Advertisement
ವಿಮಾನ ನಿಲ್ದಾಣದ ರೀತಿಯಲ್ಲೇ ಒಂದು ರೈಲು, ಪ್ಲಾಟ್‌ಫಾರಂಗೆ ಆಗಮಿಸುವುದಕ್ಕೂ 15-20 ನಿಮಿಷ ಮೊದಲೇ ಪ್ಲಾಟ್‌ಫಾರಂ ಅನ್ನು ಮುಚ್ಚುವಂಥ ಪ್ರಸ್ತಾವನೆಯನ್ನು ರೈಲ್ವೆ ಇಲಾಖೆ ರೂಪಿಸಿದೆ. ಅಲಹಾಬಾದ್ ಹಾಗೂ ಹುಬ್ಬಳ್ಳಿ ರೈಲ್ವೆ ಸ್ಟೇಷನ್‌ನಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಕಾರ್ಯವಿಧಾನ ರೂಪಿಸಲಾಗಿದೆ. ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಪ್ರಯಾಣಿಕರ ಭದ್ರತಾ ತಪಾಸಣೆ ಮಾಡಲಾಗುತ್ತದೆ. ಸದ್ಯ ವಿಮಾನ ನಿಲ್ದಾಣದಲ್ಲಿ ಒಂದು ಗಂಟೆಗೂ ಹೆಚ್ಚು ಮೊದಲೇ ತೆರಳಬೇಕಿದ್ದು, ಭದ್ರತಾ ತಪಾಸಣೆ ನಡೆಸಿ ನಂತರ ಬೋರ್ಡಿಂಗ್ ಸ್ಥಳಕ್ಕೆ ತೆರಳಲು ಅನುವು ಮಾಡಲಾಗುತ್ತದೆ. ನಿರ್ದಿಷ್ಟ ಬೋರ್ಡಿಂಗ್ ಸಮಯದ ನಂತರ ಆಗಮಿಸಿದವರನ್ನು ವಾಪಸ್ ಕಳುಹಿಸಲಾಗುತ್ತದೆ. ಆದರೆ ರೈಲ್ವೆ ರೂಪಿಸಿರುವ ಯೋಜನೆಯಲ್ಲಿ ಕೇವಲ 20 ನಿಮಿಷ ಮುಂಚಿತವಾಗಿ ರೈಲ್ವೆ ನಿಲ್ದಾಣವನ್ನು ಪ್ರಯಾಣಿಕರು ತಲುಪಬೇಕಿರುತ್ತದೆ.
ಇದಕ್ಕೂ ಮೊದಲು ರೈಲ್ವೆ ನಿಲ್ದಾಣದಲ್ಲಿ ಯಾವ ಯಾವ ಭಾಗದಿಂದ ಜನರು ಆಗಮಿಸುತ್ತಾರೆ ಎಂಬುದನ್ನು ಗುರುತಿಸಿ, ಆ ಎಲ್ಲ ಪ್ರದೇಶಗಳನ್ನೂ ಗೋಡೆ ನಿರ್ಮಾಣ ಮಾಡಿ ಮುಚ್ಚಲಾಗುತ್ತದೆ. ಇನ್ನು ಕೆಲವು ಕಡೆ ಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಜೊತೆಗೆ ತೆರೆಯಬಹುದಾದ ಗೇಟ್‌ಗಳನ್ನೂ ನಿರ್ಮಿಸಿ ಪ್ಲಾಟ್‌ಫಾರ್ಮ್ಗೆ ಮುಖ್ಯ ದ್ವಾರದ ಹೊರತಾಗಿ ಬೇರೆ ದಾರಿಯಿಂದ ಪ್ರವೇಶಿಸಲು ಸಾಧ್ಯವಾಗದಂತೆ ಮಾಡಲಾಗುತ್ತದೆ. ಪ್ರವೇಶ ದ್ವಾರದಲ್ಲಿ ಭದ್ರತಾ ತಪಾಸಣೆ ಮಾಡಲಾಗುತ್ತದೆ. ಜನರು ರೈಲನ್ನೇರಲು ಕೊನೇ ಕ್ಷಣದಲ್ಲಿ ಬಂದು ರೈಲು ತಪ್ಪಿಸಿಕೊಳ್ಳುವುದನ್ನು ಈ ಮೂಲಕ ತಡೆಯಲು ನಿರ್ಧರಿಸಲಾಗಿದೆ. ಭದ್ರತೆಗೆ ಏನೇನಿದೆ?
ಆದರೆ ಈ ಯೋಜನೆಯಿಂದಾಗಿ ಭದ್ರತಾ ಸಿಬ್ಬಂದಿಯ ಸಂಖ್ಯೆ ಹೆಚ್ಚಳವಾಗುವುದಿಲ್ಲ. ಬದಲಿಗೆ ಭದ್ರತೆ ತಪಾಸಣೆಗೆ ಯಂತ್ರಗಳನ್ನು ಹೆಚ್ಚಾಗಿ ಅವಲಂಬಿಸಲಾಗುತ್ತದೆ. ಸಿಸಿಟಿವಿ ಕ್ಯಾಮೆರಾಗಳು, ಅಕ್ಸೆಸ್ ಕಂಟ್ರೋಲ್, ಬ್ಯಾಗ್ ಮತ್ತು ಲಗೇಜ್ ತಪಾಸಣೆ ವ್ಯವಸ್ಥೆ, ಬಾಂಬ್ ಪತ್ತೆ ಮತ್ತು ವಿಲೇವಾರಿ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಅಷ್ಟೇ ಅಲ್ಲ ಫೇಸ್ ರಿಕಾಗ್ನಿಶನ್(ಮುಖ ಗುರುತಿಸುವಂಥ ವ್ಯವಸ್ಥೆ) ಸೌಲಭ್ಯವನ್ನೂ ಅಳವಡಿಸಲಾಗುತ್ತದೆ. ಇದರಿಂದ ಯಾವುದೇ ಅಪರಾಧಿ ರೈಲ್ವೆ ಸ್ಟೇಷನ್‌ಗೆ ಕಾಲಿಟ್ಟರೂ ತಕ್ಷಣ ಈ ತಂತ್ರಜ್ಞಾನವು ಆತನನ್ನು ಗುರುತಿಸುತ್ತದೆ. 2016ರಲ್ಲೇ ರೂಪಿಸಲಾದ ಇಂಟಗ್ರೇಟೆಡ್ ಸೆಕ್ಯುರಿಟಿ ಸಿಸ್ಟಂನ ಅಂಗವಾಗಿ ಇದನ್ನು ಜಾರಿಗೊಳಿಸಲಾಗುತ್ತಿದ್ದು, ಈ ಒಟ್ಟು ಯೋಜನೆಗೆ 385 ಕೋಟಿ ರೂ. ನಿಗದಿಸಲಾಗಿದೆ.
Related Articles
ಎಲ್ಲ ಪ್ರಯಾಣಿಕರನ್ನೂ ವೈಯಕ್ತಿಕ ತಪಾಸಣೆ ಮಾಡುವುದಿಲ್ಲ. ಬದಲಿಗೆ, 8 ಅಥವಾ 10ನೇ ಪ್ರಯಾಣಿಕರನ್ನು ಒಮ್ಮೆ ತಪಾಸಣೆ ಮಾಡಲಾಗುತ್ತದೆ. ಆರಂಭದಲ್ಲಿ ಹುಬ್ಬಳ್ಳಿ ಹಾಗೂ ಅಲಹಾಬಾದ್‌ನಲ್ಲಿ ಇದನ್ನು ಜಾರಿಗೆ ತರಲಾಗುತ್ತದೆ. ನಂತರದ ಹಂತದಲ್ಲಿ 202 ರೈಲ್ವೆ ಸ್ಟೇಷನ್‌ಗಳಲ್ಲೂ ಇದನ್ನು ಜಾರಿಗೊಳಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ.
Advertisement