ಪಣಜಿ: ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಶುಕ್ರವಾರ ತಮ್ಮ ಸಂಪುಟ ಸಭೆ ನಡೆಸಿ ಸೋಮವಾರ ಸದನವನ್ನು ವಿಸರ್ಜಿಸಲು ನಿರ್ಧರಿಸಿದ್ದಾರೆ.
ಫೆ.14 ರಂದು ನಡೆದ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದ್ದು ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದೆ. ಮುಖ್ಯಮಂತ್ರಿ ಪ್ರಮೋದ ಸಾವಂತ್ ನೇತೃತ್ವದಲ್ಲಿ ಸೋಮವಾರ ಸದನವನ್ನು ವಿಸರ್ಜಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಪಣಜಿಯಲ್ಲಿ ಸುದ್ಧಿಗಾರರಿಗೆ ಮಾಹಿತಿ ನೀಡಿದರು.
ಪಕ್ಷದ ಅಭೂತಪೂರ್ವ ವಿಜಯಕ್ಕಾಗಿ ನಾವು ಜನರಿಗೆ ಧನ್ಯವಾದ ಹೇಳಲು ಸಭೆ ಸೇರಿದ್ದೆವು. ಸಭೆಯಲ್ಲಿ ಜನರಿಗೆ ಕೃತಜ್ಞತೆ ಸಲ್ಲಿಸಲು ನಿರ್ಣಯ ಮಂಡಿಸಲಾಯಿತು ಎಂದು ವಿಶ್ವಜಿತ್ ರಾಣೆ ಮಾಹಿತಿ ನೀಡಿದರು.
40 ಸದಸ್ಯತ್ವ ಬಲದ ಗೋವಾ ವಿಧಾನಸಭೆಯಲ್ಲಿ ಬಿಜೆಪಿ-20 ಮತ್ತು ಪಕ್ಷೇತರರು-3, ಎಂಜಿಪಿ-2 ಸೇರಿ ಒಟ್ಟೂ 25 ಸದಸ್ಯತ್ವ ಬಲ ಹೊಂದಿದ್ದರೂ ಕೂಡ ನೂತನ ಸರ್ಕಾರ ರಚನೆಗೆ ಬಿಜೆಪಿ ಇನ್ನೂ ಹಕ್ಕು ಮಂಡಿಸಿಲ್ಲ.
ಬಿಜೆಪಿ ಗೆಲುವಿನ ಬಳಿಕ ಇದೀಗ ಕೇಂದ್ರ ವೀಕ್ಷಕರು ಗೋವಾಕ್ಕೆ ಆಗಮಿಸಲಿದ್ದು ಬಳಿಕ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಮೊದಲು ಕೇಂದ್ರ ಸಂಸದೀಯ ಮಂಡಳಿ ಸಭೆ ನಡೆಯಲಿದೆ. ನಂತರ ರಾಜ್ಯದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ರಾಜ್ಯಪಾಲರ ಬಳಿ ತೆರಳುತ್ತೇವೆ ಎಂದು ಬಿಜೆಪಿ ಗೋವಾ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಮಾಹಿತಿ ನೀಡಿದ್ದಾರೆ.