ಪಣಜಿ: ಗೋವಾದ ಕಲಂಗುಟ್ ಬೀಚ್‍ನಲ್ಲಿ ಪ್ರವಾಸಿ ಬ್ಯಾಗ್‍ಗಳನ್ನು ಕಳ್ಳತನ ಮಾಡುತ್ತಿದ್ದ ಕರ್ನಾಟಕದ ಮೂವರನ್ನು ಪ್ರವಾಸಿ ಪೊಲೀಸರು ಬಂಧಿಸಿದ ಘಟನೆ ಸೋಮವಾರ ನಡೆದಿದೆ.
ಆರೋಪಿಗಳಿಂದ ಮೂರು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಂಕಿತ ಆರೋಪಿಗಳಾದ ಮಣಿಕಂಠ, ಕುಮಾರೀಶ್ ಮತ್ತು ಗುರುಪ್ರಸಾದ್ ಕಾಳೆ (ಎಲ್ಲರೂ ಕರ್ನಾಟಕ ಮೂಲದವರು) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಂಜಾಬ್‍ನ ಪ್ರವಾಸಿ ಬಿಪಿನ್ ಗುಪ್ತಾ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ಕಲಂಗುಟ್ ಬೀಚ್‍ಗೆ ಬಂದಿದ್ದರು. 4,500 ನಗದು ಇದ್ದ ತಮ್ಮ ಪರ್ಸ್ , ಎರಡು ಮೊಬೈಲ್ ಫೋನ್ ಮತ್ತು ಕೈಚೀಲಗಳನ್ನು ಕಡಲತೀರದಲ್ಲಿ ಬಿಟ್ಟು ಎಲ್ಲರೂ ನೀರಿಗೆ ಇಳಿದಿದ್ದಾರೆ. ಸಮುದ್ರದ ನೀರಿನಲ್ಲಿ ಆಟವಾಡಿದ ನಂತರ ತಮ್ಮ ಚೀಲಗಳನ್ನು ಇಟ್ಟುಕೊಂಡಿದ್ದ ಸ್ಥಳಕ್ಕೆ ವಾಪಸ್ಸು ಬಂದಾಗ ಅಲ್ಲಿ ಇದ್ದ ಬ್ಯಾಗ್ ನಾಪತ್ತೆಯಾಗಿತ್ತು. ನಂತರ ಸಮೀಪದ ಪ್ರವಾಸಿ ಪೊಲೀಸರಿಗೆ ಬ್ಯಾಗ್ ಕಳ್ಳತನವಾಗಿದೆ ಎಂದು ತಿಳಿಸಿದರು.
ಪೊಲೀಸ್ ಪೇದೆಗಳಾದ ಚಂದ್ರು ನೆಗ್ಲೂರ್ ಮತ್ತು ಸರ್ವೇಶ್ ಮಾಂಡ್ರೇಕರ್ ಅವರು ಮೂವರು ವ್ಯಕ್ತಿಗಳು ದಡದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಕಂಡುಹಿಡಿದರು. ಅವರನ್ನು ಬಂಧಿಸಿ ಪ್ರವಾಸಿ ಪೋಲಿಸ್ ಠಾಣೆಗೆ ಕರೆದೊಯ್ದಿದ್ದಾರೆ.
ದಾಳಿ ವೇಳೆ ಆರೋಪಿಗಳಿಂದ ಒಟ್ಟು ಮೂರು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಎರಡು ಮೊಬೈಲ್‍ಗಳು ಬಿಪಿನ್ ಗುಪ್ತಾ ಅವರಿಗೆ ಸೇರಿದ್ದವು. ಆದರೆ, ಪೊಲೀಸರಿಗೆ ಬ್ಯಾಗ್ ನಲ್ಲಿ 4,500 ರೂ.ನಗದು ಪತ್ತೆಯಾಗಿಲ್ಲ ಎನ್ನಲಾಗಿದೆ.
ಪ್ರವಾಸಿ ಪೊಲೀಸ್ ಇಲಾಖೆಯ ಇನ್ಸ್ ಪೆಕ್ಟರ್ ಜತಿನ್ ಪೋತದಾರ್ ಅವರು ಮೂವರು ಶಂಕಿತರನ್ನು ಕಲಂಗುಟ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ದೂರುದಾರ ಪ್ರವಾಸಿ ದೂರು ನೀಡಲು ನಿರಾಕರಿಸಿದ್ದರಿಂದ, ಪೊಲೀಸರು ಆರೋಪಿಗಳ ವಿರುದ್ಧ ನಿಷೇಧಾಜ್ಞೆ ಕಾಯ್ದೆ ಸಿಆರ್‍ಪಿಸಿ ಸೆಕ್ಷನ್ 41 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಇನ್‍ಸ್ಪೆಕ್ಟರ್ ಪರೇಶ್ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್‍ಪೆಕ್ಟರ್ ಹರೀಶ್ ವಯಾಂಗಣಕರ್ ಅವರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.