ಪಣಜಿ: ಗೋವಾದ ಪರ್ಯೆ ಕ್ಷೇತ್ರವು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಪ್ರತಾಪಸಿಂಹ ರಾಣೆ ರವರು ವಿಧಾನಸಭಾ ಚುನಾವಣೆಯಲ್ಲಿ 11 ಬಾರಿ ಆಯ್ಕೆಯಾಗಿದ್ದ ಕ್ಷೇತ್ರವಾಗಿದೆ. 1972 ರಿಂದ 2017 ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಾಪಸಿಂಹ ರಾಣೆ ಸತತವಾಗಿ ಆಯ್ಕೆಯಾಗಿದ್ದರು.
ಆದರೆ ಪ್ರಸಕ್ತ ಬಾರಿ ಪ್ರತಾಪಸಿಂಹ ರಾಣೆ ರವರ ಸೊಸೆ ಡಾ. ದಿವ್ಯಾ ರಾಣೆ ರವರು ಬಿಜೆಪಿಯಿಂದ ಇದೇ ಕ್ಷೇತ್ರದಿಂದ ಮಾವನ ವಿರುದ್ಧ ಕಣಕ್ಕಿಳಿದಿದ್ದರಿಂದ ಕಾರಣಾಂತರಗಳಿಂದ ಪ್ರತಾಪಸಿಂಹ ರಾಣೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಇದೀಗ ಈ ಕ್ಷೇತ್ರದಲ್ಲಿ ಪ್ರಪ್ರಥಮವಾಗಿ ಕಮಲ ಅರಳುವ ಎಲ್ಲ ಲಕ್ಷಣಗಳು ಕಂಡುಬರುತ್ತಿದೆ.
ಪ್ರಸಕ್ತ ಚುನಾವಣೆಯಲ್ಲಿ ಪ್ರತಾಪಸಿಂಹ ರಾಣೆ ಪರ್ಯೆ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಫರ್ಧಿಸಿದ್ದರು. ಕಾಂಗ್ರೆಸ್ ಪಕ್ಷ ಕೂಡ ಅವರಿಗೆ ಟಿಕೆಟ್ ನೀಡಿತ್ತು. ಆದರೆ ಪರ್ಯೆ ಕ್ಷೇತ್ರದಲ್ಲಿ ಸಚಿವ ವಿಶ್ವಜಿತ್ ರಾಣೆ ರವರ ಪತ್ನಿ ದಿವ್ಯಾ ರಾಣೆ ಬಿಜೆಪಿಯಿಂದ ಕಣಕ್ಕಿಳಿದಿದ್ದರಿಂದ ಕಾಂಗ್ರೆಸ್ ಪಕ್ಷದಿಂದ ಸ್ಫರ್ಧಿಸಿದ್ದ ಪ್ರತಾಪಸಿಂಹ ರಾಣೆ ಕಣದಿಂದ ಹಿಂದೆ ಸರಿಯುವಂತಾಯಿತು. ಆದರೆ ಕಾಂಗ್ರೆಸ್ ಪಕ್ಷದಿಂದ ರಂಜಿತ್ ರಾಣೆ ಸ್ಫರ್ಧಿಸಿದ್ದರೂ ಕೂಡ ಈ ಕ್ಷೇತ್ರದಲ್ಲಿ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಯ ದಿವ್ಯಾ ರಾಣೆ ಜಯಗಳಿಸುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿದೆ.
ಪರ್ಯೆ ಕ್ಷೇತ್ರದಿಂದ ಶಿವಸೇನೆಯಿಂದ ಗುರುದಾಸ್ ಗಾಂವಕರ್, ಆರ್.ಜಿ ಪಕ್ಷದಿಂದ ಸಮೀರ್ ಸಾತಾರಕರ್, ಟಿಎಂಸಿ ಹಾಗೂ ಎಂಜಿಪಿ ಮೈತ್ರಿ ಕೂಟದಿಂದ ಗಣಪತ್ ಗಾಂವಕರ್ ಕಣದಲ್ಲಿದ್ದಾರೆ. ಆದರೆ ಸದ್ಯ ಈ ಕ್ಷೇತ್ರದಲ್ಲಿ ಬಿಜೆಪಿಯ ಡಾ. ದಿವ್ಯಾ ರಾಣೆ ಮೇಲುಗೈ ಸಾಧಿಸುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ.