ಹೊಸದಿಲ್ಲಿ: ಗೋವಾ ಮುಖ್ಯಮಂತ್ರಿ ಮನೋಹರ ಪಾರೀಕರ್ ಅವರು ಮತ್ತೆ ಅಸ್ವಸ್ಥಗೊಂಡಿದ್ದು, ಚಿಕಿತ್ಸೆಗಾಗಿ ದಿಲ್ಲಿಯ ಅಖೀಲ ಭಾರತೀಯ ವೈದ್ಯಕೀಯ ವಿಜ್ಞಾನ (ಏಮ್ಸ್) ಆಸ್ಪತ್ರೆಗೆ ದಾಖಲಾಗಿದ್ದಾರೆ. ನುರಿತ ವೈದ್ಯರ ತಂಡವೊಂದು ಅವರನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಿದೆ ಎಂದು ಏಮ್ಸ್ ಆಡಳಿತ ತಿಳಿಸಿದೆ.
ಮೇದೋಜೀರಕ ಗ್ರಂಥಿ ಸಮಸ್ಯೆಯಿಂದ ಬಳಲುತ್ತಿರುವ ಪಾರೀಕರ್, ಕೆಲ ದಿನಗಳ ಹಿಂದಷ್ಟೇ ಅಮೆರಿಕಕ್ಕೆ ಚಿಕಿತ್ಸೆಗೆ ತೆರಳಿ ವಾಪಸ್ಸಾಗಿದ್ದರು. ಇದೇ ವರ್ಷದ ಆರಂಭ ದಲ್ಲಿ ಅಮೆರಿಕದಲ್ಲಿ ಮೂರು ತಿಂಗಳ ಕಾಲ ಚಿಕಿತ್ಸೆಗೊಳಗಾಗಿದ್ದರು.
ಅಧಿಕಾರ ಹಸ್ತಾಂತರದ ಕೂಗು: ಕ್ಷೀಣಿಸು ತ್ತಿರುವ ಪಾರೀಕರ್ ಆರೋಗ್ಯ ಗೋವಾ ರಾಜಕೀಯ ವಲಯದಲ್ಲಿ ಬಿರುಸಿನ ಚಟುವಟಿಕೆಗಳಿಗೆ ನಾಂದಿ ಹಾಡಿದೆ. ಶನಿವಾರ ಬೆಳಗ್ಗೆ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ, ಮಹಾರಾಷ್ಟ್ರವಾದಿ ಗೋಮಂಥಕ್ ಪಾರ್ಟಿ (ಎಂಜಿಪಿ) ಅಧ್ಯಕ್ಷ ದೀಪಕ್ ಧವಳೀಕರ್, “”ಪಾರೀಕರ್ ಅವರ ಅನುಪಸ್ಥಿತಿಯಿಂದಾಗಿ ಈಗಾಗಲೇ ಹಲವಾರು ತಿಂಗಳುಗಳಿಂದ ಸುಲಲಿತ ಆಡಳಿತಕ್ಕೆ ತೊಂದರೆಯಾಗಿದೆ. ಹಾಗಾಗಿ, ಸದ್ಯದ ಮಟ್ಟಿಗೆ ಅಧಿಕಾರ ಸಂಪುಟದ ಹಿರಿಯರೊಬ್ಬರಿಗೆ ಹಸ್ತಾಂತರವಾದರೆ ಒಳ್ಳೆಯದು” ಎಂದಿದ್ದಾರೆ.
ಹಾಗಾದರೆ, ಸಂಪುಟದಲ್ಲಿ ಹಿರಿಯ ಸಚಿವರಾಗಿರುವ ದೀಪಕ್ ಅವರ ಸಹೋದರ ಸುದಿನ್ ಧವಳೀಕರ್ ಅವರಿಗೆ ಅಧಿಕಾರ ಹಸ್ತಾಂತರವಾಗಲು ಬಯಸುತ್ತೀರಾ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ಅವರು, “”ಈ ವಿಚಾರವನ್ನು ಬಿಜೆಪಿಯೇ ಹೇಳಬೇಕು” ಎಂದಿದ್ದಾರೆ. ಸುದಿನ್ ಅವರು ಗೋವಾ ರಾಜ್ಯದ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದು, ಪಾರೀಕರ್ ಸಂಪುಟದ ಅತಿ ಹಿರಿಯ ಸಚಿವರೆನಿಸಿದ್ದಾರೆ.