Advertisement
ಕಳೆದ ಭಾನುವಾರ ಕಾಂಗ್ರೆಸ್ ಶಾಸಕರ ಪಕ್ಷಾಂತರ ಮಾಡುವ ಯತ್ನ ನಡೆದ ನಂತರ ಪಕ್ಷದ ವರಿಷ್ಠರು ಮುಕುಲ್ ವಾಸ್ನಿಕ್ ಅವರನ್ನು ಗೋವಾಕ್ಕೆ ಕಳುಹಿಸಿದ್ದರು. ದಿನೇಶ್ ಗುಂಡೂರಾವ್ ಮತ್ತು ಪಾಟ್ಕರ್ ಅವರ ಪ್ರಯತ್ನದ ನಂತರ, ಬಂಡಾಯವು ಅಂತಿಮವಾಗಿ ಶಮನವಾಯಿತು. ಆದರೆ ಅಪಾಯ ಇನ್ನೂ ಇದೆ. ಏಕೆಂದರೆ ಪಕ್ಷದ ಕನಿಷ್ಠ ಐವರು ಶಾಸಕರು ಇನ್ನೂ ಬಿಜೆಪಿ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಈ ಐದು ಜನ ಶಾಸಕರೊಂದಿಗೆ ಇನ್ನು ಮೂವರು ಶಾಸಕರು ಸೇರಿದರೆ ಪಕ್ಷಾಂತರ ಪಕ್ಕಾ ಎಂದೇ ಹೇಳಲಾಗುತ್ತಿದೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲು ಪಕ್ಷ ಶ್ರಮಿಸುತ್ತಿದೆ. ಲೋಬೋ ಅವರನ್ನು ಪ್ರತಿಪಕ್ಷದ ನಾಯಕ ಸ್ಥಾನದಿಂದ ತೆಗೆದು ಹಾಕಿದ ನಂತರ ಇನ್ನೂ ಹೊಸ ನಾಯಕನ ಹೆಸರನ್ನು ಘೋಷಿಸಲಾಗಿಲ್ಲ. ಪ್ರತಿಪಕ್ಷದ ನಾಯಕರ ಸ್ಥಾನಕ್ಕೆ ಮೂವರ ಹೆಸರುಗಳು ಸಭೆಯಲ್ಲಿ ಕೇಳಿ ಬಂದಿದ್ದು, ಅವರಲ್ಲಿ ಒಬ್ಬರು ಶಾಸಕ ಕಾರ್ಲೋಸ್ ಫೆರೇರಾ ರವರು ಎಂದೇ ಹೇಳಲಾಗುತ್ತಿದೆ.
ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಎನ್‍ಡಿಎ ಮೈತ್ರಿಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಗೋವಾದಿಂದ ಕನಿಷ್ಠ 30 ಮತಗಳನ್ನು ಪಡೆಯುತ್ತಾರೆ ಎಂದು ಕೆಲವು ಬಿಜೆಪಿ ನಾಯಕರು ಖಾಸಗಿಯಾಗಿ ಹೇಳಿಕೊಳ್ಳುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷ ಇನ್ನೂ ಪಕ್ಷಾಂತರದ ಭೀತಿಯಲ್ಲಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಕೆಲ ಕಾಂಗ್ರೆಸ್ ಶಾಸಕರು ಕೆಲ ಕಾಲ ಮಾತ್ರ ಕಾಂಗ್ರೇಸ್ ಪಕ್ಷದದಲ್ಲಿ ತಟಸ್ಥರಾಗಿ ಉಳಿದುಕೊಂಡಿದ್ದಾರೆ. ಯಾವುದೇ ಕ್ಷಣದಲ್ಲಿ ಪಕ್ಷಾಂತರ ಮಾಡುವ ಸಾಧ್ಯತೆಯಿದೆ ಎಂಬ ಮಾತು ಕೇಳಿ ಬರುತ್ತಿದೆ.