯಾಗಿದೆ ಮಾತ್ರವಲ್ಲ ನಾನು ತೀವ್ರವಾಗಿ ವಿಚಲಿತನಾಗಿದ್ದೇನೆ. ಅತೀ ದೊಡ್ಡ ಪಕ್ಷವಾಗಿ ಜನರಿಂದ ಚುನಾಯಿತರಾಗಿರುವುದರಿಂದ ಸರಕಾರ ರಚಿಸುವ ಮೊದಲ ಹಕ್ಕು ನಮ್ಮದಾಗಿದೆ. ಆದರೆ ಈ ಬಗ್ಗೆ ಸಕಾಲದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಸೋತಿರುವ ಪಕ್ಷದ ಉನ್ನತರ ಕಾರ್ಯಶೈಲಿಯಿಂದ ನಾನು ತುಂಬ ನಿರಾಶನಾಗಿದ್ದೇನೆ’ ಎಂದು ವಲಪೋಯಿ ಕ್ಷೇತ್ರದಿಂದ ಗೆದ್ದುಬಂದಿರುವ ಕಾಂಗ್ರೆಸ್ ಶಾಸಕ ವಿಶ್ವಜಿತ್ ರಾಣೆ ಮಾಧ್ಯಮಕ್ಕೆ ಹೇಳಿದ್ದಾರೆ.
40 ಸದಸ್ಯ ಬಲದ ಗೋವೆಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 17, ಬಿಜೆಪಿಗೆ 13 ಮತ್ತು ಇತರರಿಗೆ 10 ಸ್ಥಾನಗಳು ಪ್ರಾಪ್ತವಾಗಿವೆ.
ಎಂಜಿಪಿ ಮತ್ತು ಗೋವಾ ಫಾರ್ವರ್ಡ್ ಪಕ್ಷದ ಬೆಂಬಲ ಪಡೆಯುವಲ್ಲಿ ಸಫಲವಾಗಿರುವ ಬಿಜೆಪಿ ಈಗಾಗಲೇ ತಾನು ಸರಕಾರ ರಚಿಸುವುದಾಗಿ ಹೇಳಿಕೊಂಡಿದ್ದು, ರಾಜ್ಯಪಾಲರು ಗೋವೆಯ ನೂತನ ಮುಖ್ಯಮಂತ್ರಿಯಾಗಿ ಮನೋಹರ್ ಪರ್ರೀಕರ್ ಅವರನ್ನು ನೇಮಿಸಿದ್ದಾರೆ.
ನಾಳೆ ಮಂಗಳವಾರ ಪರ್ರೀಕರ್ ಅವರಿಗೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಲಿದ್ದಾರೆ. ಅಲ್ಲಿಂದ 15 ದಿನಗಳ ಒಳಗೆ ಅವರು ಸದನದಲ್ಲಿ ತಮ್ಮ ಬಹುಮತವನ್ನು ಸಾಬೀತು ಪಡಿಸಬೇಕಿದೆ.