ಪಣಜಿ: ಗೋವಾ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ 8 ತಿಂಗಳು ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ನ ದೆಹಲಿ ನಾಯಕರು ಗೋವಾದತ್ತ ಲಕ್ಷ್ಯ ಕೇಂದ್ರೀಕರಿಸಿದ್ದಾರೆ.
ಚುನಾವಣಾ ಪೂರ್ವ ಸಿದ್ಧತೆಯ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜುಲೈ 11 ಮತ್ತು 12 ರಂದು ಗೋವಾಕ್ಕೆ ಆಗಮಿಸಲಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ನಾಯಕ ಕೆ.ಸಿ ವೇಣುಗೋಪಾಲ್ ರವರು ಮುಂದಿನ ವಾರದಲ್ಲಿ ಗೋವಾಕ್ಕೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಬಿಜೆಪಿಗೆ ಯಾರು ಬೇಕಾದರೂ ಬರಬಹುದು, ಬಂದರೆ ಸ್ವಾಗತಿಸುತ್ತೇವೆ: ಮಾಧುಸ್ವಾಮಿ
ಪಣಜಿಯಲ್ಲಿ ನಡೆದ ಬಿಜೆಪಿ ಕೋರ್ ಕಮೀಟಿ ಸಭೆಯಲ್ಲಿ ಪಕ್ಷದ ಪ್ರದೇಶಾಧ್ಯಕ್ಷ ಸದಾನಂದ ತಾನಾವಡೆ ರವರು- ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜುಲೈ 11 ಮತ್ತು 12 ರಂದು ಗೋವಾಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂಬ ಮಾಹಿತಿ ನೀಡಿದರು. ಎರಡು ದಿನಗಳ ಗೋವಾ ಭೇಟಿಯಲ್ಲಿ ಬಿಜೆಪಿ ಬೂತ್ ಕಮೀಟಿ, ಮಂಡಳ, ಜಿಲ್ಲಾ ಮತ್ತು ರಾಜ್ಯ ಕಾರ್ಯಕಾರಿಣಿ ಬೈಠಕ್ ನಡೆಸಿ ಪಕ್ಷವನ್ನು ಬಲಬಡಿಸುವ ಕಾರ್ಯ ಕೈಗೊಳ್ಳಲಿದ್ದಾರೆ.
ಇಷ್ಟೇ ಅಲ್ಲದೆಯೇ ಕಾಂಗ್ರೆಸ್ ರಾಷ್ಟ್ರೀಯ ನಾಯಕ ಕೆ.ಸಿ ವೇಣುಗೋಪಾಲ್ ಮುಂದಿನ ವಾರದಲ್ಲಿ ಗೋವಾಕ್ಕೆ ಆಗಮಿಸುವ ಸಾಧ್ಯತೆಯಿದೆ. ಕಾಂಗ್ರೇಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರು ಮುಂದಿನ ತಿಂಗಳು ಗೋವಾಕ್ಕೆ ಆಗಮಿಸುವ ಸಾಧ್ಯತೆಯಿದೆ ಎಂದು ಕಾಂಗ್ರೇಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.